Malenadu Mitra
ರಾಜ್ಯ ಶಿವಮೊಗ್ಗ

ರಾಜ್ಯ ಬಿಜೆಪಿಯಲ್ಲಿ ಹೆಚ್ಚಾದ ಒಳಬೇಗುದಿ ಯಡಿಯೂರಪ್ಪರನ್ನೇ ಗುರಿಯಾಗಿಸಿತಾ , ಅಡ್ಜಸ್ಟ್ ಮೆಂಟ್ ರಾಜಕಾರಣದ ಆರೋಪ ?

ಶಿವಮೊಗ್ಗ: ರಾಜ್ಯ ಬಿಜೆಪಿಯ ಆಂತರಿಕ ಬೇಗುದಿ ಉಲ್ಬಣವಾಗಿದ್ದು, ಅಡ್ಜಸ್ಟ್‌ಮೆಂಟ್ ರಾಜಕಾರಣದ ದಂಗಲ್ ರೂಪದಲ್ಲಿ ಹಾದಿ ರಂಪವಾಗುತ್ತಿದೆ. ಸರಕಾರ ಮಾಡಿದ್ದ ಪಕ್ಷವೊಂದು ತನ್ನ ಸೋಲಿನ ಆತ್ಮಾವಲೋಕನ ಮಾಡಿಕೊಂಡು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯಪ್ರವೃತ್ತರಾಗಬೇಕಿತ್ತು. ಆದರೆ ಸೋಲಿನ ಹೊಣೆಯನ್ನು ಯಾರ ಹೆಗಲಿಗೆ ಹೊರಿಸಬೇಕೆಂಬ ಚರ್ಚೆಗಳೇ ಇನ್ನೂ ನಡೆಯುತ್ತಿವೆ. ಸರಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನವಾದರೂ ಪ್ರತಿಪಕ್ಷದ ನಾಯಕನನ್ನು ಆಯ್ಕೆಮಾಡಿಲ್ಲ. ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವ ವಿಚಾರದಲ್ಲಿ ಎದ್ದಿರುವ ಬಣಜಗಳ ಅಡ್ಜಸ್ಟ್‌ಮೆಂಟ್ ದಂಗಲ್ ಹೆಚ್ಚಾಗಲು ಕಾರಣವಾಗಿದೆ. ಪ್ರಸ್ತುತ ನಡೆಯುತ್ತಿರುವ ದಂಗಲ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಯಡಿಯೂರಪ್ಪ ಬಣದ ನಡುವಿನ ಜಗಳ ಎಂದು ಯಾರಿಗಾದರೂ ಗೊತ್ತಾಗುತ್ತದೆ
ಅತಿರಥ-ಮಹಾರಥರು ಯಾರು ?

