ಶಿವಮೊಗ್ಗ: ಈ ದೇಶವನ್ನು ವಿದೇಶಿಯರ ಆಡಳಿತದಿಂದ ಮುಕ್ತಿಗೊಳಿಸುವಲ್ಲಿ ನಾಡಿನ ಲಕ್ಷಾಂತರ ಜನ ಜಾತಿ, ಮತ, ಪಂತ ತೊರೆದು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ ಸಿಂಗ್, ಸುಭಾಸ್‌ಚಂದ್ರ ಬೋಸ್, ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಹೋರಾಟಗಾರರ ತ್ಯಾಗದ ಫಲ ಇಂದಿನ ಸ್ವಾತಂತ್ರ್ಯ ದಿನಾಚರಣೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಬಣ್ಣಿಸಿದರು.
೭೭ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಜಿಲ್ಲೆಯ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ವಿಶೇಷವಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಐವರು ಹೋರಾಟಗಾರರು ನೇಣಿಗೆ ಕೊರಳೊಡ್ಡಿ ಹುತಾತ್ಮರಾಗಿದ್ದು ಅವರಿಗೆ ನನ್ನ ನಮನ ಸಲ್ಲಿಸುವೆ ಎಂದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶವು ಎದುರಿಸುತ್ತಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಸಫಲರಾಗಿದ್ದೇವೆ. ಇಲ್ಲಿನ ಜನರ ಹಸಿವು, ಬಡತನ, ದಾರಿದ್ರ್ಯ, ಅನಕ್ಷರತೆ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು
ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕಗ್ಗಂಟಾಗಿರುವ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲಿ ಸದರಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವಿನ ಭೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆಗೆ ಎಲೆಚುಕ್ಕೆ ರೋಗ, ಕೃಷಿಕರಿಗೆ ಆತಂಕ ತಂದೊಡ್ಡಿದೆ. ಅಲ್ಲದೇ ಮಾರುಕಟ್ಟೆ ಅಸ್ತಿರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರವು ರೈತರ ಹಿತರಕ್ಷಣೆಗೆ ಬದ್ದವಾಗಿದೆ. ಜಿಲ್ಲೆಯಲ್ಲಿ ಭತ್ತದ ಬೆಳೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಭತ್ತದ ಬೆಳೆ ಪ್ರೋತ್ಸಾಹಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಸರ್ಕಾರವು ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಯನ್ನೇ ಧ್ಯೇಯವಾಗಿಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಪ್ರತಿ ಮನೆಯಲ್ಲಿ ಬೆಳಕು ಸೂಸುವ ಗೃಹಜ್ಯೋತಿ ಯೋಜನೆಯಡಿ ತಿಂಗಳಿಗೆ ೨೦೦ ಯುನಿಟ್ ವರೆಗಿನ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ರಾಜ್ಯದಲ್ಲಿ ೧.೪೫ಕೋಟಿಗೂ ಅಧಿಕ ಕುಟುಂಬಗಳು ಹೆಸರು ನೋಂದಾಯಿಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯಡಿ ಸೌಲಭ್ಯ ಪಡೆಯಲು ರಾಜ್ಯದ ಅಸಂಖ್ಯಾತ ಮಹಿಳೆಯರು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕವಾಗಿ ರೂ.೨,೦೦೦ ಗಳ ಆರ್ಥಿಕ ನೆರವು ನೀಡಲಾಗುವುದು. ಈ ಯೋಜನೆಯ ಅನುಷ್ಠಾನದಿಂದಾಗಿ ಮಹಿಳೆಯರ ಸಬಲೀಕರಣ ಮತ್ತು ಅವರ ಜೀವನೋಪಾಯ ಸುಧಾರಣೆಗೆ ಸಹಕಾರಿಯಾಗಲಿದೆ. ಸುಮಾರು ೧.೨೮ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಐದು ಕೆ.ಜಿ. ಅಕ್ಕಿ ಪಡೆಯುವ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು ೧೦ಕೆಜಿ. ಉಚಿತ ಅಕ್ಕಿಯನ್ನು ನೀಡುವ ಕಾರ್ಯಕ್ರಮ ರಾಜ್ಯದಾದ್ಯಂತ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ರಾಜ್ಯವು ಅನ್ನಭಾಗ್ಯ ಯೋಜನೆಯಡಿ ಖರೀದಿಸಲು ಸಾಧ್ಯವಾಗದ ೫ಕೆ.ಜಿ. ಅಕ್ಕಿಗೆ ಬದಲಾಗಿ ಫಲಾನುಭವಿಯ ಖಾತೆಗೆ ನೇರವಾಗಿ ರೂ.೧೭೦ರೂ.ಗಳನ್ನು ಜಮಾ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಸೇರಿದಂತೆ ಹಲವರಿದ್ದರು.
ಪ್ರಸ್ತುತ ಸಂದರ್ಭದಲ್ಲಿ ಮುಂಗಾರು ಮಳೆ ವಿಳಂಬವಾದರೂ ಜಿಲ್ಲೆಯಲ್ಲಿ ಬಿದ್ದಿರುವ ಮಳೆಯ ಪ್ರಮಾಣ ಪೂರ್ಣ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. ಹಿಂಗಾರು ಮಳೆ ರೈತರ ನಿರೀಕ್ಷೆಯಂತೆ ಬರುವ ಆಶಾ ಭಾವನೆ ಹೊಂದಲಾಗಿದೆ. ಈಗಾಗಲೇ ಬಿದ್ದಿರುವ ಮಳೆಯಿಂದಾಗಿ ಆಗಿರುವ ಜನ-ಜಾನುವಾರುಗಳ ಜೀವಹಾನಿ, ಬೆಳೆಹಾನಿಗಳ ಮಾಹಿತಿ ಸಂಗ್ರಹಿಸಿ, ಸಂತ್ರಸ್ಥರಿಗೆ ಕೂಡಲೆ ಪರಿಹಾರಧನ ಬಿಡುಗಡೆಗೊಳಿಸುವಂತೆ ಸೂಚನೆ ನೀಡಲಾಗಿದೆ.
ಮಧು ಬಂಗಾರಪ್ಪ, ಸಚಿವ