Malenadu Mitra
ರಾಜ್ಯ ಶಿವಮೊಗ್ಗ

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ?
ಕಾಂಗ್ರೆಸ್ ಬೆಂಬಲಿತ ಸಹಕಾರಿಗಳು ತಂತ್ರ

ಶಿವಮೊಗ್ಗ: ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಎಂ. ಬಿ. ಚನ್ನವೀರಪ್ಪ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಬೆಂಬಲಿಗರು ಸಿದ್ಧತೆ ನಡೆಸಿದ್ದು, ಬುಧವಾರ ಈ ಸಂಬಂಧ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ನೀಡುವ ಸಾಧ್ಯತೆ ಇದೆ.
ಆರ್.ಎಂ.ಮಂಜುನಾಥಗೌಡರ ಸದಸ್ಯತ್ವ ರದ್ದಾದ ಬಳಿಕ ಯಡಿಯೂರಪ್ಪ ಅವರ ಪರಮಾಪ್ತರು ಹಾಗೂ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದ ಚನ್ನವೀರಪ್ಪ ಗೌಡ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದರು.
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದು, ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರಾಗಿರುವ ಮಂಜುನಾಥ ಗೌಡ ಅವರು ಬ್ಯಾಂಕಿನ ಆಡಳಿತಮಂಡಳಿಯೊಳಗೆ ಪ್ರವೇಶ ಪಡೆಯಲು ಕಾನೂನು ಹೋರಾಟ ಮುಂದುವರಿಸಿದ್ದಾರೆ. ಈ ಬೆಳವಣಿಗೆ ನಡುವೆಯೇ ಬಿಜೆಪಿ ಬೆಂಬಲಿತ ಅಧ್ಯಕ್ಷರನ್ನು ಕೆಳಗಿಳಿಸುವ ತಂತ್ರಗಾರಿಕೆ ನಡೆಯುತ್ತಿದೆ. ಡಿಸಿಸಿ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಪಕ್ಷಾತೀತವಾಗಿ ಆರ್.ಎಂ.ಮಂಜುನಾಥ ಗೌಡರ ಅನುಯಾಯಿಗಳಿದ್ದು, ಅವರ ಪ್ರಭಾವಳಿಯಲ್ಲಿಯೇ ಅವಿಶ್ವಾಸ ನಿರ್ಣಯ ಮಂಡನೆಗೆ ಅಖಾಡ ಸಿದ್ಧವಾಗುತ್ತಿದೆ ಎಂದು ಹೇಳಲಾಗಿದೆ.

