ತುಮರಿ: ಹಿರಿಯರ ಬಲಿದಾನದಿಂದ ಗಳಿಸಿರುವ ಸ್ವಾತಂತ್ರ್ಯ ಸರಿದಾರಿಯಲ್ಲಿ ಬಳಕೆಯಾಗಬೇಕು. ಇಂದಿನ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಿದೆ ಎಂದು ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಹೇಳಿದರು.
ಚೌಡಮ್ಮ ದೇವಿ ದೇವಳದ ಆವರಣದಲ್ಲಿ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ನಾಗರೀಕರಿಗೂ ಇದು ನನ್ನ ದೇಶ, ನನ್ನ ನೆಲ ಎಂಬ ಭಾವನಾತ್ಮಕ ಸಂಬಂಧ ಇರಬೇಕು. ದೇಶದ ಕೀರ್ತಿ ಮತ್ತು ಅಖಂಡತೆಗೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ಹೇಳಿದರು.
ಸ್ವಾತಂತ್ರೋತ್ಸವ ಅಂಗವಾಗಿ ದೇವಿಗೆ ತ್ರಿವರ್ಣದ ಅಲಂಕಾರ ಮಾಡಲಾಗಿತ್ತು. ನೆರೆದ ಭಕ್ತಾದಿಗಳಿಗೆ ಸಿಹಿವಿತರಣೆ ಮಾಡಲಾಯಿತು. ಈ ಸಂದರ್ಭ ದೇವಾಲಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್, ವ್ಯವಸ್ಥಾಪಕ ಪ್ರಕಾಶ್, ಕೈಸೋಡಿ ನಾಗರಾಜ್, ಸಂದೀಪ್,ಸಂಧ್ಯಾಸಿಗಂದೂರು ಸೇರಿದಂತೆ ಸ್ಥಳೀಯ ಪ್ರಮುಖರು, ಅರ್ಚಕ ವೃಂದ ಉಪಸ್ಥಿತರಿದ್ದರು.