Malenadu Mitra
ರಾಜ್ಯ ಶಿವಮೊಗ್ಗ

ಜಿಲ್ಲಾ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಗಾಳಿ, ಅಧ್ಯಕ್ಷಗಾದಿಗಾಗಿ ಹಲವರ ಪ್ರಯತ್ನ, ಮಧು ಬಂಗಾರಪ್ಪ ಒಲವಿದ್ದವರಿಗಿದೆ ಅದೃಷ್ಟ

ಶಿವಮೊಗ್ಗ,ಜೂ.: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಈ ಹೊತ್ತಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಒಂದು ಪ್ರತಿಷ್ಠೆಯೇ ಸರಿ. ಕಳೆದ ಐದು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹೆಚ್.ಎಸ್.ಸುಂದರೇಶ್ ತಮ್ಮ ಅವಧಿಯಲ್ಲಿ ಮೂರು ಕ್ಷೇತ್ರಗಳನ್ನು ಪಕ್ಷ ಗೆದ್ದಿದೆ ಎಂದು ಬೀಗುತ್ತಿದ್ದಾರೆ. ಜಯತಂದು ಕೊಟ್ಟ ಉಮೇದಿನಲ್ಲಿರುವ ಅವರು ಉನ್ನತ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಶಿವಮೊಗ್ಗ ವಿಧಾನ ಸಭೆ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಅದು ಸಿಗದ ಕಾರಣ ವರಿಷ್ಠರ ಬಳಿ ಬದಲಿ ವ್ಯವಸ್ಥೆಯ ಭರವಸೆಯನ್ನೂ ಪಡೆದಿದ್ದಾರೆ. ಇನ್ನು ಜಿಲ್ಲಾ ಕಾಂಗ್ರೆಸ್ ಕಳೆದ ಹಲವು ವರ್ಷಗಳಿಂದ ನಿಂತ ನೀರಾಗಿದೆ. ಅಧ್ಯಕ್ಷ ಸುಂದರೇಶ್ ಅವರು, ಪಕ್ಷ ಸಂಘಟನೆ ಮಾಡದೆ ಕೆಲವೇ ಹಿಂಬಾಲಕರ ಕೂಟ ರಚಿಸಿಕೊಂಡಿದ್ದರು. ಮುಂಬರುವ ತಾಲೂಕು, ಜಿಲ್ಲಾ ಪಂಚಾಯಿತಿ ಮತ್ತು ಲೋಕಸಭೆ ಚುನಾವಣೆ ಸಂದರ್ಭ ಈ ಅಧ್ಯಕ್ಷರನ್ನು ಬದಲಿಸದ ಹೊರತು ಪಕ್ಷಕ್ಕೆ ಏಳಿಗೆ ಇಲ್ಲ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್‌ನ ಒಂದು ಗುಂಪು ಈ ಬಾರಿ ಬದಲಾವಣೆ ಖಚಿತ ಎಂಬ ಭರವಸೆಯಲ್ಲಿದ್ದಾರೆ.
ಮಹತ್ವದ ಜವಾಬ್ದಾರಿ:
ಸ್ಥಳೀಯ ಸಂಸ್ಥೆ ಹಾಗೂ ಲೋಕ ಸಭೆ ಚುನಾವಣೆ ಹತ್ತಿರವಿರುವ ಈ ಸಮಯದಲ್ಲಿ ಜಿಲ್ಲೆಯಲ್ಲಿ ಎಲ್ಲರನ್ನೂ ಒಳಗೊಂಡು ಪಕ್ಷ ಸಂಘಟನೆಮಾಡುವ ಉತ್ತಮ ಸಂಘಟಕರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿಸುವುದು ಅನಿವಾರ್ಯವಾಗಿದೆ. ಸಚಿವರೂ ಸೇರಿದಂತೆ ಮೂವರು ಶಾಸಕರನ್ನು ಹೊಂದಿರುವ ಜಿಲ್ಲೆಯಲ್ಲಿ ಬಾಲಸುಟ್ಟ ಬೆಕ್ಕಿನಂತಾಗಿರುವ ಬಿಜೆಪಿಯನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಈ ಹಿಂದೆ ಜಿಲ್ಲೆಯ ಅನೇಕ ಕಾಂಗ್ರೆಸ್ ಮುಖಂಡರು ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿ ನಾಯಕರೊಂದಿಗೆ ಮಿಲಾಕತ್ ಮಾಡಿಕೊಂಡಿದ್ದ ಆರೋಪ ಹೊಂದಿದ್ದಾರೆ. ಈಗ ಮತ್ತೆ ಅವರ ಕೈಗೆ ಡಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಮುಳುಗುನೀರು ಎಂಬ ಚರ್ಚೆಯೂ ನಡೆಯುತ್ತಿದೆ.
ಸಚಿವ ಮಧುಬಂಗಾರಪ್ಪ ಸೇರಿದಂತೆ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಅವರ ಅಭಿಪ್ರಾಯ ಪಡೆದೇ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದ್ದು, ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ನಾಯಕರನ್ನು ಜಿಲ್ಲಾಧ್ಯಕ್ಷರನ್ನು ಮಾಡಲು ಕೆಪಿಸಿಸಿ ನಾಯಕರು ತೀರ್ಮಾನಿಸಿದ್ದಾರೆನ್ನಲಾಗಿದೆ.
ಯಾರ್‍ಯಾರು ಆಕಾಂಕ್ಷಿಗಳು:

ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರಮುಖ ಜಾತಿಗಳಾದ ಈಡಿಗರು ಅಥವಾ ಲಿಂಗಾಯತರಲ್ಲಿ ಒಬ್ಬರಿಗೆ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈಡಿಗರಿಗೆ ಟಿಕೆಟ್ ನೀಡುವ ಸಾಧ್ಯತೆ ಇದ್ದರೆ, ಲಿಂಗಾಯತರಿಗೆ ಜಿಲ್ಲಾಧ್ಯಕ್ಷರನ್ನಾಗಿ ಮಾಡಬಹುದು. ಸಾದರ ಲಿಂಗಾಯತರಿಗೆ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸುವ ಇರಾದೆ ಇದ್ದರೆ, ಈಡಿಗರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವ ಲೆಕ್ಕಾಚಾರ ಪಕ್ಷದಲ್ಲಿದೆ ಎನ್ನಲಾಗಿದೆ.
ಈ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬಂಡಿರಾಮಚಂದ್ರ, ಹಿರಿಯ ಮುಖಂಡ ಇಸ್ಮಾಯಿಲ್ ಖಾನ್, ಪ್ರಮುಖರಾದ ಎಸ್.ಪಿ.ದಿನೇಶ್, ಮಹಾನಗರ ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಹೆಚ್.ಸಿ.ಯೋಗೇಶ್, ಸಾಗರದ ಮಲ್ಲಿಕಾರ್ಜುನ್ ಹಕ್ರೆ ಹೆಸರುಗಳು ಕೇಳಿಬರುತ್ತಿವೆ. ಜಾತಿ ಲೆಕ್ಕಾಚಾರವಿಲ್ಲದೆ ಅವಕಾಶ ನೀಡಿದರೆ ಒಂದು ಕೈ ನೋಡುವೆ ಎಂಬ ಉಮೇದಿನಲ್ಲಿ , ಎಲ್.ಸತ್ಯನಾರಾಯಣ ರಾವ್, ಎನ್.ರಮೇಶ್ ಕೂಡಾ ಇದ್ದಾರೆ.
ಯಾರಿಗೆ ಅವಕಾಶ:
ಪದವೀಧರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಯುವ ಮುಖಂಡ ಎಸ್.ಪಿ.ದಿನೇಶ್ ಎಲ್ಲರೊಂದಿಗೂ ಬೆರೆತು ಸಾಗುವ ಮುಖಂಡರಾಗಿದ್ದು, ಪಕ್ಷದಲ್ಲಿ ಅಪಕೀರ್ತಿ ಹೊಂದಿದವರಲ್ಲ.ರಾಜ್ಯಮಟ್ಟದ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಉತ್ತಮ ಸಂಘಟಕ ಎಂಬ ಹೆಸರು ಹೊಂದಿದ್ದಾರೆ. ಶಿವಮೊಗ್ಗ ವಿಧಾನ ಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಅವರು ಮೂರು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ್ದು, ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿಯಾದ ಬಳಿಕ ತಮ್ಮ ಪ್ರೊಫೈಲ್ ಹಿಗ್ಗಿಸಿಕೊಂಡಿರುವ ಅವರು ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಿದರೆ ಬೆಳವಣಿಗೆಗೆ ಉತ್ತಮ ಎಂದು ಲಾಬಿ ಆರಂಭಿಸಿದ್ದಾರೆ.