ಬಿಜೆಪಿಯ ಅತಿರಥ ಮಹಾರಥರ ಅಡ್ಜಸ್ಟ್ ಮೆಂಟ್ ರಾಜಕಾರಣದಿಂದ ಪಕ್ಷಕ್ಕೆ ಸೋಲಾಯಿತು ಎಂಬ ಹೇಳಿಕೆಯನ್ನು ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡೇ ನೀಡಲಾಗಿದೆ ಎಂಬ ಮಾತು ಬಿಜೆಪಿ ವಲಯದಲ್ಲಿಯೇ ಕೇಳಿಬರುತ್ತಿರುತ್ತಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಹೊರಹಾಕಿದ ಅಸಮಾಧಾನ ಈಗ ಬಾಗಲಕೋಟೆ, ಬೆಂಗಳೂರುಗಳಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಗದ್ದಲದ ರೂಪ ಪಡೆದಿದೆ.
ಪ್ರತಾಪ್‌ಸಿಂಹ ಹಾಗೂ ಸಿ.ಟಿ.ರವಿ ಅವರು ಬಿ.ಎಲ್.ಸಂತೋಷ್ ಅವರ ಬಣದಲ್ಲಿದ್ದು, ಅವರುಗಳ ಹೇಳಿಕೆ ನೇರವಾಗಿ ಯಡಿಯೂರಪ್ಪರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಹೇಳಿದಂತಿದೆ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ. ಬಿಜೆಪಿ ಸರಕಾರ ಇದ್ದಾಗ ಕಾಂಗ್ರೆಸ್ ಅವಧಿಯ ಅದರಲ್ಲೂ ಸಿದ್ದರಾಮಯ್ಯ ಅವರ ಮೇಲೆ ಆರೋಪ ಇರುವ ರೀಡು ಪ್ರಕರಣಗಳನ್ನು ತನಿಖೆ ಮಾಡಲಿಲ್ಲ ಎಂದು ಸಿಟಿ ರವಿ ಹಲವು ಬಾರಿ ಹೇಳಿದ್ದಾರೆ. ಚುನಾವಣೆಗೂ ಮುನ್ನ ಮೈಸೂರಿನ ವರುಣ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅಭ್ಯರ್ಥಿ ಎಂದು ಹೇಳಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಅಭ್ಯರ್ಥಿ ಬದಲು ಮಾಡಲಾಯಿತು. ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲ ಅಭ್ಯರ್ಥಿಗೆ ಟಿಕೆಟ್ ನೀಡಿತ್ತು ಎಂಬ ವದಂತಿಗಳನ್ನು ಅವಲೋಕಿಸಿದಾಗ ಪ್ರತಾಪ್‌ಸಿಂಹ ಅವರ ಅತಿರಥ ಹೇಳಿಕೆ ಯಾರ ಕುರಿತಾದದ್ದು ಎಂಬುದು ವೇದ್ಯವಾಗುತ್ತದೆ.
ಸಿ ಟಿ ರವಿ ಸೋಲಿಗೆ ಕಾರಣ ಯಾರು ?
ಚುನಾವಣೆ ಪೂರ್ವದಲ್ಲಿ ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನೀಡಿದ್ದ ಹೇಳಿಕೆಗೆ ಕೌಂಟರ್ ನೀಡಿದ್ದ ಸಿ.ಟಿ.ರವಿ ಅವರು, ಯಾರದ್ದೋ ಅಡುಗೆ ಮನೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಆಗುವುದಿಲ್ಲ ಎಂದಿದ್ದರು. ಈ ನಡುವೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಆದ ಬದಲಾವಣೆಗಳಿಂದ ಬಿಜೆಪಿಯ ತಮ್ಮಣ್ಣ ಅವರು ಕಾಂಗ್ರೆಸ್ ಸೇರಿದರು. ಫಲಿತಾಂಶ ಬಂದಾಗ ಲಿಂಗಾಯತ ಸಮುದಾಯದ ತಮ್ಮಣ್ಣ ಗೆದ್ದಿದ್ದರು. ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರು ತಮ್ಮಣ್ಣ ಪರವಾಗಿ ಮೃದು ಧೋರಣೆ ಹೊಂದಿದ್ದರು ಎಂಬುದು ರವಿ ಅವರ ಒಳಗುದಿಯಾಗಿದೆ ಎನ್ನಲಾಗಿದೆ.
ವರುಣ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ವಿ.ಸೋಮಣ್ಣ ಕೂಡಾ ತಮ್ಮ ಸೋಲಿಗೆ ಪಕ್ಷದ ನಾಯಕರೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲಲು ಸ್ವಪಕ್ಷೀಯ ನಾಯಕರ ಪಿತೂರಿಯೂ ಇದೆ ಎಂದು ಸೋಮಣ್ಣ ಅಲವತ್ತುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.


