Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಯಾರಿಗೊಲಿಯಲಿದೆ ಸಚಿವಗಾದಿ?, ಸಂಗಮೇಶ್, ಮಧು ಬಂಗಾರಪ್ಪ, ಬೇಳೂರು ಮೂವರೂ ಆಕಾಂಕ್ಷಿಗಳು

ಶಿವಮೊಗ್ಗ: ನಿಚ್ಚಳ ಬಹುಮತ ಪಡೆದಿರುವ ಕಾಂಗ್ರೆಸ್ ಸರಕಾರದಲ್ಲಿ  ಶಿವಮೊಗ್ಗ ಜಿಲ್ಲೆಯ ಯಾರಿಗೆ ಸಚಿವಗಾದಿ ಸಿಗಲಿದೆ ಎಂಬ ಚರ್ಚೆ ಆರಂಭವಾಗಿದೆ. ಜಿಲ್ಲೆಯಿಂದ ಈ ಬಾರಿ ಮೂರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಈ ಮೂವರಲ್ಲಿ ಯಾರಿಗೆ ಸಚಿವಗಾದಿ ಸಿಗಲಿದೆ ಯಾರು ಹೈಕಮಾಂಡ್ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ರಾಜಕೀಯ ಚರ್ಚೆಗಳು ಗರಿಗೆದರಿವೆ.

ಈಡಿಗ ಸಮುದಾಯದ ಮಧುಬಂಗಾರಪ್ಪ , ಬೇಳೂರು ಗೋಪಾಲಕೃಷ್ಣ ಮತ್ತು ವೀರಶೈವ ಸಮಾಜದ ಬಿ.ಕೆ.ಸಂಗಮೇಶ್ವರ್ ಅವರು ಶಾಸಕರಾಗಿದ್ದು, ಮೂವರೂ ಶಾಸಕರುಗಳು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಬಿ.ಕೆ.ಸಂಗಮೇಶ್ವರ್ ಅವರು ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಆಯ್ಕೆಯಾಗಿದ್ದ ಏಕೈಕ ಶಾಸಕ ಸಂಗಮೇಶ್ ಅವರು ಸಚಿವರಾಗುತ್ತಾರೆ ಎನ್ನಲಾಗಿತ್ತು. ಆದರೆ ಆಗಲಿಲ್ಲ.

ಸಂಗಮೇಶ್ ಅವರು ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕರಾಗಿದ್ದರೂ, ಜಿಲ್ಲಾ ಮಟ್ಟದ ನಾಯಕನಾಗಿ ಬೆಳೆಯಲಿಲ್ಲ. ಭದ್ರಾವತಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರು. ಪಕ್ಷವನ್ನು ಜಿಲ್ಲಾ ಮಟ್ಟದಲ್ಲಿ ಬಲಗೊಳಿಸಲು ಅವರ ಯಾವ ಕೊಡುಗೆಯೂ ಇಲ್ಲ. ಹಿಂದಿನ ಅವಧಿಯಲ್ಲಿ ಮೈತ್ರಿ ಸರಕಾರ ಬೀಳಿಸಿ ಬಿಜೆಪಿ ಸರಕಾರ ರಚಿಸುವಾಗ  ಆಪರೇಷನ್ ಕಮಲದ ಮೂಲಕ ಸಂಗಮೇಶ್ ಅವರನ್ನೂ ಸೆಳೆಯುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದ್ದರು. ಆದರೆ ಪಕ್ಷ ನಿಷ್ಟೆ ತೋರಿದ್ದ ಸಂಗಮೇಶ್ ಬಿಜೆಪಿಯ ಆಮಿಷಗಳಿಗೆ ಬಲಿಯಾಗಲಿಲ್ಲ. ಈ ವಿಚಾರವನ್ನು ಸಂಗಮೇಶ್ ಅವರೇ ಹಲವು ಬಾರಿ ಹೇಳಿಕೊಂಡಿದ್ದರು. ಈ ಸಕಾರಾತ್ಮಕ ಅಂಶಗಳ ನಡುವೆ ಸಂಗಮೇಶ್ ಅವರಿಗೊಂದಷ್ಟು ಹಿನ್ನಡೆಗಳೂ ಇವೆ. ಲಿಂಗಾಯತ ಸಮುದಾಯದ ಅನೇಕ ಹಿರಿಯರು ಸಚಿವಾಕಾಂಕ್ಷಿಗಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡರೆ ಪಕ್ಷದ ಸಂಘಟನೆ ದೃಷ್ಟಿಯಿಂದ ಅನುಕೂಲವಾಗಲಾರದು.

