ಶಿವಮೊಗ್ಗ,ಮೇ: ಆಲ್ಕೊಳ ಬಡಾವಣೆಯ ನಿವಾಸಿ, ನಿವೃತ್ತ ಡಿಸಿಎಫ್ ಐ.ಎಂ.ನಾಗರಾಜ್ ಹಾಗೂ ಜಿ.ಜಿ. ನಮಿತಾ ದಂಪತಿ ಪುತ್ರಿ ಐ.ಎನ್. ಮೇಘನಾ ಯುಪಿಎಸ್ಸಿ ಪರೀಕ್ಷೆ ಯಲ್ಲಿ ತೇರ್ಗಡೆಯಾಗಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ ಮಂಗಳವಾರ ಫಲಿತಾಂಶ ಪ್ರಕಟಿಸಿದ್ದು, ಮೇಘನಾ ಅಖಿಲ ಭಾರತ ಮಟ್ಟದಲ್ಲಿ ೬೧೭ನೇ ರ್‍ಯಾಂಕ್ ಪಡೆದಿದ್ದಾರೆ. ಮೇಘನಾ ಕಳೆದ ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದರೂ ಸಂದರ್ಶನದಲ್ಲಿ ತೇರ್ಗಡೆ ಆಗಿರಲಿಲ್ಲ. ಈಗ ಎರಡನೇ ಪ್ರಯತ್ನದಲ್ಲಿ ತೇರ್ಗಡೆ ಆಗಿದ್ದಾರೆ. ಮೇಘನಾ ಬೆಂಗಳೂರಿನ ವಿಜಯನಗರದ ಇನ್ಸೈಟ್ಸ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮೈಸೂರು ಜಿಲ್ಲೆ ಬಂಡೀಪುರ ಹಾಗೂ ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಮುಗಿಸಿದ್ದು, ಶಿವಮೊಗ್ಗದ ಸಾಂದೀಪನಿ ಶಾಲೆಯಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ಶಿವಮೊಗ್ಗದ ಪೇಸ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಮೇಘನಾ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ’
ಮಗಳು ಎಂಜಿನಿಯರಿಂಗ್ ಮುಗಿಸುತ್ತಿದ್ದಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಬೆಳಿಗ್ಗೆ ೭ ಗಂಟೆಗೆ ಗ್ರಂಥಾಲಯಕ್ಕೆ ಹೋಗಿ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದಳು. ಈ ಬಾರಿ ೧೨೦೦ ಹುದ್ದೆಗಳು ಇದ್ದು, ಅವಳ ರ್‍ಯಾಂಕಿಗೆ ಐಪಿಎಸ್‌ಗೆ ಅವಕಾಶ ಸಿಗಲಿದೆ’
ಐ.ಎಂ.ನಾಗರಾಜ್, ಮೇಘನಾ ತಂದೆ