ಬೆಂಗಳೂರು: ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರಿದರು. ಇದೇ ಸಂದರ್ಭ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿ.ವೈ.ವಿಜಯೇಂದ್ರ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದ ನಾಗರಾಜಗೌಡ ಅವರನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಪಕ್ಷದ ವಿರುದ್ಧ ಬಂಡೆದ್ದಿದ್ದ ನಾಗರಾಜ್ ಗೌಡ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಧ್ವಜ ಸ್ವೀಕರಿಸುವ ಮೂಲಕ ಆಯನೂರು ಮಂಜುನಾಥ್ ಪಕ್ಷ ಸೇರ್ಪಡೆಯಾದರು.
ನಂತರ ಮಾತನಾಡಿದ ಡಿಕೆ ಶಿವಕುಮಾರ್, ಆಯನೂರು ಮಂಜುನಾಥ್ ಅವರ ಮುಂದಿನ ರಾಜಕೀಯ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು. ಕಾಂಗ್ರೆಸ್ ಪಕ್ಷದಲ್ಲಿ ಬೇರೂರಿದರೆ ಸೂಕ್ತ ಸ್ಥಾನಮಾನಗಳು ಸಿಗಲಿವೆ. ಬಂದು ಹೋಗುವ ಪ್ರವೃತ್ತಿ ಮೈಗೂಡಿಸಿಕೊಂಡರೆ ಸಿಗಬೇಕಾದ ಅವಕಾಶಗಳು ತಪ್ಪುತ್ತವೆ, ಅಷ್ಟೇ ಅಲ್ಲ ಜನ ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಪಕ್ಷದ ನಾಯಕರು, ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ರಾಷ್ಟ್ರ ಧ್ವಜದ ಗುರುತು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಇತಿಹಾಸವಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ ಎಂದ ಅವರು, ಪಕ್ಷ ಸೇರ್ಪಡೆಯಾಗುವವರಿಗೆ ಟಿಕೆಟ್ ಭರವಸೆ ನೀಡಿಲ್ಲ ಎಂದರು. ಶಾಸಕ ಬೇಳೂರು ಗೋಪಾಲಕೃಷ್ಣ, ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಮತ್ತಿತರರು ಹಾಜರಿದ್ದರು.