ಶಿವಮೊಗ್ಗ : ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಅನುಷ್ಠಾನ ಮಾಡಲಾದ ಸುಧಾರಿತ (ಐಟಿಎಂಎಸ್) ಇಂಟೆಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ತಂತ್ರಾಂಶದ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ನೋಟೀಸ್ ಗಳನ್ನು ಕಳುಹಿಸುವ ವ್ಯವಸ್ಥೆಯನ್ನು ಆ. 28ರಿಂದ ಜಾರಿ ಮಡಲಾಗುವುದು.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠ ಜಿ ಕೆ ಮಿಥುನ್‌ಕುಮಾರ್, ನಗರದಲ್ಲಿ ಸುಗಮ ಮತ್ತು ಅಪಘಾತ ಮುಕ್ತ ಸಂಚಾರ ವ್ಯವಸ್ಥೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಐಟಿಎಂಸ್ ನ ಅಡಿಯಲ್ಲಿ ಪ್ರಮುಖ ೧೩ ವೃತ್ತಗಳಲ್ಲಿ ಎಟಿಪಿಎಸ್‌ಗಳನ್ನು, 72 ಕಡೆ ಆರ್‌ಎಲ್‌ವಿಡಿ ಕ್ಯಾಮೆರಾಗಳನ್ನು, 30 ಕಡೆ ಎಸ್ ವಿ ಡಿ ಕ್ಯಾಮೆರಾ, 38 ಸ್ಥಳಗಳಲ್ಲಿ ಪಿಟಿಝಡ್ ಕ್ಯಾಮೆರಾ,8 ಸ್ಥಳಗಳಲ್ಲಿ ಎಎಸ್ ವಿಡಿ ಕ್ಯಾಮೆರಾ, 10 ಕಡೆ ಸ್ಮಾಲ್ ಪೋರ್‍ಟ್, 360 ಕಡೆ ಪೆನಾರಮಿಕ್ ಕ್ಯಾಮೆರಾ, 44 ಸ್ಥಳಗಳಲ್ಲಿ ಎಎನ್‌ಪಿಆರ್ ಕ್ಯಾಮೆರ ಅಳವಡಿಸಲಾಗಿದೆ ಮತ್ತು ಈ ಎಲ್ಲಾ ಕ್ಯಾಮೆರಾಗಳನ್ನು ಓಎಫ್ ಸಿ ನೆಟ್ ವರ್‍ಕ್ ಮುಖಾಂತರ ಕೇಂದ್ರೀಕೃತವಾಗಿ ಕಮಾಂಡ್- ಕಂಟ್ರೋಲ್ ಸೆಂಟರ್‌ಗೆ ಸಂಪರ್ಕಿಸಲಾಗಿದೆ. ಎಲ್ಲಾ ಕ್ಯಾಮೆರಾಗಳ ವಿಡಿಯೋ ಚಿತ್ರೀಕರಣದ ದತ್ತಾಂಶವನ್ನು ಕಮಾಂಡ್- ಕಂಟ್ರೋಲ್ ಸೆಂಟರ್‌ನಲ್ಲಿಯೇ ಸಂಗ್ರಹಿಸಲಾಗುತ್ತದೆ ಎಂದರು.
ಆರ್ ಎಲ್ ವಿಡಿ ಕ್ಯಾಮೆರಾಗಳು ವಾಹನ ಚಾಲಕರು ಸಿಗ್ನಲ್ ಜಂಪ್ ಮಾಡಿದಾಗ, ಸಿಗ್ನಲ್ ಜಂಪ್ ಮಾಡಿದ ವಾಹನದ ಫೋಟೋ ಮತ್ತು ವಿಡಿಯೋ ತುಣುಕನ್ನು ಮತ್ತು ಎಸ್ ವಿ ಡಿ ಕ್ಯಾಮೆರಾ ವಾಹನ ಸವಾರರು ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿದಾಗ ಅಂತಹ ವಾಹನಗಳ ಫೋಟೋಗಳನ್ನು ಹಾಗೂ ಇನ್ನುಳಿದ ಕ್ಯಾಮೆರಾಗಳು ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಚಲಾಯಿಸುವುದು, ಟ್ರಿಪಲ್ ರೈಡಿಂಗ್, ಮೊಬೈಲ್ ರೈಡಿಂಗ್, ಒನ್ ವೇ ಉಲ್ಲಂಘನೆ, ನೋ ಎಂಟ್ರಿ ಉಲ್ಲಂಘನೆ, ನೋ ಪಾರ್ಕಿಂಗ್ ಉಲ್ಲಂಘನೆ ಮುಂತಾದವನ್ನು ಫೋಟೋ ಮತ್ತು ವಿಡಿಯೋ ಮಾಡುತ್ತವೆ. ಅಲ್ಲಿಂದ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ಅದು ರವಾನೆಯಾಗುತ್ತದೆ ಎಂದರು.
