ಹೂಡಿದ ಬಂಡವಾಳ, ಮಾಡಿದ ಹಂಚಿಕೆ ಬಿಜೆಪಿಯ ಬಲ
ಆಡಳಿತ ವಿರೋಧಿ ಅಲೆ, ಗ್ಯಾರಂಟಿಗಳನ್ನು ನಂಬಿದ ಕಾಂಗ್ರೆಸ್
ಶಿವಮೊಗ್ಗ,ಮೇ ೧೨: ರಾಜಕೀಯ ಭವಿಷ್ಯ ಬಂಧಿಯಾಗಿರುವ ಇವಿಎಂಗಳನ್ನೇ ಕನಸುತ್ತಿರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಾಗಿದೆ. ಶನಿವಾರ ಬೆಳಗ್ಗೆ ಏಳು ಗಂಟೆಯಿಂದ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಬೆಳಗ್ಗೆ ೮ ಗಂಟೆಗೆ ಮೊದಲ ಸುತ್ತಿನ ಮತ ಎಣಿಕೆ ಶುರುವಾಗಲಿದೆ. ಕಳೆದ ಒಂದೂವರೆ ತಿಂಗಳಿಂದ ಹಗಲಿರಳೂ ಪ್ರಚಾರದಲ್ಲಿ ತೊಡಗಿದ್ದವರ ರಾಜಕೀಯ ದಿಕ್ಕು ದೆಸೆಯನ್ನು ಈ ಫಲಿತಾಂಶ ನಿರ್ಧರಿಸಲಿದೆ.
ಹಲವು ಬಗೆಯ ಲೆಕ್ಕಾಚಾರ:
ಮಲೆನಾಡು ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದು, ಈ ಬಾರಿಯೂ ನಾವೇ ಗೆಲ್ತೇವೆ ಎಂದು ಆತ್ಮವಿಶ್ವಾಸದಿಂದ ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಬಿಜೆಪಿಯ ಎಲ್ಲಾ ಅಭ್ಯರ್ಥಿಗಳೂ ತಮ್ಮ ಪಕ್ಷಕ್ಕಿರುವ ತಳಮಟ್ಟದ ಕಾರ್ಯಕರ್ತರ ಜಾಲವನ್ನು ಆಧರಿಸಿ ಸೋಲು ಗೆಲುವಿನ ಬಗ್ಗೆ ಭಾರೀ ವಿಶ್ವಾಸ ಹೊಂದ್ದಾರೆ. ನಮ್ಮ ನಿಷ್ಟಾವಂತ ಕಾರ್ಯಕರ್ತರ ಪಕ್ಷ. ಪೇಜ್ ಪ್ರಮುಖರ ಮೂಲಕ ಪ್ರತೀ ಮತದಾರರನ್ನು ನಾವು ತಲುಪಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆ ಮತ್ತು ಮುಂದೆ ನಾವು ನೀಡುವ ಆಡಳಿತದ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿದ್ದೇವೆ. ಕಾರ್ಯಕರ್ತರ ಶ್ರಮಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ. ಫಲಾಪೇಕ್ಷೆಯಿಲ್ಲದ ಕೆಳಹಂತದ ಕಾರ್ಯಕರ್ತರು ಸೈದ್ಧಾಂತಿಕವಾಗಿ ನಮ್ಮೊಂದಿಗೆ ಇದ್ದಾರೆ. ಅವರು ಕೊಡುವ ಸಮೀಕ್ಷೆಯೇ ನಮಗೆ ಅಂತಿಮ ಮಾತ್ರವಲ್ಲದೆ ಮತದಾರರಿಗೆ ನೀಡಿರುವ ಆಮಿಷಗಳನ್ನು ಚಾಚೂ ತಪ್ಪದೆ ಮತದಾರರಿಗೆ ತಲುಪಿಸುವ ಕಾರ್ಯಪಡೆ ಇರುವುದು ನಮ್ಮಲ್ಲಿ ಮಾತ್ರ ಎನ್ನುವ ಅಭ್ಯರ್ಥಿಗಳು ಮತ್ತು ಅವರ ಹಿಂಬಾಲಕರು ತಮ್ಮ ಹೂಡಿಕೆ ಮತ್ತು ಹಂಚಿಕೆ ಆಧಾರದ ಮೇಲೆ ಗೆಲುವನ್ನು ಅಂದಾಜಿಸುತ್ತಿದ್ದಾರೆ. ಈ ಸಂಪರ್ಕ ಜಾಲದ ಮಾಹಿತಿ ಆಧರಿಸಿಯೇ ಬಿಜೆಪಿ ರಾಷ್ಟ್ರೀಯ ಸಂಘಟನಾಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ೩೧ ಸಾವಿರ ಬೂತ್‌ಗಳಲ್ಲಿ ನಾವು ಮುಂದಿದ್ದೇವೆ ಎಂದು ಹೇಳಿರುವುದು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮತ್ತು