ಶಿವಮೊಗ್ಗ: ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯ ಮುಖ್ಯ ಎಂದು ಡಿವೈಎಸ್‌ಪಿ ಬಾಲರಾಜ್ ಹೇಳಿದರು.
ಸಾಗರ ರಸ್ತೆಯ ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆ ಹಾಗೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಆಹಾರ ಕ್ರಮ ಮತ್ತು ಜೀವನ ಶೈಲಿಯಿಂದ ಹಲವು ಕಾಯಿಲೆಗಳು ಕಾಡುತ್ತಿವೆ. ಇವುಗಳನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳನ್ನು ದೂರ ಮಾಡಬಹುದು. ಅವಸರದ ಬದುಕಿಗೆ ಮನುಷ್ಯ ಒಗ್ಗಿಹೋಗಿದ್ದಾನೆ. ಆರೋಗ್ಯದ ಕಾಳಜಿ ಇಲ್ಲವಾಗಿದೆ. ಹಾಗಾಗಿ ಮಧುಮೇಹ ಎಂಬುದು ಸಮಾಜದಲ್ಲಿ ಹಾಸುಹೊಕ್ಕಾಗಿದೆ.ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆ ಮತ್ತು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಶಿಬಿರವನ್ನು ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತು ಬಡವರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕು ಎಂದರು.
ಮಣಿಪಾಲ್ ಆಸ್ಪತ್ರೆಯ ಡಾ. ರಾಹುಲ್ ಮಾತನಾಡಿ, ಮಧುಮೇಹ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಪ್ರಮುಖವಾಗಿ ಮಧುಮೇಹಿಗಳಲ್ಲಿ ಕಾಲು ಮತ್ತು ಕಣ್ಣಿನ ಸಮಸ್ಯೆ ಹೆಚ್ಚಾಗಿರುತ್ತದೆ. ನಿರ್ಲಕ್ಷ್ಯ ಮಾಡಿದರೆ ಕಾಲು ಮತ್ತು ಕಣ್ಣು ಎರಡನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ತಪಾಸಣೆ ಬಹಳ ಮುಖ್ಯವಾಗಿದೆ. ಇಂತಹ ಶಿಬಿರಗಳನ್ನು ಆಯೋಜಿಸುವುದರಿಂದ ಕೊನೇಪಕ್ಷ ಜನರು ಬಂದು ಮುಂದಾಗುವ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳಬಹುದು ಎಂದರು.
ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ನಾಗೇಂದ್ರ ಡಿ. ಮಾತನಾಡಿ, ಉಚಿತ ಶಿಬಿರಗಳು ಬಡವರಿಗೆ ದಾರಿದೀಪವಾಗುತ್ತವೆ. ಇದರ ಪ್ರಯೋಜನ ಪಡೆಯಬೇಕು. ಕೋವಿಡ್ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳೇ ಇಲ್ಲವಾದ ಬಗ್ಗೆ ನಾವು ನೋಡಿದ್ದೇವೆ. ನಾವು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ಹಿಂದೆ ಜನರಿರುತ್ತಾರೆ ನಮಗೆ ನಾವೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಂತಹ ಶಿಬಿರಗಳು ನಮ್ಮ ನೆರವಿಗೆ ಬರುತ್ತವೆ ಎಂದರು.
ಐಲೆಟ್ಸ್ ಆಸ್ಪತ್ರೆಯ ಎಂಡಿ ಡಾ. ಪ್ರೀತಮ್ ಮಾತನಾಡಿ, ಮಧುಮೇಹವನ್ನು ಎದುರಿಸುವುದು ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ. ಮಧುಮೇಹದಿಂದ ಕಾಲಿನಲ್ಲಿ ಗಾಯಗಳು ಉಂಟಾಗಿ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಆಸ್ಪತ್ರೆಯಲ್ಲಿ ಡಯಾಬಿಟಿಸ್ ಪಾದ ಸಂರಕ್ಷಣಾ ಕ್ಲಿನಿಕ್ ತೆರೆಯಲಾಗಿದೆ. ಪ್ರತಿ ತಿಂಗಳ ಎರಡನೆ ಶುಕ್ರವಾರ ಪಾದದ ತಪಾಸಣೆ ಮಾಡಲಾಗುವುದು. ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ವಾಸ್ಕ್ಯೂಲರ್ ತಜ್ಞ ಡಾ. ರಾಹುಲ್ ಎನ್.ಎಸ್, ಅವರು ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ಜೊತೆಗೆ ವಾರ್ಷಿಕ ಹೆಲ್ತ್ ಕಾರ್ಡ್ ಕೂಡ ಇರುತ್ತದೆ. ಇದರ ಸೌಲಭ್ಯವನ್ನು ಜನರು ಪಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ. ಪಲ್ಲವಿ ಇದ್ದರು.
ಮಧುಮೇಹವನ್ನು ಎದುರಿಸುವುದು ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ. ಮಧುಮೇಹದಿಂದ ಕಾಲಿನಲ್ಲಿ ಗಾಯಗಳು ಉಂಟಾಗಿ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಆಸ್ಪತ್ರೆಯಲ್ಲಿ ಡಯಾಬಿಟಿಸ್ ಪಾದ ಸಂರಕ್ಷಣಾ ಕ್ಲಿನಿಕ್ ತೆರೆಯಲಾಗಿದೆ. ಪ್ರತಿ ತಿಂಗಳ ಎರಡನೆ ಶುಕ್ರವಾರ ಪಾದದ ತಪಾಸಣೆ ಮಾಡಲಾಗುವುದು
ಡಾ. ಪ್ರೀತಮ್ ,ಎಂಡಿ, ಐಲೆಟ್ಸ್ ಆಸ್ಪತ್ರೆ