ನಂತರ ಐಟಿಎಂಸ್ ತಂತ್ರಾಂಶದ ಸಹಾಯದಿಂದ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮಾಹಿತಿಯನ್ನು ಪರಿಶೀಲಿಸಿ, ಸಂಚಾರ ನಿಯಮ ಉಲ್ಲಂಘನೆಯ ನೋಟೀಸ್ ಅನ್ನು ಸೃಜನೆ ಮಾಡಿ, ವಾಹನದ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮುಖಾಂತರ ಅಥವಾ ವಾಹನ ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ನೋಟೀಸ್ ಅನ್ನು ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ವಾಹನಗಳ ಮಾಲೀಕರು ತಮ್ಮ ವಿಳಾಸಕ್ಕೆ ಅಂಚೆ ಮೂಲಕ ಅಥವಾ ತಮ್ಮ ಮೊಬೈಲ್ ಫೋನ್ ಗಳಿಗೆ ಎಸ್ ಎಂಎಸ್ ಮೂಲಕ ಸಂಚಾರ ನಿಯಮ ಉಲಂಘನೆಯ ಚಲನ್, ನೋಟೀಸ್ ಬಂದ, ನೋಟೀಸ್ ನಲ್ಲಿ ನಮೂದಿಸಿರುವ ದಂಡದ ಮೊತ್ತವನ್ನು ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಹೋಗಿ ಅಥವಾ ಕರ್ತವ್ಯನಿರತ ಸಂಚಾರಿ ಪೊಲೀಸ್ ಅಧಿಕಾರಿಗಳ ಹತ್ತಿರ ಹೋಗಿ ಸ್ಪಾಟ್ ಫೈನ್ ಡಿವೈಸ್ ನಲ್ಲಿ ಪರಿಶೀಲಿಸಿ ದಂಡದ ಮೊತ್ತವನ್ನು ಪಾವತಿ ಮಾಡಿ ನೋಟೀಸ್ ಅನ್ನು ಮುಕ್ತಾಯ ಮಾಡಬಹುದು ಎಂದರು.
ಸೃಜನೆ ಮಾಡಲಾದ ನೋಟೀಸ್ ಗಳ ವಿವರವನ್ನು ಇ-ಚಲನ್ ತಂತ್ರಾಂಶಕ್ಕೆ ಸಂಯೋಜಿಸಲಾಗಿದೆ. ಸಂಚಾರ ಪೊಲೀಸ್ ಠಾಣೆಗಳ ಅಧಿಕಾರಿಗಳ ಬಳಿ ಇರುವ ಸ್ಪಾಟ್ ಫೈನ್ ಡಿವೈಸ್ ನಲ್ಲಿ ವಾಹನದ ನೊಂದಣಿ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿದಾಗ ಸದರಿ ವಾಹನಕ್ಕೆ ಸಂಬಂಧಿಸಿದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ವಿವರವು ದೊರೆಯಲಿದೆ. ದಂಡದ ಮೊತ್ತವನ್ನು ಸ್ಥಳದಲ್ಲಿಯೇ ಪಾವತಿ ಮಾಡಿ, ನೋಟೀಸ್ ಅನ್ನು ಮುಕ್ತಾಯ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮಿಥುನಕುಮಾರ್, ಎಸ್ ಪಿ