ಶಿವಮೊಗ್ಗ, ಮೇ ೧೧: ಖಾಸಗಿ ಬಸ್‌ಗಳ ನಡುವೆ ಗುರುವಾರ ಸಂಜೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದು, ೩೫ ಮಂದಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕು ಚೋರಡಿಯ ಕುಮದ್ವತಿ ನದಿ ಸೇತುವೆ ಮೇಲೆ ನಡೆದಿದೆ.
ಶಿವಮೊಗ್ಗದಿಂದ ಚೋರಡಿ ಮಾರ್ಗವಾಗಿ ಸಂಚರಿಸುವ ಶ್ರೀನಿವಾಸ್ ಮತ್ತು ಕಾಳಪ್ಪ ಬಸ್‌ಗಳ ನಡುವೆ ಈ ಅಪಘಾತ ಸಂಭವಿಸಿದೆ. ೩೫ ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಒಂದು ಬಸ್ ಶಿವಮೊಗ್ಗದಿಂದ ಹೋಗುತ್ತಿದ್ದರೆ, ಮತ್ತೊಂದು ಶಿಕಾರಿಪುರದಿಂದ ಬರುತಿತ್ತು. ಸೇತುವೆ ಅಗಲವಾಗಿದ್ದರೂ ಎರಡೂ ಬಸ್‌ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಾಗಿದ್ದು, ಸ್ಥಳಕ್ಕೆ ಕುಂಸಿ ಪೋಲಿಸರು ಆಗಮಿಸಿದ್ದು, ಸಾರ್ವಜನಿಕರ ಸಹಕಾರದಿಂದ ರಕ್ಷಣಾಕಾರ್ಯದಲ್ಲಿ ತೊಡಗಿದ್ದಾರೆ. ಎರಡೂ ಬಸ್‌ಗಳೂ ನಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಮದ್ವತಿ ಸೇತುವೆ ಬಳಿಕ ತಿರುವು ಇದ್ದು, ಅಪಘಾತ ವಲಯದ ಎಂಬುದು ಗೊತ್ತಿದ್ದರೂ, ನಿತ್ಯ ಸಂಚರಿಸುವ ಈ ಬಸ್‌ಗಳ ನಡುವೆ ಅಪಘಾತ ಸಂಭವಿಸಿರುವುದು ಆಘಾತವುಂಟುಮಾಡಿದೆ. ಬಸ್‌ಗಳು ಒಂದೊರೊಳಗೆ ಒಂದು ಸೇರಿಕೊಂಡಿದ್ದು, ಬೇರ್ಪಡಿಸಲು ಜೆಸಿಬಿ ಬಳಸಲಾಗಿತ್ತು. ವಾಹನದಟ್ಟಣೆಯಿಂದಾಗಿ ಸಾಗರ -ಶಿವಮೊಗ್ಗ ರಸ್ತೆಯಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಘಟನೆಯಲ್ಲಿ ಹಲವು ಮಂದಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.