ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಿಜೆಪಿಯೊಂದಿಗಿನ ಸಖ್ಯಕ್ಕೆ ಅಂತ್ಯ ಹಾಡಿದ್ದಾರೆ.
ಶಿವಮೊಗ್ಗದ ನೂತನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ತಾವು ರಾಜೀನಾಮೆ ಸಲ್ಲಿಸುವುದಾಗಿ ಹೇಳಿದರು. ಅಲ್ಲದೆ, ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಪರಿಷತ್ ಸದಸ್ಯತ್ವದಿಂದಾಗಿ ನಾನು ನಾನಾ ಸಮುದಾಯಗಳಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಆಗಲಿಲ್ಲ. ನಾನು ಕಾನೂನುಗಳು ರೂಪುಗೊಳ್ಳುವ, ಕೆಳಮನೆಯೆಂದೇ ಕರೆಯಲ್ಪಡುವ ವಿಧಾನಸಭೆಗೆ ಪ್ರವೇಶ ಪಡೆಯಲು ಇಚ್ಛಿಸುತ್ತೇನೆ. ಅದೇ ಕಾರಣಕ್ಕಾಗಿ ನಾನು ನನ್ನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಬೇಕಿದೆ. ನಿಯಮಗಳ ಪ್ರಕಾರ, ರಾಜೀನಾಮೆಯನ್ನು ವಿಧಾನ ಪರಿಷತ್ ಸಭಾಪತಿಯವರಾದ ಬಸವರಾಜ ಹೊರಟ್ಟಿಯವರಿಗೆ ನೀಡಬೇಕಿದೆ. ಅವರ ಭೇಟಿಯಾಗಿ ಸಮಯ ಕೇಳಿದ್ದೇನೆ. ಅವರನ್ನು ಭೇಟಿ ಮಾಡಿ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ ಎಂದ ಅವರು, ಟಿಕೆಟ್‌ಗೋಸ್ಕರ ಪಕ್ಷವನ್ನು ಬಿಡುತ್ತಿಲ್ಲ. ಗುರಿ ಸಾಧನೆಗಾಗಿ ಪಕ್ಷ ಬಿಡುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಸೌಕರ್ಯಗಳು ಇದ್ದರೂ ಶಿವಮೊಗ್ಗದಲ್ಲಿ ಬಂಡವಾಳ ಹೂಡಿಕೆಗೆ ಯಾರು ಕೈಗಾರಿಕೋದ್ಯಮಿಗಳು ಬರುತ್ತಿಲ್ಲ. ಈ ಎಲ್ಲಾ ಕಾರಣಕ್ಕಾಗಿ ಸ್ಫರ್ಧೆಯ ನಿರ್ಧಾರ ಮಾಡಿದ್ದೇನೆ. ನನಗೆ ಗೊತ್ತಿದೆ. ನಾನು ಸಾಮಾನ್ಯರ ಎದುರು ಸ್ಫರ್ಧೆ ಮಾಡುತ್ತಿಲ್ಲ. ಕುಬೇರರ ಎದುರು, ಲಕ್ಷ್ಮೀಪುತ್ರರ ಎದುರು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಅಂಜುವುದಿಲ್ಲ. ಶಿವಮೊಗ್ಗದ ಜನರ ಮೇಲೆ ಭರವಸೆ ಇಟ್ಟು ಸ್ಫರ್ಧೆ ಮಾಡುತ್ತಿದ್ದೇನೆ ಎಂದರು.
ಶಿವಮೊಗ್ಗದಿಂದ ಸ್ಪರ್ಧಿಸುವುದಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ವಿಧಾನ ಪರಿಷತ್ ಸಭಾಪತಿಯವರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ ನಂತರ ನಾನು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ಖಚಿತಪಡಿಸುತ್ತೇನೆ. ನಾನು ಯಾವುದೋ ಒಂದು ಪಕ್ಷದಿಂದ ಸ್ಪರ್ಧಿಸುವುದಂತೂ ಖಚಿತ ಎಂದು ಹೇಳಿದರು.
ರಾಜ್ಯಮಟ್ಟದ ಕೆಲ ನಾಯಕರ ಜೊತೆ ಚರ್ಚೆ ಮಾಡ್ತಾ ಇದ್ದೇನೆ. ನಿರ್ಧಾರದ ನಂತರ ಘೋಷಣೆ ಮಾಡ್ತೇನೆ. ಅವರ ಅನುಮತಿ ಇಲ್ಲದೇ, ಈಗ ಘೋಷಣೆ ಮಾಡೋದು ಸರಿ ಅಲ್ಲ. ಯಾವ ಪಕ್ಷ ಎಂದು ಸಂಜೆಯೇ ನಿಮಗೆ ಗೊತ್ತಾಗುತ್ತೆ” ಎಂದು ಹೇಳಿದರು.