ತಮ್ಮ ಸ್ವಕ್ಷೇತ್ರ ಗೋವಿಂದರಾಜ ನಗರದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಹೋರಾಟ ಮಾಡಿ ವಿಫಲರಾಗಿದ್ದ ಸೋಮಣ್ಣರನ್ನು ಜೋಡಿ ಸೋಲು ಕಂಗೆಡಿಸಿದೆ. ನಾನು ಸೋತು ಮೂಲೆ ಸೇರಿದ್ದು ನನ್ನನ್ನು ಯಾರೂ ಮಾತನಾಡಿಸುತಿಲ್ಲ ಎಂದು ಯಡಿಯೂರಪ್ಪ ಅವರನ್ನೇ ಗುರಿ ಮಾಡಿ ಹೇಳಿಕೆ ಕೊಟ್ಟಿದ್ದರು. ಅರುಣ ಕ್ಷೇತ್ರದಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರು ಮುಕ್ತ ಮನಸ್ಸಿನಿಂದ ಕೆಲಸ ಮಾಡಿಲ್ಲ ಎಂಬ ಅನುಮಾನ ಸೋಮಣ್ಣ ಅವರನ್ನು ಕಾಡುತ್ತಿದೆ. ಚುನಾವಣೆ ಪೂರ್ವದಲ್ಲಿ ಯಡಿಯೂರಪ್ಪ ಅವರೊಂದಿಗೆ ಮುನಿಸಿಕೊಂಡಿದ್ದ ಸೋಮಣ್ಣ ಅವರನ್ನು ಖುದ್ದು ಅಮಿತ್ ಶಾ ಅವರೇ ಸಮಾಧಾನಿಸುವ ಮೂಲಕ ಪಕ್ಷಾಂತರ ಮಾಡುವುದನ್ನು ತಪ್ಪಿಸಿದ್ದರು. ಆ ಸಮಯದಲ್ಲಿ ಮಾಧ್ಯಮದವರ ಮುಂದೆ ಮಾತನಾಡಿದ್ದ ಸೋಮಣ್ಣ ವಿಜಯೇಂದ್ರ ಯಾರ್ರೀ… ಮಾಜಿ ಮುಖ್ಯಮಂತ್ರಿ ಮಗ ಅಷ್ಟೇ.. ನನಗೆ ಅವನ ವಯಸ್ಸಿನ ಮಗ ಇದ್ದಾನೆ ಎಂದು ನೀಡಿದ್ದ ಹೇಳಿಕೆ ಚುನಾವಣೆ ಫಲಿತಾಂಶದಲ್ಲಿ ಪ್ರತಿಫಲಿಸಿದೆ ಎನ್ನಲಾಗುತ್ತಿದೆ.
ಯಡಿಯೂರಪ್ಪರಿಗೆ ಸೀಮಿತವಾಗಿಲ್ಲ:
ಬಿಜೆಪಿಯಲ್ಲಿನ ಒಳಗುದಿ ಗಮನಿಸಿದರೆ, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರಿಂದ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ. ಬಿಜೆಪಿ ಸರಕಾರದ ಆಡಳಿತ ವೈಫಲ್ಯ, ಗುಂಪುಗಾರಿಕೆ, ಶೇ ೪೦ ಭ್ರಷ್ಟಾಚಾರ, ಒಳಮೀಸಲಾತಿ ಇತ್ಯಾದಿ ಸಂಗತಿಗಳು ಸೋಲಿಗೆ ಕಾರಣ ಎಂಬುದನ್ನು ಒಪ್ಪಿಕೊಳ್ಳದ ಬಿಜೆಪಿ ನಾಯಕರು, ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಿಂದಾಗಿ ನಾವು ಸೋತೆವು ಎನ್ನುತ್ತಲೇ ಅಡ್ಜಸ್ಟ್ ಮೆಂಟ್ ರಾಜಕಾರಣದ ಬಗ್ಗೆ ಪರಸ್ಪರ ಕೆಸರು ಎರಚಾಡಿಕೊಳ್ಳುತ್ತಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಮಿಲಾಪ್ ಕುಸ್ತಿಗಳು ನಡೆದಿವೆ ಎಂಬ ವರದಿಯನ್ನು ಬಿ.ಎಲ್.ಸಂತೋಷ್ ಪಡೆದಿದ್ದಾರೆ ಎಂದು ಪಕ್ಷದ ಮೂಲಗಳೇ ಹೇಳುತ್ತಿವೆ.
ಈಶ್ವರಪ್ಪರದೂ ಅದೇ ವರಾತ:

ಮಿಲಾಪ್ ದಂಗಲ್ ನಡುವೆಯೇ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು, ವಲಸಿಗರಿಂದ ಬಿಜೆಪಿಗೆ ಮೈಲಿಗೆಯಾಗಿದೆ ಎಂಬರ್ಥದ ಹೇಳಿಕೆ ನೀಡಿದ್ದಾರೆ. ಪಕ್ಷದಲ್ಲಿನ ಶಿಸ್ತು ಹಾಳಾಗಿದ್ದು, ನಿಜ. ಅದಕ್ಕೆ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ಕರೆತಂದಿದ್ದೇ ಕಾರಣ, ಮುಂದಿನ ದಿನಗಳಲ್ಲಿ ಈ ನಾಯಕರ ಬಾಲ ಕಟ್ ಮಾಡುವ ಕೆಲಸವನ್ನು ಪಕ್ಷದ ನಾಯಕರು ಮಾಡುತ್ತಾರೆ ಎಂದಿದ್ದಾರೆ. ಈಶ್ವರಪ್ಪರ ಈ ಹೇಳಿಕೆಯೂ ಮತ್ತೆ ಯಡಿಯೂರಪ್ಪರನ್ನೇ ಗುರಿಯಾಗಿಸಿದೆ. ಆಪರೇಷನ್ ಕಮಲದ ಮೂಲಕ ಮುಖ್ಯಮಂತ್ರಿ ಆಗಿದ್ದು ಯಡಿಯೂರಪ್ಪ. ೧೭ ಜನ ಶಾಸಕರನ್ನು ಪಕ್ಷಕ್ಕೆ ಕರೆತಂದಿದ್ದ ಯಡಿಯೂರಪ್ಪ ಅವರು ಸರಕಾರ ರಚನೆ ಮಾಡಿದ್ದು, ಈಶ್ವರಪ್ಪರೂ ಸಚಿವರಾಗಿದ್ದರು. ಆಗ ಬೇಡ ಅನ್ನದಿದ್ದ ಈಶ್ವರಪ್ಪ ಈಗ ಬಾಂಬೆ ಬಾಯ್ಸ್‌ಗಳಿಂದ ಪಕ್ಷದ ಶಿಸ್ತು ಹೋಯ್ತು ಎಂದಿದ್ದಾರೆ. ಒಟ್ಟಿನಲ್ಲಿ ಅಡ್ಜಸ್ಟ್‌ಮೆಂಟ್ ರಾಜಕಾರಣದ ಹೆಸರಲ್ಲಿ ಬಿ.ಎಲ್ ಸಂತೋಷ್ ಮತ್ತು ಯಡಿಯೂರಪ್ಪ ಬಣದ ಭಿನ್ನಧ್ವನಿ ತಾರಕಕ್ಕೇರಿದೆ.

