Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಬಿಜೆಪಿ ನಾಯಕರಿಗೆ ಮೋದಿಯೇ ಉತ್ತರ ಕೊಟ್ಟಿದ್ದಾರೆ
ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯ


ಶಿವಮೊಗ್ಗ: ವಿರೋಧ ಪಕ್ಷದವರು ಸರಕಾರದ ಉಚಿತ ಕೊಡುಗೆಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದರೂ ಅವರನ್ನು ನಾವು ದೂರ ನಿಲ್ಲಿಸುವುದಿಲ್ಲ. ಅವರ ಪ್ರಧಾನಿಯವರೇ ನಿಲ್ಲಿಸಿದ್ದಾರೆ. ಪ್ರಧಾನಿ ಬಂದಾಗ ರಾಜ್ಯಾಧ್ಯಕ್ಷರೇ ಬ್ಯಾರಿಕೇಡ್ ಹಿಂದೆ ನಿಂತಿದ್ದರು. ಈ ನಾಯಕರಿಗೆ ಪ್ರಧಾನಿ ಉತ್ತರ ಕೊಟ್ಟಿದ್ದನ್ನು ಜನರು ನೋಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬುಧವಾರ ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಇತಿಹಾಸ ಪುಟಕ್ಕೆ ಸೇರುವ ಯೋಜನೆಯನ್ನು ರಾಜ್ಯ ಸರ್ಕಾರ ಕೊಟ್ಟಿದೆ. ಈ ಮೂಲಕ ಮನೆಯೊಡತಿಗೆ ೨ ಸಾವಿರ ಕೊಡಲಾಗುತ್ತಿದೆ. ಬೆಲೆ ಏರಿಕೆಯ ನಡುವೆ ಕುಟುಂಬದ ನಿರ್ವಹಣೆಗೆ ಈ ಅಲ್ಪ ಮೊತ್ತವನ್ನು ಕೊಡಲಾಗುತ್ತಿದೆ. ಅನ್ನಭಾಗ್ಯ, ಗೃಹಜ್ಯೋತಿ, ಹಾಗೂ ಶಕ್ತಿ ಯೋಜನೆ ಈಗಾಗಲೇ ಕೊಟ್ಟಿದ್ದೇವೆ ಎಂದರು.
ಪ್ರಧನಿ ಮೋದಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಡುತ್ತೇವೆ ಎಂದಿದ್ದರು.ಆದರೆ ಇಂದಿನಿಂದ ೨೦೦ ರೂ. ಕಡಿಮೆ ಮಾಡಿದ್ದಾರೆ. ಪುಕ್ಕಟೆ ಕೊಡುತ್ತೇವೆ ಎಂದು ಹೇಳಿದ ಮಾತು ಉಳಿಸಿಕೊಳ್ಳಲಿ. ಉಚಿತವಾಗಿ ಕೊಡಲಿ. ನಾನೇ ಹೋಗಿ ಹಾರ ಹಾಕುವೆ. ಸನ್ಮಾನ ಮಾಡುವೆ ಎಂದು ಹೇಳಿದರು.
ಬರಗಾಲ ಪರಿಸ್ಥಿತಿ :
ರಾಜ್ಯದಲ್ಲಿ ಬರದ ಪರಿಸ್ಥಿತಿ ಇದೆ. ಬರಗಾಲ ಎಂದು ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರದ ನಿಯಮಾವಳಿ ಯಲ್ಲಿ ಒಂದಷ್ಟು ಬದಲಾವಣೆ ಆಗಬೇಕು. ಎಲ್ಲವನ್ನೂ ಪರಿಶೀಲಿಸಿ, ಸರ್ಕಾರ ನಿರ್ಧಾರ ಮಾಡುತ್ತದೆ. ಶಿವಮೊಗ್ಗ ಜಿಲ್ಲೆಯನ್ನು ಬರ ಪೀಡಿತ ಘೋಷಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ೧೦೦ ದಿನ ಪೂರೈಸಿದ ಬೆನ್ನಲ್ಲೇ ಬಿಜೆಪಿಯವರು ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದಾರೆ. ಭ್ರಷ್ಠಾಚಾರ, ಜನರಿಗೆ ಸರಿಯಾದ ಸವಲತ್ತು ಮೊದಲಾದ ಕೊರತೆಯ ಮತ್ತು ಆರೋಪ ಬಿಡುಗಡೆ ಮಾಡಿದ್ದಾರೆ. ಅದರಿಂದ ಎಷ್ಟು ಜನಕ್ಕೆ ತೊಂದರೆ ಉಂಟಾಗಿದೆ, ಸುಮ್ಮನೆ ಪಟ್ಟಿ ಬಿಡುಗಡೆ ಮಾಡಿದರೆ ಸಾಲದು. ಅದರಲ್ಲಿ ವಿಚಾರಗಳು ಇರಬೇಕು. ಟೀಕೆ- ಟಿಪ್ಪಣಿ ಬಿಟ್ಟು ಬೇರೇನೂ ಮಾಡಲು ಇವರಿಂದ ಸಾಧ್ಯವಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ಗೃಹಲಕ್ಷ್ಮಿ ಯೋಜನೆಗೆ ಸಚಿವ ಮಧು ಚಾಲನೆ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ’ಗೃಹಲಕ್ಷ್ಮಿ’

