ಶಿವಮೊಗ್ಗ,ಆ.31: ಜನಸಮುದಾಯದ ಅಭಿವೃದ್ಧಿಯಾದಾಗ ಮಾತ್ರ ಯಾವುದೇ ಊರಿನ ಸಮಗ್ರ ಅಭಿವೃದ್ಧಿಯಾದಂತೆ, ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಆಗಿರುವುದು ಸಂತೋಷದ ಸಂಗತಿ ಇದರೊಂದಿಗೆ ಬಡ ಜನರ ಏಳಿಗೆಯತ್ತಲೂ ನಾವು ಗಮನ ಹರಿಸಬೇಕಿದೆ ಎಂದು ಶಾಲಾ ಶಿಕ್ಷಣ ಮತ್ತ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಅಭಿಪ್ರಾಯಪಟ್ಟರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ಸಂವಾದ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ದೇವರಾಜು ಅರಸು ,ಎಸ್.ಬಂಗಾರಪ್ಪ ಹಾಗೂ ಸಿದ್ದರಾಮಯ್ಯ ಈ ಎಲ್ಲರ ಆದರ್ಶ ಸಾಮಾಜಿಕ ನ್ಯಾಯ ಮತ್ತು ಕೆಳಸ್ತರದ ಜನರ ಕಲ್ಯಾಣವಾಗಿತ್ತು. ಇದೇ ನೆಲೆಯಲ್ಲಿ ಬಂದ ನನಗೂ ನನ್ನ ಜಿಲ್ಲೆಯ ಜನರಿಗೆ ಮೂಲಸೌಕರ್ಯ ಸಿಗಬೇಕೆಂಬ ಬಯಕೆ ಇದೆ. ವಿಮಾನ ನಿಲ್ದಾಣ ಆಗಿರುವುದರ ಲಾಭ ಸಾಮಾನ್ಯ ಜನರಿಗೂ ಸಿಗಬೇಕು. ಇಲ್ಲಿ ಕೈಗಾರಿಕೆಗಳು ನಿರ್ಮಾಣವಾಗಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಹೂಡಿಕೆದಾರರ ಸಮಾವೇಶ ಮಾಡುವುದು ಮುಖ್ಯವಲ್ಲ ಉದ್ದಿಮೆದಾರರು ಬರುವಂತೆ ಮೂಲಕ ಸೌಕರ್ಯ ಕಲ್ಪಿಸುವುದು ಅಷ್ಟೇ ಮುಖ್ಯವಾಗುತ್ತದೆ ಎಂದು ಮಧುಬಂಗಾರಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹವಾಯಿ ಚಪ್ಪಲಿ ಹಾಕುವವನೂ ವಿಮಾನ ಯಾನ ಮಾಡಬೇಕೆಂಬ ಕನಸು ಹೊಂದಿದ್ದಾರೆ. ಆದರೆ ಈಗ ಆ ಪರಿಸ್ಥಿತಿ ಇಲ್ಲವಾಗಿದೆ. ಭಾಷಣ ಮಾಡಿದರೆ ಆಗದು ಅದು ಕಾರ್ಯಗತವಾಗಬೇಕು. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಭರವಸೆಗಳನ್ನು ನೀಡಿತ್ತು. ಅವುಗಳನ್ನು ಹಂತಹಂತವಾಗಿ ಈಡೇರಿಸಲಾಗುತ್ತಿದೆ. ಈ ಬದ್ಧತೆಯನ್ನೂ ಕೇಂದ್ರ ಸರಕಾರವೂ ತೋರಬೇಕು. ಶಿವಮೊಗ್ಗದಿಂದ ವಿಮಾನ ಪ್ರಯಾಣದರ ದುಬಾರಿಯಾಗಿದ್ದು, ಮುಂದಿನ ದಿನಗಳಲ್ಲಿಅದು ಸಾಮಾನ್ಯ ಜನರಿಗೆ ತಲುಪುವಂತಾಗಬೇಕು. ವಾಯುಯಾನದ ಲಾಭ ಬಳಸಿಕೊಂಡು ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಕೆಲಸ ಮಾಡಲಿದೆ ಎಂದು ಹೇಳಿದರು.
ನಾನೊಬ್ಬ ಹೋರಾಟಗಾರ:
ತಂದೆ ಬಂಗಾರಪ್ಪ ಅವರ ಹಾದಿಯಲ್ಲಿ ಬಂದಿರುವ ನಾನೂ ಒಬ್ಬ ಹೋರಾಟಗಾರ, ಜನರ ಪರ ಆಂದೋಲನ ಮಾಡಿಕೊಂಡು ಬಂದಿರುವ ಕಾರಣ ನನಗೆ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ವಿವಿಧ ಅಧಿಕಾರವನ್ನು ನೀಡಿತ್ತು. ಸರಕಾರ ಬಂದ ಬಳಿಕವೂ ಹೆಚ್ಚು ಜನರ ಒಡನಾಟ ಇರುವ ಶಿಕ್ಷಣ ಇಲಾಖೆಯನ್ನು ನೀಡಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಪುಣ್ಯದ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲಿರುವ ಸಮಸ್ಯೆಯನ್ನು ಅಧ್ಯಯನ ಮಾಡುತ್ತಿದ್ದೇನೆ. ಹಿಂದಿನ ಸರಕಾರ ಪಠ್ಯಪುಸ್ತಕದಲ್ಲಿ ಕೆಲವು ಪಠ್ಯಗಳ ಮೂಲಕ ವಿದ್ಯಾರ್ಥಿಗಳ ಮನಸಿನಲ್ಲಿ ತಾರತಮ್ಯ ತುಂಬುವ ಪ್ರಯತ್ನ ಮಾಡಿರುವುದನ್ನು ತೆಗೆದು ಹಾಕಲಾಗಿದೆ. ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವುದು ನಮ್ಮ ಆದ್ಯತೆ ಎಂದು ಅವರು ಪ್ರತಿಪಾದಿಸಿದರು.
ಈ ಸಂದರ್ಭ ಸಚಿವ ಮಧುಬಂಗಾರಪ್ಪ ಅವರನ್ನು ಅಭಿನಂದಿಸಲಾಯಿತು. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್ ಯಡಗೆರೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು.
ಪ್ರತಿ ಜಿಲ್ಲೆಯ ಮಕ್ಕಳೂ ಹೆಚ್ಚಿನ ಫಲಿತಾಂಶ ತರಬೇಕು. ಜಿಲ್ಲೆಗಳ ನಡುವೆ ಯಾಕೆ ಫಲಿತಾಂಶದಲ್ಲಿ ಅಂತವಿದೆ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇನೆ. ಎಲ್ಲಾ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಿರುವೆ. ಮುಂದಿನ ದಿನಗಳಲ್ಲಿ ಜಿಲ್ಲೆಗಳ ಫಲಿತಾಂಶದಲ್ಲಿ ಅಂತರ ಕಡಿಮೆಯಾಗಬೇಕು. ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಕೊರತೆ ನೀಗಿಸುವ ಪ್ರಯತ್ನ ನಡೆದಿದೆ
ಮಧುಬಂಗಾರಪ್ಪ, ಶಿಕ್ಷಣ ಸಚಿವ