ಶಿವಮೊಗ್ಗ,ಮೇ೮: ಅಭಿವೃದ್ದಿ ಮತ್ತು ಸೌಹಾರ್ದ ಶಿವಮೊಗ್ಗ ನನ್ನ ಮೂಲ ಮಂತ್ರ ಎಂದು ವಿಧಾನ ಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಎಲ್ಲಾ ವಾರ್ಡುಗಳಿಗೂ ಅನ್ವಯಿಸಿಲ್ಲ ಉಳಿದ ವಾರ್ಡುಗಳಲ್ಲಿ ಕುಂಠಿತವಾಗಿರುವ ಅಭಿವೃದ್ಧಿಗೆ ವೇಗ ನೀಡಬೇಕು. ಈ ನೆಲೆಯಲ್ಲಿ ನಾನು ಮತ್ತು ನಮ್ಮ ಪಕ್ಷಕ್ಕೆ ಒಂದು ಸ್ಪಷ್ಟ ಕಲ್ಪನೆ ಇದೆ. ಎಲ್ಲರೂ ಏಳಿಗೆಗೆ ಶ್ರಮಿಸುವುದು ಕಾಂಗ್ರೆಸ್ ದ್ಯೇಯ ಅದರಂತೆ ನಗರದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ಶಿವಮೊಗ್ಗ ನಗರದಲ್ಲಿ ಶಾಂತಿ ಸೌಹಾರ್ದತೆಗೆ ಒತ್ತುಕೊಟ್ಟು ಎಲ್ಲಾ ಜಾತಿ ಮತ್ತು ಧರ್ಮದವರು ಸಾಮರಸ್ಯದಿಂದ ಬಾಳಲು ಬೇಕಾದ ವಾತಾವರಣ ನಿರ್ಮಾಣ ಮಾಡಬೇಕು. ವ್ಯಾಪಾರಸ್ಥರು ವರ್ಷದ ಎಲ್ಲಾ ದಿನ ಅಂಗಡಿ ಮುಂಗಟ್ಟು ಬಾಗಿಲು ತೆಗೆದು ವ್ಯವಹಾರ ಮಾಡುವ ಪರಿಸರ ಬೇಕಾಗಿದೆ ಎಂದರು.
ಶಿವಮೊಗ್ಗನಗರದಲ್ಲಿ ಮಹಿಳಾ ಎಂಜನಿಯರಿಂಗ್, ಪ್ರತಿವರ್ಷ ಉದ್ಯೋಗ ಮೇಳ, ಎಲ್ಲಾ ಜಾತಿ ಸಮುದಾಯದವರಿಗೆ ಸ್ಮಶಾನ, ಕೌಶಲ್ಯ ಅಭಿವೃದ್ಧಿ ಕೇಂದ್ರ, ವೈಫೈ ಸೆಂಟರ್ ಹೀಗೆ ಸರ್ವಜನರಿಗೆ ಅಗತ್ಯವಿರುವ ಯೋಜನೆ ಮತ್ತು ಕೆಲಸಗಳನ್ನು ಮಾಡುತ್ತೇವೆ. ಪ್ರಚಾರಕ್ಕೆ ಹೋದ ಸಂದರ್ಭ ಉತ್ತಮ ಪ್ರತಿಕ್ರಿಯೆ ಬಂದಿದೆ. ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು ಹಿರಿಯ ನಾಗರಿಕರು ನನ್ನನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ.
ಯಾವ ಪಕ್ಷದ ಅಭ್ಯರ್ಥಿಗಳೂ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಾರ್ಡುಗಳನ್ನು ಭೇಟಿ ಮಾಡಿಲ್ಲ. ನಾನು ಎಲ್ಲಾ ವಾರ್ಡುಗಳಲ್ಲಿ ಪಾದಯಾತ್ರೆ ಮಾಡಿದ್ದು, ಜನ ಬೆಂಬಲ ವ್ಯಕ್ತವಾಗಿದೆ. ಜನರ ಈ ಉತ್ಸಾಹ ಕಂಡು ಕಾಂಗ್ರೆಸ್ ಪಕ್ಷ ಗೆಲ್ಲುವುದು ಖಾತರಿಯಾಗಿದೆ ಎಂದರು.
ಪಕ್ಷ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸುತ್ತಿದ್ದಂತೆ ನನ್ನ ಪಕ್ಷದ ಎಲ್ಲಾ ಹಿರಿಕಿರಿಯ ಮುಖಂಡರು ಬೆಂಬಲಿಸಿದ್ದಾರೆ. ಅವರ ಸಹಕಾರದಿಂದ ನಾನು ಇಂದು ಚುನಾವಣೆ ಎದುರಿಸಲು ಸಾಧ್ಯವಾಗಿದೆ. ಅಲ್ಪಸಂಖ್ಯಾತ ಮತಗಳು ಎಲ್ಲಿಯೂ ಚೆದುರಿ ಹೋಗುವುದಿಲ್ಲ ಕಾಂಗ್ರೆಸ್ ಪಕ್ಷ ಬೆಂಬಲಿಸಲಿದ್ದಾರೆ ಎಂದು ಯೋಗೇಶ್ ವಿಶ್ವಾಸ ವ್ಯಕ್ತಿಪಡಿಸಿದರು.
ರಿಟನ್ ಟಿಕೆಟ್ ಬುಕ್
ಜೆಡಿಎಸ್ ಅಭ್ಯರ್ಥಿ ಅವಕಾಶವಾದಿಯಾಗಿದ್ದು, ಹಲವು ಪಕ್ಷ ಬದಲಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಜೆಡಿಎಸ್ ಹತ್ತಿರ ಕೂಡಾ ಬಂದಿಲ್ಲ. ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್ ಅಭ್ಯರ್ಥಿ ಶೀಘ್ರವೇ ಮಾತೃ ಪಕ್ಷಕ್ಕೆ ಹೋಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಯೋಗೇಶ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಖಾನ್ ಮಾತನಾಡಿ, ಕಾಂಗ್ರೆಸ್‌ಗೆ ವ್ಯಾಪಕ ಬೆಂಬಲವಿದ್ದು, ನಮ್ಮ ಅಭ್ಯರ್ಥಿ ಗೆಲ್ಲುವರು. ಯಾವುದೇ ಅನುಮಾನ ಬೇಡ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಎಸ್ಪಿ ದಿನೇಶ್, ಎಸ್.ಕೆ.ಮರಿಯಪ್ಪ, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಹಾನಗರ ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್ಕ, ರೇಖಾರಂಗನಾಥ್, ಯಮುನಾ ರಂಗೇಗೌಡ ಪ್ರಮುಖರಾದ ಸೌಂಗದಿಕಾ ಮತ್ತಿತರರು ಹಾಜರಿದ್ದರು.
previous post