ಶಿವಮೊಗ್ಗ, ಆಗಸ್ಟ್ ೩೦, : ಗೃಹಲಕ್ಷ್ಮಿ ಯೋಜನೆ ಒಂದು ಐತಿಹಾಸಿಕ ಮತ್ತು ದೇಶದಲ್ಲಿಯೇ ವಿಶೇಷ ಕಾರ್ಯಕ್ರಮವಾಗಿದೆ. ಪ್ರತಿ ಕುಟುಂಬದ ಯಜಮಾನಿಯರೇ ಆ ಕುಟುಂಬದ ನಿಜವಾದ ಮುಖ್ಯಮಂತ್ರಿಗಳು. ಅವರ ಮೇಲೆ ಇಡೀ ಕುಟುಂಬ ನಿರ್ವಹಣೆ ಜವಾಬ್ದಾರಿ ಇರುತ್ತದೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದ ವಿಷಯದಲ್ಲಿ ಗೃಹಲಕ್ಷ್ಮಿ ಯೋಜನೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಆರಿಸಿ ಕಳುಹಿಸಿದ್ದೀರಿ. ಸರ್ಕಾರ ತಾನು ನೀಡಿದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿರುವ ’ಶಕ್ತಿ’ ಯೋಜನೆ ಮಹಿಳೆಯರನ್ನು ಸಬಲಗೊಳಿಸಿದೆ. ಯಾವುದೇ ವ್ಯಕ್ತಿ ಹಸಿವಿನಿಂದ ಮಲಗಿದರೆ ಸರ್ಕಾರದಕ್ಕೆ ಗೌರವ ಸಿಗುವುದಿಲ್ಲ. ಆದ್ದರಿಂದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ೧೦ ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ಸರ್ಕಾರ ಅದನ್ನೂ ಜಾರಿಮಾಡಿದೆ. ೩೨ ವರ್ಷದಿಂದ ರೈತರಿಗೆ ೧೦ ಎಚ್‌ಪಿ ಪಂಪ್‌ಸೆಟ್‌ಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಗೃಹ ಬಳಕೆದಾರರಿಗೆ ಗರಿಷ್ಟ ೨೦೦ ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತಿರುವುದು ಜನರಿಗೆ ಅತ್ಯಂತ ಸಹಕಾರಿಯಾಗಿದೆ. ಸರ್ಕಾರ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಗೃಹಲಕ್ಷ್ಮಿ ಯೋಜನೆಯ ರೂ.೨೦೦೦ ಗಳನ್ನು ವಿತರಣೆ ಮಾಡಿದರು. ಹಾಗೂ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್‌ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಯಿತು.
ಮಾಜಿ ವಿಧಾನ ಪರಿಷತ್ ಶಾಸಕ ಆರ್.ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್, ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್ ಪಿ ಮಿಥುನ್‌ಕುಮಾರ್, ಎಸಿ ಸತ್ಯನಾರಾಯಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸಂತೋಷ್‌ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಈವರೆಗೆ ೩೬೦೨೯೪ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದ್ದು, ಇನ್ನೂ ೩೨೦೦೦ ಮಹಿಳೆಯರ ನೋಂದಣಿ ಬಾಕಿ ಇದೆ. ನೋಂದಣಿಯಾದ ಫಲಾನುಭವಿಗಳು ತಮ್ಮ ಅಕ್ಕಪಕ್ಕದವರಿಗೆ ಈ ಬಗ್ಗೆ ತಿಳಿಸಿ ಸಹಕರಿಸಬೇಕು. ಹಾಗೂ ಜಿಲ್ಲಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಇನ್ನು ೭ ರಿಂದ ೧೦ ದಿನಗಳ ಒಳಗೆ ಈ ಬಾಕಿ ನೊಂದಣಿ ಮಾಡಿಸಿ ಶೇ.೧೦೦ ಗುರಿ ತಲುಪಬೇಕು.


ಮಧು ಬಂಗಾರಪ್ಪ, ಸಚಿವ

…………..

Ad Widget

Related posts

ಜನಸಾಮಾನ್ಯರಿಗೆ ನಿವೇಶನಗಳನ್ನು ನೀಡಲು ಲೇಔಟ್ ಸಿದ್ದಪಡಿಸಲು ಸಚಿವ ಬೈರತಿ ಸುರೇಶ್ ಸೂಚನೆ

Malenadu Mirror Desk

ಶಿವಮೊಗ್ಗ ಅಭಿವೃದ್ಧಿ ಯೋಜನೆಗಳನ್ನು ತ್ವರಿತ ಪೂರ್ಣಗೊಳಿಸಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ

Malenadu Mirror Desk

ಮುಂದಿನ ಜೂನ್ ಅಂತ್ಯದ ಒಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.