ಶಿವಮೊಗ್ಗ : ಕಾರ್ಯಕರ್ತರು ,ಮುಖಂಡರ ಅವಿರತ ಶ್ರಮ ಹಿರಿಯರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಬಂದಿದೆ ನಾನು ಸಚಿವನಾಗಿರುವುದು ನಿಮಗೆಲ್ಲರಿಗೂ ಸಿಕ್ಕಿರುವ ಅಧಿಕಾರವಾಗಿದೆ. ಇದರಿಂದ ನನ್ನ ಜವಾಬ್ದಾರಿಯೂ ಹೆಚ್ಚಿದೆ. ಇದಕ್ಕಾಗಿ ಜಿಲ್ಲೆಯ ಜನರಿಗೆ ನಾನು ಋಣಿಯಾಗಿದ್ದೇನೆ. ಎಲ್ಲರೂ ಕೂಡಿ ಸರಕಾರದ ಕೆಲಸವನ್ನು ಜನರಿಗೆ ತಲುಪಿಸಬೇಕು. ಮುಂದಿನ ಎಲ್ಲಾ ಚುನಾವಣೆಗಳನ್ನು ಗೆಲ್ಲಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಸಚಿವರಾದ ನಂತರ ಶನಿವಾರ ಮೊದಲ ಬಾರಿ ನಗರಕ್ಕಾಗಮಿಸಿದ ಅವರು ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನ ನನಗೆ ಒಂದು ಸವಾಲು. ಒಂದು ಕೋಟಿಗೂ ಅಧಿಕ ಮಕ್ಕಳು ಹಾಗೂ ಮೂರುವರೆ ಲಕ್ಷಕ್ಕಿಂತ ಹೆಚ್ಚು ಶಿಕ್ಷಕರು ನಮ್ಮ ವ್ಯಾಪ್ತಿಗೆ ಬರುತ್ತಾರೆ. ಹಾಗಾಗಿ ಇದೊಂದು ಗುರುತರ ಜವಾಬ್ದಾರಿಯುಳ್ಳ ಸಚಿವ ಸ್ಥಾನ ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ , ಯಾವ ರಾಜ್ಯದಲ್ಲೂ ಇಂತಹ ಕಾರ್ಯಕ್ರಮ ಕೊಟ್ಟಿಲ್ಲ.ಬಿಜೆಪಿಯವರ ಬಾಯಿಮುಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಹೇಳಿದ್ದಾರೆ. ಆದರೆ ಬಿಜೆಪಿಯವರು ೧೭ ಲಕ್ಷ ಕೋಟಿ ರೂ.ಗಳ ಶ್ರೀಮಂತರ ಸಾಲ ಮನ್ನಾ ಮಾಡಿದ್ದ ಸಂದರ್ಭ ಬೊಮ್ಮಾಯಿಯವರು ಯಾಕೆ ಆರ್ಥಿಕ ಸ್ಥಿತಿ ಬಗ್ಗೆ ಕಳವಳ ವ್ಯಕ್ತಮಾಡಿಲ್ಲ ಎಂದು ಪ್ರಶ್ನಿಸಿದರು.
ಭೂಮಿ ಸಮಸ್ಯೆ ಇತ್ಯರ್ಥ:
ಚುನಾವಣೆಗೂ ಮುನ್ನ ನಾವು ಮಲೆನಾಡಿನ ಕಾಡುವ ಸಮಸ್ಯೆಗಳಾದ ಬಗರ್‌ಹುಕುಂ ಭೂಮಿ, ಶರಾವತಿ ಸಂತ್ರಸ್ತರ ಸಮಸ್ಯೆ, ಅಡಕೆ ಹೀಗೆ ಹಲವು ಸಂಗತಿಗಳನ್ನು ಜನರ ಮುಂದಿಟ್ಟಿದ್ದೆವು. ಅವುಗಳನ್ನೆಲ್ಲ ಆದ್ಯತೆಯಾಗಿ ಪರಿಗಣಿಸುತ್ತೇವೆ. ಕೇಂದ್ರ ಸರಕಾರದೊಂದಿಗೆ ವ್ಯವಹರಿಸುವ ಕೆಲಸವೂ ಆಗಬೇಕಿದೆ. ಮೂಲಭೂತ ಸಮಸ್ಯೆಗಳು, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಈಡೇರಿಸಬೇಕಿದೆ ಎಂದರು.