ಈ ನಡುವೆ ಮಂಜುನಾಥ ಗೌಡ ಅವರು ಕಳೆದ ಎರಡು ವರ್ಷಗಳಿಂದ ಹೊರಗಿದ್ದು, ಹೇಗಾದರೂ ಮಾಡಿ ಬ್ಯಾಂಕಿನ ನಿರ್ದೇಶಕ ಮಂಡಳಿಯೊಳಗೆ ಬರುವ ತವಕದಲ್ಲಿದ್ದಾರೆ. ಇತ್ತೀಚೆಗಷ್ಟೇ ಮಂಜುನಾಥಗೌಡ ಅವರನ್ನು ನಿರ್ದೇಶಕರನ್ನಾಗಿ ಮರು ನೇಮಕಮಾಡಲು ಸಹಕಾರ ಇಲಾಖೆ ಆದೇಶಿಸಿತ್ತು. ಆದರೆ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಯಾವುದೇ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯತ್ವ ಹೊಂದಿರದ ಗೌಡರನ್ನು ನಿರ್ದೇಕರನ್ನಾಗಿಸಲು ಸಾಧ್ಯವಿಲ್ಲ. ಮೇಲಾಗಿ ಆಡಳಿತ ಮಂಡಳಿಯಲ್ಲಿ ಯಾವುದೇ ನಿರ್ದೇಶಕ ಸ್ಥಾನ ಖಾಲಿ ಇಲ್ಲ ಎಂಬ ಕಾನೂನು ತೊಡಕು ತೋರಿಸಿದ್ದ ಡಿಸಿಸಿ ಬ್ಯಾಂಕ್ ಎಂ ಡಿ ಗೌಡರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲು ಬರುವುದಿಲ್ಲ ಎಂದು ಹಿಂಬರಹ ನೀಡಿದ್ದರು.
ವ್ಯವಸ್ಥಾಪಕ ನಿರ್ದೇಶಕರ ಆದೇಶ ಪ್ರಶ್ನಿಸಿ ಮಂಜುನಾಥ ಗೌಡರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ನ್ಯಾಯಾಲಯದ ನೀಡಿರುವ ಆದೇಶದ ಪ್ರತಿ ಇನ್ನಷ್ಟೇ ಕೈ ಸೇರಬೇಕಿದೆ. ಶುಕ್ರವಾg ನ್ಯಾಯಾಲಯ ನೀಡಿರುವ ತೀರ್ಪನ್ನು ಉಭಯ ಬಣದವರು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನ ನೀಡುತ್ತಿದ್ದಾರೆ.
ಅವಿಶ್ವಾಸ ಗೆಲ್ಲಲು ಬೇಕಿದೆ ೮ ಮತಗಳು:
ಕಾಂಗ್ರೆಸ್ ಬೆಂಬಲಿತ ಸದಸ್ಯರು ಉಪಾಧ್ಯಕ್ಷ ಎಸ್.ಎಲ್. ಷಡಾಕ್ಷರಿ, ವಿಜಯದೇವ್, ಎಸ್.ಪಿ.ದಿನೇಶ್, ದುಗ್ಗಪ್ಪ ಗೌಡ, ವೆಂಕಟೇಶ್, ಪರಮೇಶ್, ಮತ್ತು ಸುಧೀರ್ ಇದ್ದಾರೆ. ಆಡಳಿತದ ಚುಕ್ಕಾಣಿ ಹಿಡಿಯಲು ೮ ನಿರ್ದೇಶಕರ ಅಗತ್ಯವಿದೆ. ಮತ್ತೋರ್ವ ನಿರ್ದೇಶಕ ಜೆಡಿಎಸ್‌ನ ಜೆ.ಪಿ.ಯೋಗೀಶ್ ಸಹ ಗೌಡರ ಪರವಿದ್ದು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಬೆಂಬಲಿತರಾಗಿ ಚನ್ನವೀರಪ್ಪ, ಶ್ರೀಪಾದ ಹೆಗಡೆ, ,ಬಿ.ಡಿ.ಭೂಕಾಂತ್, ಗುರುರಾಜ್,ಅಶೋಕ್ ಇದ್ದಾರೆ. ಸಹಕಾರ ಕಾಯ್ದೆ ಪ್ರಕಾರ ಅವಿಶ್ವಾಸ ನಿರ್ಣಯದಲ್ಲಿ ನಾಮನಿರ್ದೇಶಕರಿಗೆ ಮತದಾದ ಹಕ್ಕಿಲ್ಲ.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಈಗಾಗಲೇ ಸಭೆ ನಡೆಸಿದ್ದು, ಬುಧವಾರ ಅವಿಶ್ವಾಸ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Ad Widget

Related posts

ಓಡಿ ಹೋಗುವ ಸಂಸ್ಕೃತಿ ಬಿಜೆಪಿಲಿಲ್ಲ, ತಪ್ಪು ಪುನರಾವರ್ತನೆ ಆಗುವುದು ಬೇಡ : ಜನಸ್ವರಾಜ್ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

Malenadu Mirror Desk

ನೂತನ ಶಿಕ್ಷಣ ನೀತಿಯಿಂದ ಉದ್ಯೋಗಾವಕಾಶ ಹೆಚ್ಚಲಿದೆ: ಪ್ರೊ. ವೈ. ಎಸ್. ಸಿದ್ದೇಗೌಡ

Malenadu Mirror Desk

ಬೆಂಕಿ ಆರಿಸುವವರಿದ್ದಾಗಲೇ ಸಮಾಜದ ಉನ್ನತಿ ಸಾಧ್ಯ: ಸ್ವಾಮಿ ವಚನಾನಂದ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.