ಈ ನಡುವೆ ಸಂಗಮೇಶ್ ಶಾಸಕರಾಗಿದ್ದ ಅವಧಿಯಲ್ಲಿ ನಡೆದ ಪ್ರತಿ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ಮುನ್ನಡೆ ಬರುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಪಕ್ಷ ಅಲ್ಲಿ ಲೀಡ್ ಪಡೆಯುತ್ತದೆ. ಈ ಅಪವಾದದ ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಸಂಗಮೇಶ್ ಅವರಿಗೆ ಅನಾರೋಗ್ಯವಂತೆ ಎಂದು ಅಪಪ್ರಚಾರ ಮಾಡಿದ್ದ ಅವರ ವಿರೊಧಿಗಳು ಇದೇ ವಿಚಾರವನ್ನು ಮುನ್ನೆಲೆಗೆ ತರುವ ಸಾಧ್ಯತೆಯಿದೆ.


ಈಡಿಗರಲ್ಲಿ ಒಬ್ಬರಿಗೆ ಅವಕಾಶ:
ಶಿವಮೊಗ್ಗ ಜಿಲ್ಲೆಯ ಮತ್ತೊಂದು ಪ್ರಬಲ ಸಮುದಾಯವಾದ ಈಡಿಗರನ್ನು ಪ್ರತಿನಿಧಿಸುವ ಮಧು ಬಂಗಾರಪ್ಪ ಎರಡನೇ ಬಾರಿ ಶಾಸಕರಾಗಿದ್ದರೆ, ಮೂರು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಇಬ್ಬರೂ ಈ ಹಿಂದೆ ಶಾಸಕರಾಗಿದ್ದು, ಬೇರೆ ಪಕ್ಷಗಳಲ್ಲಿ ಎಂಬುದಿಲ್ಲಿ ಗಮನಾರ್ಹ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರರಾಗಿರುವ ಮಧುಬಂಗಾರಪ್ಪ ಅವರು ಕಾಂಗ್ರೆಸ್‌ನಲ್ಲಿ ಪ್ರಭಾವಿಯಾಗಿದ್ದು, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರೂ ಆಗಿದ್ದಾರೆ. ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರೂ ಆಗಿ ಕೆಲಸ ಮಾಡಿರುವ ಮಧು ಬಂಗಾರಪ್ಪ ಅವರು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿದ್ದಾರೆ.43921 ಮತಗಳ ಭಾರೀ ಅಂತರದಿಂದ ಜಯಗಳಿಸಿರುವ ಮಧುಬಂಗಾರಪ್ಪ ಅವರು ಸಚಿವರಾದರೆ ಜಿಲ್ಲೆಯ ರಾಜಕಾರಣದ ಮೇಲೆ ಹಿಡಿತ ಸಾಧಿಸಬಹುದು. ಪಕ್ಷ ಸಂಘಟನೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅನುಕೂಲ ಆಗಬಹುದು ಎಂಬ ಲೆಕ್ಕಾಚಾರವೂ ಇದೆ.

ಎರಡು ಬಾರಿ ಬಿಜೆಪಿಯಲ್ಲಿ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್‌ನಿಂದ ಮೂರನೇ ಬಾರಿ ಶಾಸಕರಾಗಿದ್ದಾರೆ.  ಮಾಜಿ ಸಚಿವ ಕಾಗೋಡು ತಿಮ್ಮಪ್ಪ  ಅವರ ಸೋದರಳಿಯನಾಗಿರುವ ಇವರು ಡಿಕೆಶಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಕ್ಷ ಅವಕಾಶ ಕೊಟ್ಟರೆ ಸಚಿವನಾಗಿ ಕಾರ್ಯನಿರ್ವಹಿಸುವ ಎಂದು ಈಗಾಗಲೇ ಹೇಳಿದ್ದಾರೆ. ಒಂದೇ ಜಿಲ್ಲೆಯ ಒಂದೇ ಜಾತಿಯ  ಇಬ್ಬರು ಸಚಿವರಾಗುವ ಅವಕಾಶ ಕಡಿಮೆಯಿದೆ

