Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ಬಲಗೊಳ್ಳುತ್ತಿರುವ ಜೆಡಿಎಸ್
ಪ್ರೀತಿಯ ರಾಜಕಾರಣದ ಆಯನೂರ್‌ಗೆ ಪ್ರಸನ್ನಕುಮಾರ್ ಬಲ, ಶ್ರೀಕಾಂತ್ ಹೆಚ್ಚು ಸಕ್ರಿಯ

ಶಿವಮೊಗ್ಗ : ಪ್ರತಿಷ್ಠಿತ ಶಿವಮೊಗ್ಗ ನಗರ ವಿಧಾನ ಸಭೆ ಕ್ಷೇತ್ರದಲ್ಲಿ ಈ ಬಾರಿ ೨೦೧೩ ರ ಫಲಿತಾಂಶ ಮರುಕಳಿಸಲಿದೆಯೇ ಎಂಬ ಅನುಮಾನ ಮೂಡುತ್ತಿದೆ. ಈಶ್ವರಪ್ಪ ಅವರು ಚುನಾವಣೆ ರಾಜಕಾರಣದಿಂದ ನಿವೃತ್ತರಾದ ಬಳಿಕ ಬಿಜೆಪಿಯು ಈಶ್ವರಪ್ಪರ ನೆರಳಂತೆಯೇ ಇದ್ದ ಎಸ್.ಎನ್.ಚೆನ್ನಬಸಪ್ಪ ಅವರನ್ನು ಉಮೇದುವಾರರನ್ನಾಗಿಸಿದೆ. ಪಕ್ಷ ಗೆಲ್ಲಿಸುವ ಹೊಣೆಗಾರಿಕೆಯನ್ನೂ ಈಶ್ವರಪ್ಪರ ಹೆಗಲಿಗೆ ಹೊರಸಲಾಗಿದೆ. ಈ ಕಾರಣದಿಂದ ಕ್ಷೇತ್ರ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ.

ಕಳೆದ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತ ಪಡೆದಿದ್ದ ಈಶ್ವರಪ್ಪರಿಂದಾಗಿ ಚುನಾವಣೆ ಬಹುತೇಕ ಏಕಮುಖವಾಗಿ ನಡೆದಿತ್ತು. ಅಂದಿನ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿತ್ತು. ಆದರೆ ಈ ಬಾರಿ ಬಿಜೆಪಿ ತೊರೆದ ಆಯನೂರು ಮಂಜುನಾಥ್ ಅಭ್ಯರ್ಥಿಯಾಗಿರುವುದು ಮತ್ತು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಕಾರಣ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲ ಪೈಪೋಟಿ ನೀಡುವ ಲಕ್ಷಣಗಳು ಕಂಡುಬರುತ್ತಿವೆ.
ನಾಲ್ಕು ಮನೆಯನ್ನೂ ಪ್ರತಿನಿಧಿಸಿರುವ ಅಪರೂಪದ ರಾಜಕಾರಣಿ ಆಯನೂರು ಮಂಜುನಾಥ್ ಅವರು, ಪರಿವಾರ , ಬಿಜೆಪಿಯಲ್ಲಿ ಕಲಿತ ಎಲ್ಲಾ ಪಾಠಗಳನ್ನು ಈಗ ಪ್ರಯೋಗ ಮಾಡುತ್ತಿದ್ದಾರೆ. ಪಕ್ಷಕ್ಕೆ ಕೆ.ಬಿ.ಪ್ರಸನ್ನಕುಮಾರ್ ಸೇರಿರುವುದು ಅವರಿಗೆ ಆನೆ ಬಲ ಬಂದಂತಾಗಿದೆ. ಈ ಇಬ್ಬರ ಪ್ರವೇಶದಿಂದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು ಹಿಂದೆಂದಿಗಿಂತಲೂ ಈ ಬಾರಿ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಎಂ.ಶ್ರೀಕಾಂತ್ ಅವರು ತಮ್ಮದೇ ಆದ ಬೆಂಬಲಿಗರನ್ನು ಹೊಂದಿದ್ದಾರೆ. ಕಳೆದ ಎರಡು ದಶಕಗಳಿಂದ ಶಿವಮೊಗ್ಗದಲ್ಲಿ ಅವರು ಮಾಡುತ್ತಿರುವ ಸಾಮಾಜಿಕ ಸೇವಾಕಾರ್ಯಗಳಿಂದ ಅವರು ಶಿವಮೊಗ್ಗ ನಗರದಲ್ಲಿ ಚಿರಪರಿಚಿತರಾಗಿದ್ದಾರೆ. ಕುರುಬ ಸಮುದಾಯದ ಮತಗಳ ಮೇಲೆ ಹಿಡಿತ ಹೊಂದಿರುವ ಅವರು ಶಿವಮೊಗ್ಗದಲ್ಲಿ ಎಲ್ಲಾ ಜಾತಿ ಜನಾಂಗಗಳೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ ಈ ಎಲ್ಲಾ ಕಾರಣದಿಂದ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಪ್ರಬಲ ಪೈಪೋಟಿ ನೀಡಲಿದೆ ಎಂದೇ ಹೇಳಬಹುದು.

ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ವಿದ್ಯಾರ್ಥಿ ನಾಯಕನಾಗಿ ತುರ್ತುಪರಿಸ್ಥಿಯಲ್ಲಿ ಸಾರ್ವಜನಿಕ ಜೀವನಕ್ಕೆ ಅಡಿಯಿಟ್ಟ ಆಯನೂರು ಮಂಜುನಾಥ್ ಮುಂದೆ ಕಾರ್ಮಿಕ ನಾಯಕನಾಗಿ ಬೆಳೆದವರು. ಕಾರ್ಮಿಕ ಹಿನ್ನೆಲೆಯ ಅವರು, ಶಿವಮೊಗ್ಗದಲ್ಲಿ ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಈ ಕಾರಣದಿಂದ ಅವರ ನೇತೃತ್ವದಲ್ಲಿ ಅನೇಕ ಕಾರ್ಮಿಕ ನಾಯಕರು ಜೆಡಿಎಸ್‌ಗೆ ಬೆಂಬಲ ಸೂಚಿಸಿದ್ದಾರೆ. ಕೆ.ಬಿ.ಪ್ರಸನ್ನಕುಮಾರ್ ಅವರೊಂದಿಗೆ ಶಿವಮೊಗ್ಗ ನಗರ ಕಾಂಗ್ರೆಸ್‌ನ ಪ್ರಮುಖ ಘಟಕಗಳ ಪದಾಧಿಕಾರಿಗಳು ಮತ್ತು ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ಸೇರಿದ್ದಾರೆ.

ವೀರಶೈವ ಮತಗಳ ವಿಭಜನೆ:

ಶಿವಮೊಗ್ಗ ಕ್ಷೇತ್ರವನ್ನು ಮೊದಲಿಂದಲೂ ಬ್ರಾಹ್ಮಣ ಸಮುದಾಯದ ಕ್ಷೇತ್ರ ಎಂದೇ ಹೇಳಲಾಗಿತ್ತು. ರತ್ನಮ್ಮ ಮಾಧವರಾವ್, ಬದರಿನಾರಾಯಣ ಅಯ್ಯಂಗಾರ್, ಕೆ.ಹೆಚ್.ಶ್ರೀನಿವಾಸ್, ಕೆ.ಬಿ.ಪ್ರಸನ್ನಕುಮಾರ್ ಈ ಕ್ಷೇತ್ರ ಪ್ರತಿನಿಧಿಸಿದ ಬ್ರಾಹ್ಮಣ ಸಮುದಾಯದ ಶಾಸಕರಾಗಿದ್ದರು. ೧೯೮೯ ರಿಂದ ಬಿಜೆಪಿ ಪ್ರವರ್ಧಮಾನಕ್ಕೆ ಬಂದ ಮೇಲೆ ಸಂಘಪರಿವಾರದ ಹಿಡಿತ ಕ್ಷೇತ್ರದ ಮೇಲೆ ಹೆಚ್ಚಾಯಿತು. ಇದರ ಪರಿಣಾಮವಾಗಿ ಸಂಘಪ್ರಿಯ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿಯಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬ್ರಾಹ್ಮಣ ಸಮುದಾಯ ಸಾರಾಸಗಟಾಗಿ ಬಿಜೆಪಿ ಬೆಂಬಲಿಸಿದ್ದರಿಂದ ಶಿವಮೊಗ್ಗ ಕ್ಷೇತ್ರ ಬ್ರಾಹ್ಮಣ ಜನಪ್ರತಿನಿಧಿಗಳ ಕೈ ತಪ್ಪಿಹೋಯಿತು.
ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳೂ ಲಿಂಗಾಯತ ಅಭ್ಯರ್ಥಿಗಳಿಗೆ ಮಣೆಹಾಕಿದ್ದು, ಬಿಜೆಪಿಯ ಚೆನ್ನಬಸಪ್ಪ,ಕಾಂಗ್ರೆಸ್‌ನ ಹೆಚ್.ಸಿ.ಯೋಗೇಶ್ ಹಾಗೂ ಜೆಡಿಎಸ್‌ನ ಆಯನೂರು ಮಂಜುನಾಥ್ ನಡುವೆ ಮತವಿಭಜನೆಯಾಗುವ ಕಾರಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಈ ಬಾರಿ ಈಶ್ವರಪ್ಪರ ನಿವೃತ್ತಿಯ ಕಾರಣದಿಂದಲೇ ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಕೋಮು ಸಂಘರ್ಷದ ವಾತಾವರಣದಿಂದ ಅಪಖ್ಯಾತಿಗಳಿಸಿದ ನಗರದಲ್ಲಿ ಶಾಂತಿ ಸೌಹಾರ್ದತೆಯೇ ನನ್ನ ಆದ್ಯತೆ ಎಂದು ಪ್ರೀತಿಯ ರಾಜಕಾರಣಕ್ಕೆ ಮುಂದಾಗಿರುವ ಆಯನೂರು ಮಂಜುನಾಥ್ ಕಾರಣಕ್ಕೆ ಕ್ಷೇತ್ರದ ಕುತೂಹಲ ಇಮ್ಮಡಿಗೊಂಡಿದೆ.

Ad Widget

Related posts

ಪಂಚಮಸಾಲಿ 2Aಗೆ ಬೇಡ: ನಾರಾಯಣಗುರು ವೇದಿಕೆ

Malenadu Mirror Desk

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ-ಖ್ಯಾತ ಖೋ-ಖೋ ಆಟಗಾರ ಧಾರುಣ ಸಾವು

Malenadu Mirror Desk

ಈಡಿಗ ಸಮುದಾಯ ಬೇಡಿಕೆ ಮುಂದಿಡಲು ಸಮಾವೇಶ, ಈಡಿಗ ಸಂಘದ ಅಮೃತ ಮಹೋತ್ಸವ ಯಶಸ್ವಿಗೆ ಸಚಿವ ಮಧುಬಂಗಾರಪ್ಪ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.