ಸೊರಬ :ಅಕ್ಷರಗಳ ಮೇಲೆ ಪ್ರಯೋಗ ನಡೆಸುತ್ತಿದ್ದ ಬೇಂದ್ರೆ ಅವರ ಕಾವ್ಯ ಪ್ರತಿಭೆ ಸಾಮಾಜಿಕ ಮೌಲ್ಯದ ಒಳನೋಟವಾಗಿ ಬೆಳಕು ಚೆಲ್ಲುತ್ತದೆ ಎಂದು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬೇಂದ್ರೆ ಸಾಹಿತ್ಯ ಕುರಿತು ಅವರು ಮಾತನಾಡಿದರು.
ಕನ್ನಡ ಜನಪದ ಸಾಹಿತ್ಯವನ್ನು ಶಿಷ್ಟ ಸಾಹಿತ್ಯದಲ್ಲಿ ಸಮಗ್ರವಾಗಿ ಅಳವಡಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಬೇಂದ್ರೆ ಅವರು ಹೊಸ ಮೆರಗು ನೀಡಿದ್ದಾರೆ. ಬೇಂದ್ರೆ ಅವರ ಮಾತೃ ಭಾಷೆ ಮರಾಠಿ ಆಗಿದ್ದರೂ ಕನ್ನಡ ಭಾಷೆ ಮೇಲೆ ವಿಶೇಷ ಒಲವು ಹೊಂದಿದ್ದರು. ಎಂದು ತಿಳಿಸಿದರು.
ದಾಂಪತ್ಯ ಹಾಗೂ ಸಾಮಾಜಿಕ ಜೀವನವನ್ನು ಬೇರೆ ಬೇರೆಯಾಗಿ ನೋಡದ ಬೇಂದ್ರೆ ಅವರು, ಯಾವುದೇ ವ್ಯಕ್ತಿ ತನ್ನ ಸಂಗಾತಿಯನ್ನು ಅಚ್ಚುಮೆಚ್ಚಿನ ಸಖಿಯಾನ್ನಾಗಿಸಿಕೊಳ್ಳುವ ಪ್ರಯತ್ನದ ಹಿಂದೆ ಗಹನವಾದ ತಾತ್ವಿಕ ಸ್ಪಷ್ಟತೆ ಹಾಗೂ ನಿಷ್ಠೆ ಬೇಕು. ಮನುಷ್ಯ ಸ್ಥಿತಪ್ರಜ್ಞನಾದರೆ ಸರಸ ತಂದೊಡ್ಡುವ ಮರಣಕ್ಕಿಂತ ಸಮರಸ ತರುವ ಪ್ರೀತಿ ಭಾವವೆ ನಿಜವಾದ ಜೀವನ ಎನ್ನುವುದು ತಮ್ಮ ಸಖಿಗೀತದಲ್ಲಿ ಪ್ರತಿಪಾದಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಶಿರಸಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ.ನೀಲೇಶ್ ಜಾನಪದ ಸಾಹಿತ್ಯದಲ್ಲಿ ಮಹಿಳೆ ಬಗ್ಗೆ ಉಪನ್ಯಾಸ ನೀಡಿ, ಜೀವನದ ಮೌಲ್ಯ ಸಾರುತ್ತಿದ್ದ ಜನಪದ ಸಾಹಿತ್ಯ ಇಂದು ಆಧುನಿಕತೆ, ಜಾಗತೀಕರಣ ಪ್ರಭಾವಕ್ಕೆ ಒಳಗಾಗಿ ನಶಿಸುತ್ತಿದೆ. ಕೌಟುಂಬಿಕ ವ್ಯವಸ್ಥೆಯೊಳಗೆ ಸಂಸ್ಕೃತಿ, ಸಂಸ್ಕಾರದ ಪ್ರತೀಕವಾಗಿ ಕಂಡುಬರುವ ಮಹಿಳೆ ಜನಪದ ಸಾಹಿತ್ಯವನ್ನು ಕಟ್ಟಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಜನಪದ ಖಂಡಕಾವ್ಯಗಳಲ್ಲಿ ಮುಖ್ಯ ನೆಲೆಯಲ್ಲಿ ಉಲ್ಲೇಖಿಸಿರುವುದು ಗಮನಾರ್ಹವಾಗಿದೆ. ಜನಪದ ಗೀತೆಗಳು ಕುಟುಂಬ, ಪ್ರಕೃತಿ, ಸಮಾಜ, ದಾಂಪತ್ಯ, ಕೃಷಿ ಸೇರಿದಂತೆ ಒಟ್ಟಾರೆ ಬದುಕನ್ನು ಬಿಚ್ಚಿಡುತ್ತವೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎನ್.ಹೇಮಲತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಯಲಕ್ಷ್ಮಿ ಪ್ರಾರ್ಥಿಸಿ, ಲಕ್ಷೀಶ ಸ್ವಾಗತಿಸಿ, ಸಂದೇಶ್ ವಂದಿಸಿ, ಶ್ವೇತಾ ನಿರೂಪಿದರು.ದತ್ತಿ ದಾನಿ ಸಂಜಯ್ ಡೋಂಗ್ರೆ, ಕಸಾಪ ಕಾರ್ಯದರ್ಶಿ ರಮೇಶ್, ಸವಿತಾ, ನೇತ್ರಾ, ರೇಣುಕಮ್ಮಗೌಳಿ, ಉಪನ್ಯಾಸಕರಾದ ನೇತ್ರಾವತಿ, ಪವಿತ್ರಾ, ರಾಜಶೇಖರಗೌಡ, ವಸಂತ್ ಕುಮಾರ್ ಇತರರಿದ್ದರು.