ಗೊಂದಲದಲ್ಲಿ ಬಿಜೆಪಿ ಹೈಕಮಾಂಡ್
ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ ಅವರೂ ಸೇರಿದಂತೆ ಬಿಜೆಪಿಯ ರಾಷ್ಟ್ರನಾಯಕರು ರಾಜ್ಯಾದ್ಯಂತ ಕವಾಯತು ನಡೆಸಿದರೂ ಕನ್ನಡಿಗರು ಬಿಜೆಪಿಯನ್ನು ಸೋಲಿಸಿದರು. ಫಲಿತಾಂಶದ ಬಳಿಕ ತಮ್ಮ ಪಕ್ಷದ ಕೆಲವರ ಹೊಂದಾಣಿಕೆ ರಾಜಕಾರಣ ಗೊತ್ತಿದ್ದರೂ ಆಡದ,ಅನುಭವಿಸದಸ್ಥಿತಿ ಬಿಜೆಪಿ ಹೈಕಮಾಂಡ್‌ದಾಗಿದೆ. ಲಿಂಗಾಯತರು ಮತ್ತು ಅಹಿಂದ ವರ್ಗ ಕೈಕೊಟ್ಟಿರುವ ಸತ್ಯ ಗೊತ್ತಿರುವ ಕಾರಣ ಯಡಿಯೂರಪ್ಪ ವಿಚಾರದಲ್ಲಿ ಅದು ಮೃದುಧೋರಣೆ ಅನುಸರಿಸುತ್ತಿದೆ. ಬಿ.ಎಲ್.ಸಂತೋಷ್ ಪ್ರೇಷಿತ ಸ್ಥಳೀಯ ನಾಯಕರು ಯಡಿಯೂರಪ್ಪರನ್ನೇ ಗುರಿ ಮಾಡಿ ಹೇಳಿಕೆ ನೀಡುತ್ತಿದ್ದರೂ ವರಿಷ್ಠರು ಯಡಿಯೂರಪ್ಪ ವಿರೋಧಿ ಬಣಕ್ಕೆ ಪ್ರತಿಪಕ್ಷ ನಾಯಕ ಸ್ಥಾನ ನೀಡುವ ಎದೆಗಾರಿಕೆಯನ್ನೂ ತೋರುತ್ತಿಲ್ಲ.

Ad Widget

Related posts

ನಮ್ಮ ರಾಮ ಹೊಲಗದ್ದೆಗಳಲ್ಲಿದ್ದಾನೆ: ಯುದ್ಧವೀರ್ ಸಿಂಗ್

Malenadu Mirror Desk

ಸಿಡಿ ದೆಸೆಯಿಂದ ರಾಜ್ಯದ ಮಾನ ಹರಾಜು

Malenadu Mirror Desk

ವಿದ್ಯೆಯೊಂದೆ ಸಾಧನೆಗಿರುವ ಅಸ್ತ್ರ,ಹೆಣ್ಣು ಜಾಗೃತವಾದರೆ ಸಮಾಜದ ಏಳಿಗೆ, ಈಡಿಗ ಮಹಿಳಾ ಸಂಘದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸುಜಾತ ರಾಮಕೃಷ್ಣ ಅಭಿಮತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.