ಸಾಗರ: ಸಮಾಜದ ಮೂಲ ಬದಲಾವಣೆ ಹೋರಾಟದಿಂದ ಮಾತ್ರ ಸಾಧ್ಯ ಎಂಬುದು ದೇವರಾಜ ಅರಸು ಅವರ ಆಶಯವಾಗಿತ್ತು, ಅಂದಿನ ಗೇಣಿದಾರರೇ ಇಂದಿನ ಭೂಮಿ ಹಕ್ಕಿನ ಒಡೆಯರಾಗಿದ್ದು, ಇದರಿಂದಲೇ ಉಳುವವನೆ ಹೊಲದೊಡೆಯ ಕಾಯ್ದೆ ಜಾರಿ ಸಾಧ್ಯವಾಯಿತು ಎಂದು ಮಾಜಿ ಸಚಿವ, ಹಿರಿಯ ಮುತ್ಸದಿ, ಕಾಗೋಡು ತಿಮ್ಮಪ್ಪ ಹೇಳಿದರು.
ಸಾಗರ ಪ್ರಾಂತ್ಯ ಆರ್ಯಈಡಿಗರ ಸಂಘವು ಈಡಿಗರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾಜದ ನೂತನ ಶಾಸಕರು, ಸಚಿವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಗೋಡು ಚಳವಳಿಯ ಫಲಶೃತಿಯಾಗಿ ಇಡೀ ಹಿಂದುಳಿದ ಮತ್ತುದಲಿತ ಸಮುದಾಯಕ್ಕೆ ಭೂಮಿಯ ಹಕ್ಕು ಸಿಕ್ಕಿದೆ. ಇನ್ನೂ ಆಗಬೇಕಿರುವ ಕೆಲಸಗಳಿಗೆ ಯುವಕರಲ್ಲಿ ಹೋರಾಟದ ಮನೋಭಾವ ಬೇಕಿದೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು, ಕಾಗೋಡು ತಿಮ್ಮಪ್ಪನವರಿಗೆ ಅರಸು ಪ್ರಶಸ್ತಿ ನೀಡಿರುವುದು ಪ್ರಶಸ್ತಿಗೆ ಗೌರವ ತಂದಿದೆ, ನಮ್ಮ ಪ್ರತಿ ಹೆಜ್ಜೆಯಲ್ಲಿ ಅವರ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲಾಗುವುದು ಎಂದರು. ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮ ಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡುವ ಅಭಿಲಾಷೆ ಇದೆ. ಕಾಗೋಡು ತಿಮ್ಮಪ್ಪನವರ ಸೈದ್ಧಾಂತಿಕ ಚಿಂತನೆ, ಬದುಕಿನ ಬದ್ದತೆ ನಮಗೆ ವ್ಯಕ್ತಿಗತವಾಗಿ ಬಂದಿದ್ದು ಅವರ ಆಶಯವನ್ನು ಸಾಕಾರ ಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು, ಮಾತನಾಡಿ, ಸಮಾಜ ಬೆಳೆಯ ಬೇಕಾದರೆ ಶಿಸ್ತು ಹಾಗೂ ಗುರಿಗಳು ಇರಬೇಕು ಈ ನೆಲೆಯಲ್ಲಿ ಸೂಕ್ತ ಮಾರ್ಗದರ್ಶನ ಸಮಾಜಕ್ಕೆ ಬೇಕಿದೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದ ನನಗೆ ಜನರ ಪ್ರೀತಿ ಹಾರೈಕಿ ಸಿಕ್ಕಿರುವುದನ್ನು ಎಂದೂ ಮರೆಯಲಾರೆ. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತೇವೆ. ರಾಜ್ಯದಲ್ಲಿ ನಾಲ್ಕನೇ ದೊಡ್ಡ ಸಮುದಾಯವಾದ ಈಡಿಗ ಸಮಾಜ ನಾಯಕತ್ವದ ಕೊರತೆಯಿದೆ. ಧಾರ್ಮಿಕ ಮಠಾಧೀಶರು ಇದರ ನೇತೃತ್ವ ವಹಿಸಿಕೊಳ್ಳಬೇಕು. ಸಮಾಜ ನೌಕರರು ಉದ್ಯೋಗ ಸಿಗುತ್ತಲೇ ಸಮಾಜದಿಂದ ವಿಮುಖರಾಗುತ್ತಿರುವುದು ದುರದೃಷ್ಟಕರ ಎಂದರು.
