ಶಿವಮೊಗ್ಗ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿರುವ ಮಧುಬಂಗಾರಪ್ಪ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಭರ್ಜರಿ ಸಿದ್ದತೆ ಮಾಡಿಕೊಂಡಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿದೆ. ಮಧು ಬಂಗಾರಪ್ಪ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ನೇಮಕವಾಗಿದ್ದಾರೆ. ಸಚಿವರಾದ ಮೇಲೆ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಮೇ31ರಂದು ಬರಲಿದ್ದಾರೆ. ಅಂದು ಅವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಹೃತ್ಪೂರ್ವಕವಾಗಿ ಸ್ವಾಗತಿಸಿ ಸನ್ಮಾನಿಸಲಾಗುವುದು ಎಂದರು.
ಮಧು ಬಂಗಾರಪ್ಪ ಅವರು ಅಂದು ಬೆಳಗ್ಗೆ 9.30 ಕ್ಕೆ ಮಲವಗೊಪ್ಪದ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಮಕ್ಕಳನ್ನು ಸ್ವಾಗತಿಸಿ ಶಾಲೆಯಲ್ಲಿ ಸಿಹಿ ಹಂಚಿ ಸೌಹಾರ್ದ ಭೇಟಿ ನೀಡಲಿದ್ದಾರೆ. ಅದಾದ ನಂತರ ಎಂ.ಆರ್.ಎಸ್. ವೃತ್ತದಿಂದ ಅವರನ್ನು ರ್‍ಯಾಲಿಯ ಮೂಲಕ ಮೆರವಣಿಗೆಯಲ್ಲಿ ಕರೆತರಲಾಗುವುದು. ನಂತರ ಈಡಿಗ ಸಮುದಾಯ ಭವನದಲ್ಲಿ ಅಭಿನಂದಿಸಲಾಗುವುದು ಎಂದರು.
ಮಧು ಬಂಗಾರಪ್ಪ ಅವರ ಜೊತೆಗೆ ಶಾಸಕರಾಗಿ ಆಯ್ಕೆಯಾಗಿರುವ ಬೇಳೂರು ಗೋಪಾಲ ಕೃಷ್ಣ ಮತ್ತು ಬಿ.ಕೆ. ಸಂಗಮೇಶ್ ಅವರನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪಕ್ಷದ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು , ಮಾಜಿ ಸಚಿವರು, ಶಾಸಕರು, ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು, ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಆಗಮಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್, ಇಸ್ಮಾಯಿಲ್ ಖಾನ್, ಚಂದ್ರ ಭೂಪಾಲ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಆರ್.ಸಿ. ನಾಯ್ಕ್, ಕಾಶಿ ವಿಶ್ವನಾಥ್, ಅಕ್ರಂ ಪಾಶಾ, ರವಿಕುಮಾರ್, ಚಂದ್ರಶೇಖರ್ ಮತ್ತಿತರರು ಇದ್ದರು.