ಶಿವಮೊಗ್ಗ ಜು.೪: ರಾಜ್ಯಕ್ಕೆ ಅಕ್ಕಿ ಕೊಡದ, ಸುಳ್ಳು ಭರವಸೆಗಳನ್ನು ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಹಾತ್ಮಾ ಗಾಂಧಿಪಾರ್ಕಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಅವರ ಪ್ರನಾಳಿಕೆಯಲ್ಲಿ ಕೊಟ್ಟ ಭರವಸೆಗಳು ಹುಸಿಯಾಗಿವೆ. ಗ್ಯಾರಂಟಿಯೂ ಒಂದೇ. ಪ್ರನಾಳಿಕೆಯೂ ಒಂದೆ. ಮೋದಿ ಅವರೇ ಹೇಳಿದಂತೆ ಉದ್ಯೋಗ ಕೊಟ್ಟಿಲ್ಲ. ಮನೆಗಳನ್ನು ಕಟ್ಟಿಸಿಲ್ಲ. ಹಣ ಹಾಕುತ್ತೇವೆ ಎಂದರು. ಅದನ್ನೂ ಕೊಟ್ಟಿಲ್ಲ. ಮಹಿಳೆಯರಿಗೆ ಮದುವೆಗೆ ಚಿನ್ನ ಕೊಡುತ್ತೇವೆ ಎಂದಿದ್ದರು. ಅದನ್ನೂ ಕೊಟ್ಟಿಲ್ಲ. ಯಾವ ಭರವಸೆಗಳನ್ನೂ ಅವರು ಈಡೇರಿಸಿಲ್ಲ. ಈಗ ರಾಜ್ಯ ಸರ್ಕಾರಕ್ಕೆ ಅಕ್ಕಿಯನ್ನೂ ಕೊಡಲಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ಕಳೆದ ೯ ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿತ್ತು. ಅದರಂತೆ ೯ ವರ್ಷದಲ್ಲಿ ೧೮ ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಆದರೆ ನೀಡುವುದಿರಲಿ, ಇರುವ ಉದ್ಯೋಗಗಳನ್ನೇ ಕಸಿದುಕೊಂಡಿದೆ ಎಂದು ಆರೋಪಿಸಿದರು.
ದೇಶದ ಎಲ್ಲಾ ರಾಜ್ಯಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ನೋಡಿಕೊಳ್ಳಬೇಕಾದುದು ಪ್ರಧಾನಿಯವರ ಜವಾಬ್ದಾರಿಯಾಗಿದೆ. ಈಗ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಲ್ಲ ಎಂದು ಹೇಳುತ್ತಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುವುದಿಲ್ಲವೇ ಎಂದರು.
ಉಪವಾಸ ಸತ್ಯಾಗ್ರಹದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಮುಖರಾದ ಆರ್.ಎಂ. ಮಂಜುನಾಥ್ ಗೌಡ, ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಎಸ್.ಪಿ. ಶೇಷಾದ್ರಿ, ಹೆಚ್.ಸಿ. ಯೋಗೇಶ್, ಚಂದ್ರಭೂಪಾಲ್, ವಿಜಯ್, ಕಲೀಂ ಪಾಶಾ, ಇಸ್ಮಾಯಿಲ್ ಖಾನ್, ವಿನೋದ್‌ಕುಮಾರ್, ಕಲಗೋಡು ರತ್ನಾಕರ್, ಹೆಚ್.ಪಿ.ಗಿರೀಶ್ ಕೆ. ದೇವೇಂದ್ರಪ್ಪ, ವಿನಯ್ ತಾಂಡ್ಲೆ, ಬಾಲಾಜಿ ಶೆಟ್ಟಿ, ವಿಶ್ವನಾಥಕಾಶಿ, ಮಧುಸೂದನ್, ಚೇತನ್, ಸುವರ್ಣ ನಾಗರಾಜ್, ನಾಗರಾಜ್, ಮಂಜುನಾಥ್ ಪುರಲೆ, ಆರೀಫ್, ಯಮುನಾ ರಂಗೇಗೌಡ, ಕವಿತಾ ರಾಘವೇಂದ್ರ, ವಿಜಯಕುಮಾರ್ ಧನಿ, ವೇದಾವಿಜಯಕುಮಾರ್ ಮತ್ತಿತರರಿದ್ದರು.
ಬಿಜೆಪಿಯದು ಹಪಾಹಪಿತನ
ಅಧಿಕಾರ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂತೆ ಬಿಜೆಪಿಯವರು ವರ್ತಿಸುತ್ತಿದ್ದು, ಹಪಾಹಪಿತನಕ್ಕೆ ಒಳಗಾಗಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಕೊಟ್ಟ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಜಾತಿ,. ಧರ್ಮ, ಹಣದ ಮೇಲೆ ಅದೂ ಸಾಧ್ಯವಾಗದಿದ್ದರೆ ಶಾಸಕರನ್ನು ಕೊಂಡುಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನೇ ಖರೀದಿ ಮಾಡಿದ್ದಾರೆ.ತಾವು ಪ್ರನಾಳಿಕೆಯಲ್ಲಿ ನೀಡಿದ ಯಾವ ಭರವಸೆಯನ್ನೂ ಈಡೇರಿಸದೆ ಈಗ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮನೆಗಳನ್ನೂ ನೀಡಲಿಲ್ಲ. ಉದ್ಯೋಗವನ್ನೂ ಕೊಡಲಿಲ್ಲ. ಡಾಲರ್ ರೇಟ್ ಇಳಿಸುತ್ತೇವೆ ಎಂದು ಅದನ್ನೂ ಮಾಡಲಿಲ್ಲ ಎಂದರು.
ಹಿಂದು ಧರ್ಮದ ಪ್ರತಿಪಾದಕ ಗಾಂಧೀಜಿಯವರನ್ನೇ ದೂರ ತಳ್ಳುತ್ತಿದ್ದಾರೆ. ಅವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ಧೈರ್ಯವೇ ಇಲ್ಲ. ಅಂಬೇಡ್ಕರ್ ಅವರನ್ನು ಕಡೆಗಣಿಸಿದರೆ ಅವರು ಅಧಿಕಾರಕ್ಕೆ ಬರುವುದೂ ಇಲ್ಲ. ಹಿಂದು ಧರ್ಮದಲ್ಲಿ ಇರುವ ನ್ಯೂನತೆ ಸರಿಪಡಿಸುವ ಬಗ್ಗೆ ಮಾತಾಡುವುದೇ ಇಲ್ಲ ಎಂದರು.