Malenadu Mitra
ರಾಜ್ಯ ಶಿವಮೊಗ್ಗ

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆ, ಬಿಜೆಪಿಗೆ ಮುಖಭಂಗ ಅವಿಶ್ವಾಸ ನಿರ್ಣಯಕ್ಕೆ ಗೆಲುವು, ಬಿಜೆಪಿ ಪರ ಕೇವಲ 3 ಮತ

ಶಿವಮೊಗ್ಗ: ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ. ಪ್ರಭಾರ ಅಧ್ಯಕ್ಷರಾಗಿ ಹೆಚ್.ಎಲ್. ಷಡಾಕ್ಷರಿ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಅವರ ವಿರುದ್ಧ ಶುಕ್ರವಾರ ಡಿಸಿಸಿ ಬ್ಯಾಂಕ್ ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ನಿರ್ಣಯವನ್ನು ಮತಕ್ಕೆ ಹಾಕಲಾಗಿದ್ದು, 13 ಮಂದಿ ಮತದಾನದಲ್ಲಿ ಭಾಗವಹಿಸಿದ್ದರು. ಒಬ್ಬರು ಮುಚ್ಚಿದ ಲಕೋಟೆ ನೀಡಿದರು. ಅವಿಶ್ವಾಸ ನಿರ್ಣಯದ ಪರ 9 ಮತಗಳು ಹಾಗೂ ಅಧ್ಯಕ್ಷರ ಪರ 3 ಮತಗಳು ಚಲಾಯಿಸಲ್ಪಟ್ಟವು. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರಲಿಲ್ಲ.
ಅಧ್ಯಕ್ಷರ ಪರವಾಗಿ ಬಿ.ಡಿ. ಭೂಕಾಂತ್, ಅಗಡಿ ಅಶೋಕ್ ಮತ್ತು ಅಧ್ಯಕ್ಷ ಚನ್ನವೀರಪ್ಪ ಮತ ಚಲಾಯಿಸಿದ್ದರು. ಅವಿಶ್ವಾಸ ನಿರ್ಣಯದ ಪರವಾಗಿ ಹೆಚ್.ಎಲ್. ಷಡಾಕ್ಷರಿ, ಹೆಚ್.ಎನ್. ವಿಜಯದೇವ್. ದುಗ್ಗಪ್ಪಗೌಡ, ವೆಂಕಟೇಶ್, ಎಸ್.ಪಿ. ದಿನೇಶ್, ಯೋಗೀಶ್, ಶ್ರೀಪಾದ ರಾವ್ ನಿಸರಾಣಿ, ಪರಮೇಶ್ ಮತ ಚಲಾಯಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವೆಂಕಟಾಚಲಪತಿ ಕಾರ್ಯನಿರ್ವಹಿಸಿದ್ದರು.
ಪೊಲೀಸ್ ಬಂದೋಬಸ್ತ್

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ಮುಖ್ಯದ್ವಾರ ಹಾಗೂ ಸುತ್ತಮುತ್ತ ಪೊಲೀಸ್ ಬಿಗಿ ಪಹರೆ ಕೈಗೊಳ್ಳಲಾಗಿತ್ತು. ಡಿಸಿಸಿ ಬ್ಯಾಂಕ್ ಆವರಣದಲ್ಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಮುಖಂಡರಾದ ಆರ್.ಎಂ. ಮಂಜುನಾಥ ಗೌಡ, ಹೆಚ್.ಎಸ್. ಸುಂದರೇಶ್, ಪಿ.ಒ.ಶಿವಕುಮಾರ್, ವಿದ್ಯಾಧರ ಮೊದಲಾದವರು ಇದ್ದರು.


