ರಾಜ್ಯದ ಪ್ರತಿಷ್ಠಿತ ಸೊರಬ ವಿಧಾನ ಸಭಾ ಕ್ಷೇತ್ರದ ಚುನಾವಣೆ ಈ ಬಾರಿಯೂ ಜಿದ್ದಾಜಿದ್ದಿನಿಂದ ಕೂಡಿದ್ದು, ಭರದಿಂದ ಪ್ರಚಾರ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮಧುಬಂಗಾರಪ್ಪ ಪರವಾಗಿ ಅವರ ಪತ್ನಿ ಅನಿತಾ ಮಧುಬಂಗಾರಪ್ಪ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಕ್ಷೇತ್ರದ ಗ್ರಾಮಗಳಿಗೆ ತೆರಳಿ ಮನೆಮನೆ ಪ್ರಚಾರ ಕೈಗೊಂಡಿರುವ ಅನಿತಾ ಅವರು, ವಿಶೇಷವಾಗಿ ಮಹಿಳೆಯರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಹಾಗೂ ಮಧುಬಂಗಾರಪ್ಪ ಅವರು ಯಾಕೆ ಗೆಲ್ಲಬೇಕು ಎಂಬುದನ್ನು ಮನವರಿಕೆ ಮಾಡುತ್ತಿದ್ದಾರೆ.
ಮಾವ ಬಂಗಾರಪ್ಪರ ಚಿಂತನೆ ಮತ್ತು ಆದರ್ಶಗಳು ಉಳಿಯಬೇಕು. ಅವರು ಹಾಕಿಕೊಟ್ಟ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ರಾಜಕೀಯ ಹಾಗೂ ಆಡಳಿತ ಸಾಗಬೇಕೆಂದು ಪತಿಯ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಚಿಕ್ಕದ್ಯಾವಸ ಗ್ರಾಮದಲ್ಲಿ ಹಾಗೂ ಬೆನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡದಿವಳಿಗೆ ಗ್ರಾಮಕ್ಕೆ ತೆರಳಿ ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಮಹಿಳಾ ಮತದಾರರಲ್ಲಿ ಸಮಾಲೋಚನ ನಡೆಸಿ ಪತಿಯ ಪರವಾಗಿ ಮಾತಯಾಚನೆ ಮಾಡಿದರು. ಸೊರಬ ತಾಲೂಕಿನಲ್ಲಿ ಉಳುವ ಭೂಮಿಗೆ ಹಕ್ಕು ಪತ್ರ ಇಲ್ಲದಿರುವುದು ಗಂಭೀರ ಸಮಸ್ಯೆಯಾಗಿದೆ. ಭೂಮಿಗೆ ಹಕ್ಕುಪತ್ರ ಕೊಡುವ ಕೆಲಸ ಮೊದಲು ಆಗಬೇಕು ಎಂದು ಈ ಸಂದರ್ಭ ಅವರು ಹೇಳಿದರು.