ಶಿವಮೊಗ್ಗ,ಆ.೧೪: ಇಲ್ಲಿನ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಸಿಬ್ಬಂದಿಗಳ ನೇಮಕಾತಿ ಪ್ರಕರಣವನ್ನು ಸಿಐಡಿ ತನಿಖೆಗೊಳಪಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಸಹಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ
.ಹಿಂದಿನ ಸರಕಾರದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಗುಮಾಸ್ತರು ಮತ್ತು ಅಟೆಂಡರ್‌ಗಳ ನೇಮಕಕ್ಕೆ ಪ್ರವೇಶ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಪರೀಕ್ಷೆಯನ್ನು ಅನಧಿಕೃತ ಶಿಕ್ಷಣ ಸಂಸ್ಥೆಗೆ ನೀಡಿದ್ದು, ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನಡೆದಿದೆ ಎಂಬ ದೂರುಗಳು ಬಂದಿವೆ. ಹುದ್ದೆ ವಂಚಿತ ಅಭ್ಯರ್ಥಿಗಳು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರು ಪ್ರಕರಣದ ತನಿಖೆ ಮಾಡಬೇಕೆಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಇಲಾಖೆ ಗಮನ ಹರಿಸದಿರುವುದು ಆಶ್ಚರ್ಯವಾಗಿದೆ. ಸಹಕಾರ ಇಲಾಖೆ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಮಧುಬಂಗಾರಪ್ಪ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ನೇಮಕಾತಿಯಲ್ಲಿ ನಿಯಮ ಪಾಲಿಸಿಲ್ಲ ಮತ್ತು ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪಗಳು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.