Malenadu Mitra
ರಾಜ್ಯ ಶಿವಮೊಗ್ಗ ಸಾಗರ

ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವಿರಬೇಕು: ಐಎಎಸ್ ಅಧಿಕಾರಿ ತೇಜಸ್ವಿನಾಯ್ಕ್, ತರಳೀಮಠದಲ್ಲಿ ಮೌಲ್ಯಾಧರಿತ ಶಿಕ್ಷಣ ಕುರಿತ ವಿಚಾರಸಂಕಿರಣ

ಸಿದ್ದಾಪುರ(ಉ.ಕ): ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಇದ್ದಾಗ ಮಾತ್ರ ಅವರ ಅರಿವಿನ ಪರಿಧಿ ವಿಸ್ತಾರವಾಗುತ್ತದೆ. ಹೆಚ್ಚು ಓದಬೇಕು. ಇತಿಹಾಸವನ್ನು ಅಧ್ಯಯನ ಮಾಡಬೇಕು ಎಂದು ಕೇಂದ್ರ ಕೃಷಿ ಸಚಿವರ ಆಪ್ತಕಾರ್ಯದರ್ಶಿ ತೇಜಸ್ವಿ ನಾಯ್ಕ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಶ್ರೀ ಸಂಸ್ಥಾನ ತರಳೀಮಠದಲ್ಲಿ ಶನಿವಾರ ನಡೆದ ಮೌಲ್ಯಾಧರಿತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಜವಬ್ದಾರಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಓದು ಮತ್ತು ಸಂಶೋಧನೆಯ ಬೆನ್ನು ಹತ್ತಿದವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡುತ್ತಾರೆ. ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಒಂದು ದೊಡ್ಡ ಚಾಲೆಂಜ್ ಆಗಿದೆ. ಮಕ್ಕಳು ಮೊಬೈಲ್‌ನಲ್ಲಿ ಯಾವ ಸಂಗತಿಯ ಬಗ್ಗೆ ಕೇಂದ್ರೀಕರಿಸುತ್ತಾರೆ ಮತ್ತು ಏನಕ್ಕೆ ಅಡಿಕ್ಟ್ ಆಗಿದ್ದಾರೆ ಎಂಬುದನ್ನು ಪೋಷಕರು ಗಮನಿಸಬೇಕೆಂದರು. ಯಾರು ಕಷ್ಟ ಪಟ್ಟು ಅಧ್ಯಯಶೀಲರಾಗುತ್ತಾರೊ ಅವರಿಗೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಅರುಣಾಚಲ ಪ್ರದೇಶದಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ದಾಮೋಧರ್ ಎ.ಟಿ. ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ವಿಶಿಷ್ಟ ಪರಂಪರೆಯನ್ನು ಹೊಂದಿರುವ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಕ್ತಿತ್ವ ರೂಪಿಸುವ ಬದಲು ಅಂಕಗಳ ಹಿಂದೆ ಹೋಗುವ ಪರಿಪಾಠವಿದೆ. ಆದರೆ ಉತ್ತಮ ವ್ಯಕ್ತಿತ್ವ ರೂಪಿಸುವ ಮೂಲಕ ಸಮಾಜಕ್ಕೆ ಉತ್ತಮ ನಾಗರೀಕರನ್ನು ಕೊಡುವತ್ತ ಚಿತ್ತ ಹರಿಸಬೇಕಿದೆ. ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಮಾರ್ಗವನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಕಂಡುಕೊಳ್ಳಬೇಕಿದೆ. ಸಮಾಜದಲ್ಲಿ ಸ್ಥಾನಮಾನ ಪಡೆದ ವ್ಯಕ್ತಿಗಳು ಸಮಾಜಮುಖಿ ಕೆಲಸ ಮಾಡಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕು.ಪೋಷಿಣಿ ಅವರು ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ಮನೆಯಿಂದಲೇ ರೂಪುಗೊಳ್ಳುತ್ತದೆ. ಪೋಷಕರು ನಡೆದುಕೊಳ್ಳುವ ರೀತಿ, ಬೆಳೆಸಿಕೊಂಡ ಅಭ್ಯಾಸಗಳು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ತಂದೆ ತಾಯಿ ಮಕ್ಕಳೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳಬೇಕು. ಮಕ್ಕಳನ್ನು ಪೋಷಕರು ಗಮನಿಸಬೇಕು. ಮೊಬೈಲ್ ಮತ್ತು ಟಿವಿಗಳಲ್ಲಿ ಪೋಷಕರೇ ಮುಳುಗಿಹೋಗಬಾರದು ಎಂದು ಸಲಹೆ ಮಾಡಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ವಸಂತ ನಾಯ್ಕ್ ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬರುವುದು ಮನೆಯಿಂದಲೇ ಆಗಿರುತ್ತದೆ. ಪೋಷಕರು ಮಕ್ಕಳೊಂದಿಗೆ ಆತ್ಮೀಯ ಸಂಬಂಧ ಹೊಂದಿರಬೇಕು.ಅವರ ಮುಂದೆ ಮದ್ಯಪಾನ, ಧೂಮಪಾನ ಮಾಡಿದರೆ ಅವರಿಗೆ ಸಂಸ್ಕಾರ ಕೊಟ್ಟಂತಾಗುವುದಿಲ್ಲ. ಆದಷ್ಟು ವೈಜ್ಞಾನಿಕ ಮನೋಭಾವಗಳಲ್ಲಿ ಅವರಲ್ಲಿ ಬಿತ್ತಬೇಕು ಎಂದು ಹೇಳಿದರು. ಹಿರಿಯ ಸಂಶೋಧಕ ಮಧುಗಣಪತಿರಾವ್ ಮಡೆನೂರು ಅವರು ತರಳೀ ಮಠದ ಐತಿಹಾಸಿಕ ಮಹತ್ವ ಕುರಿತು ಮಾಹಿತಿ ನೀಡಿದರು.