ಅಡ್ಡದಾರಿ ಆಡಳಿತ: ಬೇಳೂರು ಗೋಪಾಲಕೃಷ್ಣ


ಶಿವಮೊಗ್ಗ: ಅಡ್ಡದಾರಿ ಮುಖಾಂತರ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿದ ಬಿಜೆಪಿಯನ್ನು ಪ್ರಜಾಪ್ರಭುತ್ವ ಆಶಯದ ಅನುಸಾರವಾಗಿ ಅವಿಶ್ವಾಸ ನಿರ್ಣಯ ಮಂಡಿಸಿ ಗೆಲುವು ಸಾಧಿಸಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಡಿಸಿಸಿ ಬ್ಯಾಂಕಿನ ಅವಿಶ್ವಾಸ ನಿರ್ಣಯ ಗೆದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಡೆದಿರುವ ನೇಮಕಾತಿ ಹಗರಣವೂ ಸೇರಿದಂತೆ ಬ್ಯಾಂಕಿನ ಆರ್ಥಿಕ ವ್ಯವಹಾರವನ್ನು ತನಿಖೆಗೆ ಒಳಪಡಿಸುವುದಾಗಿ ಹೇಳಿದರು.
ಬಿಜೆಪಿಯವರು ಬಂದ ಮೇಲೆ ರಾಜ್ಯ ಸರ್ಕಾರವನ್ನು ಬಳಸಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ. ನೇಮಕಾತಿಯಲ್ಲಿ ಲಂಚ ಪಡೆಯಲು ಅಭ್ಯರ್ಥಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿಯೇ ಸಾಲ ನೀಡಲಾಗಿದೆ. ಇವೆಲ್ಲವನ್ನು ತನಿಖೆ ನಡೆಸಲಾಗುವುದು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಹಕಾರ ಸಚಿವರಿಗೆ ಮನವಿ ನೀಡಲಾಗುವುದು ಎಂದರು.

ಬಹುಮತ ಇಲ್ಲದಿದ್ದರೂ ಬಿಜೆಪಿಯಿಂದ ಅಧಿಕಾರ: ಮಂಜುನಾಥ್‌ಗೌಡ

ಡಿಸಿಸಿ ಬ್ಯಾಂಕಿನಿಂದ ಪ್ರಜಾತಂತ್ರಕ್ಕೆ ವಿರುದ್ಧವಾಗಿ ನೋಟೀಸ್ ಕೂಡ ನೀಡದೇ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ನನ್ನನ್ನು ಅನರ್ಹಗೊಳಿಸಲಾಗಿತ್ತು , ಆದರೆ ಡಿಸಿಸಿ ಬ್ಯಾಂಕಿನಲ್ಲಿ ಬಹುಮತ ಇಲ್ಲದಿದ್ದರೂ ಅಧಿಕಾರ ನಡೆಸಲಾಗುತ್ತಿತ್ತು ಅವರನ್ನು ಪ್ರಜಾಸತ್ತಾತ್ಮಕವಾಗಿ ಬ್ಯಾಂಕಿನ ಚುನಾಯಿತ ನಿರ್ದೇಶಕರು ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಂತ್ರದ ಮೂಲಕ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ. ಡಿಸಿಸಿ ಬ್ಯಾಂಕಿನಲ್ಲಿ ಆಗಿರುವ ಲೋಪಗಳ ಬಗ್ಗೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ. ಡಿಸಿಸಿ ಬ್ಯಾಂಕ್ ಉಳಿಸುವ ಕೆಲಸ ಆಗಲಿದೆ. ನಾವು ಯಾರನ್ನು ಅನರ್ಹತೆ ಮಾಡಿಲ್ಲ ಎಂದರು.

ಅಧ್ಯಕ್ಷರು ಗೌರವಯತವಾಗಿ ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿಯಬೇಕಿತ್ತು,ಆದರೆ ಅನಿವಾರ್ಯವಾಗಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಅಧ್ಯಕ್ಷರು ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ,ಅನಿವಾರ್ಯವಾಗಿ ಕೆಳಗಿಳಿಸಿದ್ದೇವೆ. ಪ್ರಭಾರ ಅಧ್ಯಕ್ಷನಾಗಿರುವ ತನಕ ರೈತರ ಹಾಗೂ ಸಹಕಾರ ಕ್ಷೇತ್ರಕ್ಕೆ ಶ್ರಮಿಸುತ್ತೇನೆ.


ಹೆಚ್.ಎಲ್.ಷಡಾಕ್ಷರಿ

Ad Widget

Related posts

ಅಪ್ಪಾಜಿ ಗೌಡರಿಲ್ಲದ ಭದ್ರಾವತಿ ನಗರಸಭೆ ಚುನಾವಣೆ ಹೇಗಿದೆ ಗೊತ್ತಾ ?

Malenadu Mirror Desk

ರಾಗಿಗುಡ್ಡ ಸಹಜ ಸ್ಥಿತಿಗೆ, ನಗರಕ್ಕೆ ವಿಸ್ತಾರವಾದ ನಿಷೇಧಾಜ್ಞೆ, ಆಸ್ಪತ್ರೆಗೆ ರಾಜಕೀಯ ಮುಖಂಡರ ಭೇಟಿ

Malenadu Mirror Desk

ಪ್ರೊ. ಸಿ. ಎಂ. ತ್ಯಾಗರಾಜ್ ಅಧಿಕಾರ ಸ್ವೀಕಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.