ಶಿವಮೊಗ್ಗ: ಕ್ಷುಲ್ಲಕ ವಿಚಾರಕ್ಕೆ ಎರಡು ಕೋಮಿನ ಯುವಕರ ಮಧ್ಯೆ ಟಿಪ್ಪು ನಗರದಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕೋಮು ಸ್ವರೂಪ ಪಡೆದಿತ್ತು. ರಸ್ತೆಯಲ್ಲಿ ಹೋಗುವಾಗ ಬೈಕ್ ಮತ್ತು ಆಟೋ ಪರಸ್ಪರ ತಾಗಿವೆ. ಇದೆ ವಿಚಾರಕ್ಕೆ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಸಂದೇಶ್ ಎಂಬಾತನ ಕಣ್ಣಿನ ಬಳಿ ಗಾಯವಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮತ್ತೊಂದು ಪ್ರಕರಣದಲ್ಲಿ ದ್ರೌಪದಮ್ಮ ಸರ್ಕಲ್ ಬಳಿ ವಿಜಯ್ ಕುಮಾರ್ ಎಂಬಾತನ ಮೇಲೆ ಭಾನುವಾರ ಸಂಜೆ ಹಲ್ಲೆಯಾಗಿದೆ. ಗುರುಸಿದ್ದಪ್ಪ ಮತ್ತು ತಸ್ರು ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯ್ ಕುಮಾರ್ ಬೆನ್ನು ಮತ್ತು ಬಲಗೈಗೆ ಹಲ್ಲೆ ನಡೆಸಲಾಗಿದೆ. ಪ್ರಾಥಮಿಕವಾಗಿ ಚೂಪಾದ ಆಯುಧದಿಂದ ಹಲ್ಲೆಯಾಗಿದೆ ಎಂದು ತಿಳಿದು ಬಂದಿದೆ. ಯಾವ ಆಯುಧ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಇದು ವೈಯಕ್ತಿಕ ಪ್ರಕರಣವಾಗಿದ್ದು ತನಿಖೆ ಬಳಿಕ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಬ್ಬರ ಬಂಧನ:
ಟಿಪ್ಪು ನಗರದಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
previous post