Malenadu Mitra
ರಾಜ್ಯ ಶಿವಮೊಗ್ಗ ಸಾಗರ

ದಾರ್ಶನಿಕರ ಬಗ್ಗೆ ಶಾಲೆಗಳಲಿ ಉಪನ್ಯಾಸದ ಅಗತ್ಯವಿದೆ: ಮಧುಬಂಗಾರಪ್ಪ , ನಾರಾಯಣಗುರು,ನುಲಿಯ ಚಂದಯ್ಯ ಜಯಂತಿಯಲ್ಲಿ ಹೇಳಿಕೆ

ಶಿವಮೊಗ್ಗ,ಆ.೩೧: ನಾಡಿನ ದಾರ್ಶನಿಕರ ಬಗ್ಗೆ ಶಾಲಾ ಹಂತದಲ್ಲಿಯೇ ತಿಳಿವಳಿಕೆ ಕೊಡದಿದ್ದಲ್ಲಿ ಮಹಾತ್ಮ ಗಾಂಧೀಜಿಯವರನ್ನೂ ಜನರು ಮರೆತರೆ ಅಚ್ಚರಿಯಿಲ್ಲ. ನಮ್ಮ ನಾಡಿನ ಶ್ರೇಯೆಸ್ಸಿಗೆ ಕಾರಣೀಭೂತರಾದ, ಸುಜ್ಞಾನದ ದಾರಿ ತೋರಿಸಿದ ಎಲ್ಲ ದಾರ್ಶನಿಕರ ಜಯಂತಿಯಂದು ಶಾಲೆಗಳಲ್ಲಿ ಅವರ ಬಗ್ಗೆ ಉಪನ್ಯಾಸ ಕೊಡಿಸುವ ಚಿಂತನೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗ ಕುವೆಂಪು ರಂಗಮಂದಿರಲ್ಲಿ ಗುರುವಾರ ಬ್ರಹ್ಮಶ್ರೀ ನಾರಾಯಣಗುರು, ಶರಣಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ, ಅಧ್ಯಯನ ಪೀಠ ರಚನೆ ಮತ್ತು ಪಠ್ಯದಲ್ಲಿ ಗುರುಗಳ ಪಾಠ ಸೇರಿಸುವಂತೆ ಮನವಿ ಮಾಡಿದ್ದೆ. ಅಂದು ಮತ್ತು ಇಂದು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ನನ್ನ ಮನವಿ ಪುರಸ್ಕರಿಸಿದರು. ನಾರಾಯಣಗುರುಗಳ ಮತ್ತು ನುಲಿಯ ಚಂದಯ್ಯರಂತಹ ದಾರ್ಶನಿಕರ ತತ್ವ ಸಿದ್ಧಾಂತಗಳು ಬೆಳೆಯುತ್ತಿರುವ ಮಕ್ಕಳಿಗೆ ಮತ್ತು ಸಮಾಜಕ್ಕೆ ಅತಿ ಅವಶ್ಯವಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಕರ್ನಾಟಕ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕರು ಹಾಗೂ ಮಂಗಳೂರು ಅಖಿಲ ಭಾರತ ಬಿಲ್ಲವರ ಸಂಘದ ಕಾರ್ಯದರ್ಶಿ ಸೀತಪ್ಪ ಕೂಡೂರು ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ‘ಒಂದು ಜಾತಿ, ಒಂದು ಧರ್ಮ, ಎಲ್ಲಾರಿಗೂ ಒಂದೇ ದೇವರು’ ಎಂಬ ಅವರ ಮಾತಿನಂತೆಯೇ ಜಾತಿ, ಧರ್ಮದ ಭೇದವಿಲ್ಲದೇ ಪ್ರತಿಯೊಬ್ಬರಿಗೂ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಹಕ್ಕಿದೆ ಎಂದು ಹೇಳಿದ್ದಾರೆ. ೭೯ ದೇವಸ್ಥಾನಗಳನ್ನು ನಿರ್ಮಿಸಿದ ಅವರು ಆತ್ಮ ಮತ್ತು ಸಮಾಜದ ಉನ್ನತಿ ಆಗಬೇಕು ಎಂದಿದ್ದಾರೆ. ನಮ್ಮಲ್ಲಿ ಸಂಘಟನೆ ಇಲ್ಲದಾಗ ನಾವು ಶೋಷಣೆಗೆ ಒಳಗಾಗುತ್ತೇವೆ ಎಂದು ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ಗೌರವ ಸಿಗುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಸಹ್ಯಾದ್ರಿ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಬಿ.ಎಂ ಚಂದ್ರಶೇಖರ್ ಮಾತನಾಡಿ, ನುಲಿಯ ಚಂದಯ್ಯ ಕಾಯಕ ಯೋಗಿ ಶರಣರು. ಅವರ ಕಾಯಕವೇ ಹಗ್ಗವನ್ನು ಹೊಸೆಯುವುದು, ನೂಲುವುದು, ನೇಯುವುದು. ನಾವು ಯಾವುದೇ ಕೆಲಸ ಮಾಡಿದರೂ ಅದು ಕಾಯಕವೇ ಎಂಬುದು ಅವರ ಅಭಿಮತವಾಗಿತ್ತು. ಕಾಯಕದ ಮೂಲಕವೇ ಆದರ್ಶ ಬದುಕನ್ನು ರೂಪಿಸಿಕೊಳ್ಳಬೇಕು ಎನ್ನುವಂತೆ ಅವರು ಕಾಯಕದ ಮೂಲಕವೇ ಸಮಾಜವನ್ನು ಕಟ್ಟುವ ಪ್ರಯತ್ನ ಮಾಡುತ್ತಾರೆ. ಭಕ್ತಿ ಎಂಬುದು ಪರಿಶುದ್ಧ ಜೀವನ. ಧ್ಯಾನ ಮಾಡುವ ಮನಸ್ಸು, ಗುಣ ನಮ್ಮಲ್ಲಿ ಇರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್.ಹೆಚ್, ಆರ್ಯ ಈಡಿಗರ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಆರ್. ಶ್ರೀಧರ್ ಹುಲ್ತಿಕೊಪ್ಪ, ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪಕೀರಪ್ಪ ಭಜಂತ್ರಿ, ಜಿಲ್ಲಾ ಕುಳುವ ಮಹಾಸಭಾದ ಅಧ್ಯಕ್ಷ ಅನಿಲ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದಿಂದ ಸಚಿವ ಮಧುಬಂಗಾರಪ್ಪ ಅವರಿಗೆ ಕುವೆಂಪುರಂಗಮಂದಿರದಲ್ಲಿ ಗುರುವಾರ ಸನ್ಮಾನಿಸಲಾಯಿತು. ಹುಲ್ತಿಕೊಪ್ಪ ಶ್ರೀಧರ್, ಸುರೇಶ್ ಬಾಳೇಗುಂಡಿ, ಜಿ.ಡಿ.ಮಂಜುನಾಥ್, ಧರ್ಮರಾಜ್, ಕಾಗೋಡು ರಾಮಪ್ಪ, ಪ್ರೊ.ಕಲ್ಲನ, ಹೊನ್ನಪ್ಪ, ನಾಗೇಂದ್ರಪ್ಪ, ಮಹೇಶ್, ಉಮೇಶ್, ತೇಕಲೆ ರಾಜಪ್ಪ, ಕೃಷ್ಣಪ್ಪ ಮತ್ತಿತರರಿದ್ದರು.

Ad Widget

Related posts

ತಂದೆಯನ್ನು ತಿಂಡಿಗೆ ಕರೆಯಲು ಬಂದ ಮಗನ ಕರೆದೊಯ್ದ ದುರ್ವಿಧಿ, ದೇವಾ ಈ ಸಾವು ನ್ಯಾಯವೆ ?

Malenadu Mirror Desk

ಈ ಬಾರಿಯೂ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಇಲ್ಲ

Malenadu Mirror Desk

ಸರಕಾರಿ ಕಾರ್ಯಕ್ರಮ ಎಲ್ಲರೂ ಬನ್ನಿ, ವಿಮಾನ ನಿಲ್ದಾಣ ಉದ್ಘಾಟನೆಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆಹ್ವಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.