ಮುಖ್ಯಮಂತ್ರಿಯಾಗುವ ಅರ್ಹತೆ ಇದೆ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡಿ, ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿದರೆ ಪಕ್ಷಕ್ಕೆ ಅನುಕೂಲ ಎಂದು ಕಾಗೋಡು ತಿಮ್ಮಪ್ಪ ಮತ್ತು ನಾನು ಚರ್ಚೆ ಮಾಡಿದ್ದೆವು. ಅದರಂತೆ ಈಗ ಜಿಲ್ಲೆಯಲ್ಲಿ ಪಕ್ಷಕ್ಕೆ ಬಲ ಬಂದಿದೆ. ಮುಂದಿನ ದಿನಗಳಲ್ಲಿ ಪಕ್ಷದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಎಲ್ಲರನ್ನು ಒಟ್ಟಾಗಿ ಕರೆದೊಯ್ಯಬೇಕು. ಕಾಂಗ್ರೆಸ್ ವೈಭವ ಮರುಕಳಿಸುವ ಆಶಾಭಾವನೆ ನನಗಿದೆ. ಮುಂದೊಂದು ದಿನ ಮಧು ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದರು. ಶಿಕ್ಷಣ ಇಲಾಖೆಯಂತಹ ಗುರುತರ ಜವಾಬ್ದಾರಿ ಇರುವ ಇಲಾಖೆ ಅವರಿಗೆ ಸಿಕ್ಕಿದ್ದು, ನಾನು ಅವರ ಬೆನ್ನಿಗಿರುವೆ ಎಂದು ಹೇಳಿದರು.
ಸಂಸದರ ತಾಳಕ್ಕೆ ಕುಣಿವವರು ಬೇಡ
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿನ ಅಧಿಕಾರಿಗಳ ಪೈಕಿ ಕೆಲವರು ಬಿಜೆಪಿ ಮನಸ್ಥಿತಿಯವರು ಇದ್ದಾರೆ, ಅಂತವರನ್ನ ವರ್ಗಾವಣೆ ಮಾಡಬೇಕಿದೆ. ಜಿಲ್ಲೆಯಲ್ಲಿ ಸಂಸದರು ಹೇಳಿದ ಹಾಗೆ ಕೇಳುವ ಅವರಿಗೆ ಸಹಕಾರ ನೀಡುವ ಅಧಿಕಾರಿಗಳಿದ್ದು, ಈ ಹಿಂದೆ ಹಲವರು ಅವರ ಚೇಲಾಗಳ ರೀತಿಯಲ್ಲಿ ಕೆಲಸ ಮಾಡಿದ ಉದಾಹರಣೆಯಿದೆ. ಅಂತಹವರನ್ನು ವರ್ಗಾವಣೆ ಮಾಡಬೇಕಿದೆ ಎಂದರು.
ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕಿದ್ದಕ್ಕೆ ಸಂತಸವಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು, ನಾವು ಮಧು ಬಂಗಾರಪ್ಪರವರ ಜೊತೆಗಿದ್ದೇವೆ. ಮಧು ಮಂತ್ರಿಯಾಗಿರುವುದು ನಮಗೆ ಸಂತಸ ತಂದಿದೆ ಎಂದರು.ವೇದಿಕೆಯಲ್ಲಿ ಪ್ರಮುಖರಾದ ಆರ್.ಎಂ.ಮಂಜುನಾಥ್‌ಗೌಡ, ಕಲಗೋಡು ರತ್ನಾಕರ್, ಎಸ್.ಪಿ.ದಿನೇಶ್, ಇಕ್ಕೇರಿ ರಮೇಶ್, ಹೆಚ್.ಸಿ.ಯೋಗೇಶ್, ನಗರದ ಮಹದೇವಪ್ಪ, ಇಸ್ಮಾಯಿಲ್ ಖಾನ್, ಆರ್.ಪ್ರಸನ್ನಕುಮಾರ್, ಚಂದ್ರಭೂಪಾಲ್, ಚಿನ್ನಪ್ಪ, ಜಿ.ಡಿ.ಮಂಜುನಾಥ್, ರವಿಕುಮಾರ್, ವಿಜಯಕುಮಾರ್, ಬಲ್ಕೀಶ್ ಭಾನು, ಕಲೀಂ ಪಾಶ, ಅನಿತಾಕುಮಾರಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭ ವಿವಿಧ ಸಮಾಜದ ಮುಖಂಡರು, ಬ್ಲಾಕ್ ಕಾಂಗ್ರೆಸ್‌ಗಳಿಂದ ಸಚಿವರಿಗೆ ಸನ್ಮಾನಿಸಲಾಯಿತು.ಇದಕ್ಕೂ ಮೊದಲು ಸಚಿವರನ್ನು ಭದ್ರಾವತಿಯಿಂದಲೂ ಬೈಕ್ ರ್‍ಯಾಲಿ ಮೂಲಕ ಕರೆತರಲಾಯಿತು. ಶಿವಮೊಗ್ಗ ನಗರ ವ್ಯಾಪ್ತಿಯ ಮಲವಗೊಪ್ಪದಿಂದ ಭಾರೀ ಮೆರವಣಿಗೆಯಲ್ಲಿ ಸಚಿವರನ್ನು ಸ್ವಾಗತಿಸಿದ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಮಧುಬಂಗಾರಪ್ಪ ಪರ ಘೋಷಣೆ ಮೊಳಗಿಸಿದರು.
ಗೊಂದಲದ ಗೂಡಾದ ಕಾರ್ಯಕ್ರಮ
ಮಧುಬಂಗಾರಪ್ಪ ಹಾಗೂ ಬೇಳೂರು ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಬಹುನಿರೀಕ್ಷೆಯಿಂದ ಅಚ್ಚುಕಟ್ಟಾಗಿಯೇ ಏರ್ಪಡಿಸಿತ್ತು. ಚುನಾವಣೆ ಸಂದರ್ಭ ಅಜ್ಞಾತವಾಗಿಯೇ ಉಳಿದಿದ್ದ ಅನೇಕ ಮುಖಂಡರು ಸನ್ಮಾನ ಸಭೆಯ ವೇದಿಕೆಯನ್ನು ಆಕ್ರಮಿಸಿಕೊಂಡಿದ್ದರು. ಸಚಿವರಿಗೆ ಹಾರ ಹಾಕುವ ಮತ್ತು ಮಾಧ್ಯಮಗಳ ಕ್ಯಾಮೆರಾಗಳಿಗೆ ಪೋಜು ಕೊಡುವ ಮರಿನಾಯಕರಿಂದ ಎಲ್ಲರಿಗೂ ಕಿರಿಕಿರಿಯಾಯಿತು. ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆ ಎಂದರೆ ಅಶಿಸ್ತು ಎಂಬುದು ಮತ್ತೆ ಮತ್ತೆ ಸಾಬೀತಾಯಿತು. ಪಕ್ಷದ ಅನೇಕ ಹಿರಿಯ ಮುಖಂಡರು ಸಚಿವರ ಹತ್ತಿರವೂ ಸುಳಿಯಲು ಬಿಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾಧ್ಯಕ್ಷರೂ ವೇದಿಕೆಯನ್ನು ನಿಯಂತ್ರಿಸುವಲ್ಲಿ ಆಸಕ್ತಿ ತೋರಲಿಲ್ಲ.