ವಿದ್ಯಾರ್ಥಿ ಕಾಂಗ್ರೆಸ್‌ನಿಂದಲೂ ಪಕ್ಷ ಸಂಘಟನೆ ಮಾಡಿದ್ದೇನೆ. ಹಲವು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮಹತ್ತರ ಪಾತ್ರ ವಹಿಸಿದ್ದೇನೆ. ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದು, ಶಿಕ್ಷಣ ಮತ್ತು ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವರಿಷ್ಠರು ನೀಡಿದರೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ
ಎಸ್.ಪಿ.ದಿನೇಶ್, ಜಿಲ್ಲಾ ಕಾಂಗ್ರೆಸ್ ಮುಖಂಡ

ಏಳೆಂಟು ತಿಂಗಳ ಹಿಂದೆ ಪಕ್ಷದ ಚುಕ್ಕಾಣಿ ಹಿಡಿಯಿರಿ ಎಂದು ನಮ್ಮ ನಾಯಕರು ಕೇಳಿದ್ದರು. ಹತ್ತು ವರ್ಷಗಳ ಕಾಲ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈಗ ನನಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುವ ಆಸಕ್ತಿ ಇಲ್ಲ. ಪಕ್ಷ ಹೇಳಿದ ಕೆಲಸ ಮಾಡುವುದಷ್ಟೇ ನನ್ನ ಜವಾಬ್ದಾರಿ

ಆರ್.ಪ್ರಸನ್ನಕುಮಾರ್, ಮಾಜಿ ಎಂ ಎಲ್ಸಿ

ಕಾಂಗ್ರೆಸ್ ಪಕ್ಷದಲ್ಲಿ ಗ್ರಾಮ ಮಟ್ಟದಿಂದ ಸಂಘಟನೆ ಮಾಡಿಕೊಂಡು ನಾಲ್ಕು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಹಿಂದೆಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗುವ ಅವಕಾಶ ಇತ್ತು. ಆಗ ಯಾರೂ ಪರಿಗಣಿಸಿಲ್ಲ. ಈಗ ನನಗೆ ಆಸಕ್ತಿಯಿಲ್ಲ

ಕಲಗೋಡು ರತ್ನಾಕರ್, ಜಿ.ಪಂ.ಮಾಜಿ ಅಧ್ಯಕ್ಷ

Ad Widget

Related posts

ಸಿಗಂದೂರು ದೇಗುಲದಿಂದ ಬಡವರಿಗೆ ಆಹಾರ ಕಿಟ್, ಆಂಬ್ಯುಲೆನ್ಸ್ ಸೇವೆ

Malenadu Mirror Desk

ಗುತ್ತಿಗೆದಾರರಿಗೆ ಶಾಸಕ ಹಾಲಪ್ಪ ಕ್ಲಾಸ್

Malenadu Mirror Desk

ರೋಗಿಗಳನ್ನು ಅಕ್ಕರೆಯಿಂದ ಆರೈಕೆ ಮಾಡುತ್ತಿದ್ದ ನರ್ಸ್ ಮೇಲೆ ಕ್ರೂರ ವಿಧಿಯ ಸವಾರಿ, ಎದೆಯೊಡೆವ ದುಃಖದಲ್ಲಿಯೂ ಅಂಗಾಂಗ ದಾನ ಮಾಡಿದ ಗಾನವಿ ಕುಟುಂಬ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.