ಮುಖಂಡರೂ ಆಡಳಿತ ವಿರೋಧಿ ಅಲೆಯನ್ನೇ ನೆಚ್ಚಿಕೊಂಡು ನಾವು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಿವೆ. ಮನೆಯೊಂದು ಹಲವು ಬಾಗಿಲು ಎಂಬಂತೆ ವಿವಿಧ ಗುಂಪುಗಳಾಗಿದ್ದ ಕಾಂಗ್ರೆಸ್ ಮುಖಂಡರು ಚುನಾವಣೆಯ ಕೊನೇ ಹಂತದಲ್ಲಿ ಒಂದಾಗಿ ದುಡಿದಿದ್ದಾರೆ. ಹಣ ಖರ್ಚು ಮಾಡಿದ ಅಭ್ಯರ್ಥಿಗಳ ಪರ ಕೊಂಚ ಅಬ್ಬರ ಕಂಡು ಬಂದಿತ್ತು. ನಿಷ್ಠೆಗೆ ಕೊರತೆ ಇರುವ ಮುಖಂಡರನ್ನೇ ಹೊಂದಿರುವ ಕಾಂಗ್ರೆಸ್‌ನಲ್ಲಿ ಕೆಳಹಂತದಲ್ಲಿಯೂ ಮತದಾರರನ್ನು ನೇರವಾಗಿ ತಲುಪುವ ಸೈದ್ಧಾಂತಿಕ ಬದ್ಧತೆಯ ಕಾರ್ಯಪಡೆ ಇಲ್ಲವಾಗಿದೆ. ಗಾಳಿ ಬಂದ ಹಾಗೆ ತೂರಿಕೊಳ್ಳುವ ಅವರ ಮನೋಭಾವ ಈ ಚುನಾವಣೆಯಲ್ಲಿಯೂ ಅನಾವರಣವಾಗಿದೆ. ಅಭ್ಯರ್ಥಿಗಳು ಕೊಟ್ಟ ಸಂಪನ್ಮೂಲವೂ ತಲುಪಬೇಕಾದವರಿಗೆ ತಲುಪಿಲ್ಲ ಎಂಬ ಆರೋಪ ಮಾಮೂಲಿಯಾಗಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಪರ ನಿಲ್ಲದೆ ಜೆಡಿಎಸ್‌ಗೆ ಮತಪ್ರಚಾರ ಮಾಡಿದ್ದಾರೆನ್ನಲಾಗಿದೆ.
ಇಬ್ಬರ ಜಗಳದಲ್ಲಿಯೇ ಲಾಭ ಮಾಡಿಕೊಳ್ಳುವ ಜೆಡಿಎಸ್ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಿದೆ. ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿ ಮತ್ತು ಗ್ರಾಮಾಂತರದಲ್ಲಿ ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ್ ಅವರು ಭರದ ಪ್ರಚಾರ ನಡೆಸಿದ್ದು, ಈ ಇಬ್ಬರು ಮಹಿಳೆಯರಿಗೆ ಅನುಕಂಪದ ಅಲೆಯೂ ಕೆಲಸ ಮಾಡಿದೆ ಎಂದು ಹೇಳಬಹುದು. ಒಟ್ಟಾರೆ ಮಲೆನಾಡಿನಲ್ಲಿ ಗುಡುಗು ಸಿಡಿಲಿನಿಂದ ಪ್ರತಿದಿನ ಸಂಜೆ ಮಳೆಯಾಗುತ್ತಿದೆ. ಭೂಮಿ ತಂಪಾಗಿ ಚುನಾವಣೆ ಕಾವು ಏರಿಸಿದೆ. ಫಲಿತಾಂಶದ ಬಳಿಕ ಇದ್ದ ಕುತೂಹಲ ತಣಿಯಲಿದೆ.
ರಾಜಕೀಯ ಮಗ್ಗುಲು ಹೊರಳಲಿದೆಯೇ ?
ಬಿಜೆಪಿ ಶಕ್ತಿಕೇಂದ್ರವಾದ ಶಿವಮೊಗ್ಗದಲ್ಲಿ ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ರಾಜಕೀಯದಿಂದ ದೂರ ಸರಿದಿದ್ದಾರೆ. ಆಡಳಿತ ವಿರೋಧಿ ಅಲೆಯೂ ಸೇರಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮರಳಿ ಪ್ರಾಬಲ್ಯ ಸಾಧಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಬೇರು ಆಳಕ್ಕಿಳಿದಿದ್ದು, ಈ ಬಾರಿಯೂ ಗೆದ್ದು ಮತ್ತು ಗಟ್ಟಿಯಾಗಲಿದ್ದೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಶನಿವಾರದ ಫಲಿತಾಂಶ ಯಾರ ಬೇರುಗಳು ಎಷ್ಟು ಸಡಿಲವಾಗಿವೆ ಎಂಬುದನ್ನು ಸಾರಲಿದೆ.