ಮೌಢ್ಯಗಳನ್ನು ತೊಡೆದು ಹಾಕಬೇಕು: ಯೋಗೇಂದ್ರ ಶ್ರೀ


ದಿವ್ಯ ಸಾನ್ನಿಧ್ಯ ವಹಿಸಿದ್ದ ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತರಾದ ಶ್ರೀ ಯೋಗೇಂದ್ರ ಗುರೂಜಿ ಆಶೀರ್ವಚನ ನೀಡಿ, ತಳ ಸಮುದಾಯದ ಜನ ಮೌಢ್ಯಗಳಿಂದ ದೂರವಿರಬೇಕು. ಯಾರೊ ಹೇಳಿದ ಶಾಸ್ತ್ರ ಕೇಳಿ ಇಲ್ಲದ ಆಚರಣೆ ಮಾಡಿ ಆರ್ಥಿಕ ನಷ್ಟ ಮಾಡಿಕೊಳ್ಳಬಾರದು. ಶ್ರಮವಹಿಸಿ ದುಡಿಯಬೇಕು. ಅಧ್ಯಯನ ಮಾಡಿ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಶ್ರೀ ಸಂಸ್ಥಾನ ತರಳೀಮಠದವನ್ನು ಜನರ ಮಠವಾಗಿ ಬೆಳೆಸಲು ಎಲ್ಲರ ಸಹಕಾರ ಬೇಕು. ಈ ಭಾಗದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಇದನ್ನು ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆ. ಇದಕ್ಕೆ ಟ್ರಸ್ಟ್‌ನವರು ಕಂಕಣಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜವನ್ನು ಕಟ್ಟಲು ಎಲ್ಲರಲ್ಲೂ ಸಮಾನ ಮನೋಭಾವ ಬೇಕು. ಮುಂದಿನ ದಿನಗಳಲ್ಲಿ ಇಲ್ಲಿ ಸಮಾಜಮುಖಿ ಕೆಲಸಗಳು ಹೆಚ್ಚಾಗಿ ನಡೆಯಲಿವೆ ಎಂದು ಯೋಗೇಂದ್ರ ಶ್ರೀ ಹೇಳಿದರು. ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ, ಗುರುಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಎನ್.ಡಿ.ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಹೆಚ್.ನಾಯ್ಕ್ ವಂದಿಸಿದರು. ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.


ವಿದ್ಯಾರ್ಥಿಗಳ ವ್ಯಕ್ತಿತ್ವ ಮನೆಯಿಂದಲೇ ರೂಪುಗೊಳ್ಳುತ್ತದೆ. ಪೋಷಕರು ನಡೆದುಕೊಳ್ಳುವ ರೀತಿ, ಬೆಳೆಸಿಕೊಂಡ ಅಭ್ಯಾಸಗಳು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ತಂದೆ ತಾಯಿ ಮಕ್ಕಳೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳಬೇಕು. ಮಕ್ಕಳನ್ನು ಪೋಷಕರು ಗಮನಿಸಬೇಕು.

ಕು.ಪೋಷಿಣಿ,ಸಂಪನ್ಮೂಲ ವ್ಯಕ್ತಿ

Ad Widget

Related posts

ಶಾಸಕ ಅಶೋಕ್ ನಾಯ್ಕ ಭರದ ಪ್ರಚಾರ

Malenadu Mirror Desk

ವಿಐಎಸ್‌ಎಲ್: ನುಡಿದಂತೆ ನಡೆಯದ ಬಿಜೆಪಿ,  ಭದ್ರಾವತಿ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ

Malenadu Mirror Desk

ಈಡಿಗ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಒಪ್ಪಿಗೆ
ಬಜೆಟ್ ಅಧಿವೇಶನದಲ್ಲಿ ಅನುದಾನ ಮೀಸಲಿಡುವ ಭರವಸೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.