.
ಬಿ.ಕೆ.ಹರಿಪ್ರಸಾದ್ ಪ್ರಬಲ ಆಕಾಂಕ್ಷಿ:

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಡಿಸಿಎಂ ಹುದ್ದೆಯ ಮೇಲೂ ಕಣ್ಣಿಟ್ಟಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಈ ಅವಕಾಶ ತಪ್ಪಲಿದೆ. ಆದರೆ ಅವರನ್ನು ಸಚಿವರನ್ನಾಗಿಸುವ ಸಾಧ್ಯತೆಯಿದೆ. ಬಿಲ್ಲವ ಸಮುದಾಯದ ಗೋಪಾಲ್ ಪೂಜಾರಿ, ವಿನಯ್ ಕುಮಾರ್ ಸೊರಕೆ ಸೋತಿರುವುದರಿಂದ ಹರಿಪ್ರಸಾದ್ ಅವರನ್ನು ಉಡುಪಿ -ಮಂಗಳೂರು ಪ್ರತಿನಿಧಿಯಾಗಿ ಸಚಿವರನ್ನಾಗಿಸಬಹುದು. ಈಡಿಗ ಕೋಟಾದಲ್ಲಿ ಒಬ್ಬರನ್ನೇ ಸಚಿವರನ್ನಾಗಿಸುವುದಾದರೆ ಬಿ.ಕೆ.ಹರಿಪ್ರಸಾದ್ ಮುಂಚೂಣಿಯಲ್ಲಿರುತ್ತಾರೆ. ಹೀಗಾದಲ್ಲಿ ಶಿವಮೊಗ್ಗ ಜಿಲ್ಲೆಯ ಈಡಿಗರಿಗೆ ಅವಕಾಶ ತಪ್ಪಬಹುದು. ಶಿವಮೊಗ್ಗ ಜಿಲ್ಲೆ ಮತ್ತು ಈಡಿಗರಿಗೆ ಪ್ರಾತಿನಿಧ್ಯ ನೀಡಲೇಬೇಕೆಂಬ ಒತ್ತಡ ಬಂದರೆ ಮಧುಬಂಗಾರಪ್ಪ ಅವರಿಗೆ ಹೆಚ್ಚಿನ ಅವಕಾಶಗಳಿವೆ.

ಬಿಜೆಪಿ ಸರಕಾರದಲ್ಲಿ ಸಿಎಂ,ಡಿಸಿಎಂ ಹಾಗೂ ಗೃಹ ಖಾತೆಯನ್ನು ಹೊಂದಿದ್ದ ಶಿವಮೊಗ್ಗ ಜಿಲ್ಲೆಗೆ ಕಾಂಗ್ರೆಸ್ ಸರಕಾರ ಒಂದು ಸಚಿವ ಹುದ್ದೆಯನ್ನಾದರೂ ಕೊಡಲೇ ಬೇಕಾದ ಅನಿವಾರ್ಯತೆ ಇದ್ದು, ಯಾರಿಗೆ ಸಚಿವಗಾದಿ ಒಲಿಯುವುದೊ ಕಾದು ನೋಡಬೇಕಿದೆ.

Ad Widget

Related posts

ಅರಣ್ಯ ಹಕ್ಕು ಕಾಯ್ದೆ ದಾಖಲೆ ಅವಧಿ ವಿನಾಯಿತಿಗೆ ಪ್ರಸ್ತಾವನೆ, ಸಿಎಂ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಾಮರ್ಶೆ

Malenadu Mirror Desk

ನಾಯಕತ್ವ ಬೆಳವಣಿಗೆಗೆ ಎನ್ಎಸ್ಎಸ್ ಸಹಕಾರಿ : ಭೀಮಣ್ಣ ಕೆ.ನಾಯ್ಕ್

Malenadu Mirror Desk

ಮದುವೆ ದಿನವೇ ಕೊರೊನಕ್ಕೆ ವರ ಬಲಿ ಮಲೆನಾಡಿನಲ್ಲಿ ಮುಂದುವರಿದ ಮಹಾಮಾರಿ ಅಟ್ಟಹಾಸ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.