ಶಿರಸಿ – ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,, ಸಮಾಜ ಬಂಧುಗಳು ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಹಾಗು ಸೇವೆ ಮಾಡುವ ಮೂಲಕ ಇತರೆ ಸಮುದಾಯಗಳು ನಮ್ಮನ್ನು ಗೌರವಿಸುವಿಸುವ ನಮ್ಮ ನಾಯಕತ್ವ ಒಪ್ಪಿಕೊಳ್ಳುವ ಹಾಗೆ ಬೆಳೆಯಬೇಕಿದೆ ಎಂದರು. ಟಿ.ಪರಮೇಶ್ವರಪ್ಪ, ಎಂ.ಸಿ.ಪರಶುರಾಮಪ್ಪ, ತಾರಾಮೂರ್ತಿ, ಕರುಣಾಕರ್, ಷಣ್ಮುಖ, ಹೆಚ್.ಆರ್.ರವಿಕುಮಾರ್ ಸಿಗಂದೂರು, ಕಲಸೆ ಚಂದ್ರಪ್ಪ ಮತ್ತಿತರರು ವೇದಿಕೆಯಲ್ಲಿದ್ದರು. ಮಂಜಪ್ಪ ಮರಸ ಸ್ವಾಗತಿಸಿದರು. ಪಾಂಡುರಂಗ ಪ್ರಾಸ್ತಾವಿಕ ಮಾತನಾಡಿದರು. ಗಗನ ಪ್ರಾರ್ಥಿಸಿದರು. ಜ್ಯೋತಿ ಈರೇಶ್, ಅಮೃತ ಕಾರ್ಯಕ್ರಮ ನಿರೂಪಿಸಿದರು.
ಸಿಗಂದೂರು ದೇವಸ್ಥಾನಕ್ಕೆ ಭೂ ಮಂಜೂರಾತಿ ನೀಡಿ
ಹಿಂದುಳಿದ ವರ್ಗದ ಈಡೀಗ ಸಮುದಾಯಕ್ಕೆ ಸೇರಿದ ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವ ಪ್ರಸ್ತಾಪ ಕೈಬಿಡಬೇಕು, ದೇವಸ್ಥಾನಕ್ಕೆ ಸಂಬಂದಿಸಿದ ಎಲ್ಲಾ ಪ್ರಕರಣ ಕೈಬಿಟ್ಟು ಆಡಳಿತ ಮಂಡಳಿಗೆ ಅಗತ್ಯ ೧೨ಎಕರೆ ಭೂಮಿ ಮಂಜೂರಾತಿ ನೀಡುವ ಮೂಲಕ ಭಕ್ತರಿಗೆ ಮೂಲ ಭೂತ ಸೌಕರ್ಯ ಕಲ್ಪಿಸಲು ಅವಕಾಶ ನೀಡಬೇಕು ಎಂದು ಪ್ರಾಂತ್ಯ ಆರ್ಯ ಈಡಿಗರ ಸಂಘದ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕಾಗೋಡು ತಿಮ್ಮಪ್ಪನವರ ಸೈದ್ಧಾಂತಿಕ ಚಿಂತನೆ, ಬದುಕಿನ ಬದ್ದತೆ ನಮಗೆ ವ್ಯಕ್ತಿಗತವಾಗಿ ಬಂದಿದ್ದು ಅವರ ಆಶಯವನ್ನು ಸಾಕಾರ ಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಮಧುಬಂಗಾರಪ್ಪ, ಸಚಿವ
ರಾಜ್ಯದಲ್ಲಿ ನಾಲ್ಕನೇ ದೊಡ್ಡ ಸಮುದಾಯವಾದ ಈಡಿಗ ಸಮಾಜ ನಾಯಕತ್ವದ ಕೊರತೆಯಿದೆ. ಧಾರ್ಮಿಕ ಮಠಾಧೀಶರು ಇದರ ನೇತೃತ್ವ ವಹಿಸಿಕೊಳ್ಳಬೇಕು. ಸಮಾಜ ನೌಕರರು ಉದ್ಯೋಗ ಸಿಗುತ್ತಲೇ ಸಮಾಜದಿಂದ ವಿಮುಖರಾಗುತ್ತಿರುವುದು ದುರದೃಷ್ಟಕರ
ಬೇಳೂರು ಗೋಪಾಲಕೃಷ್ಣ, ಶಾಸಕ