Malenadu Mitra
ರಾಜ್ಯ ಶಿವಮೊಗ್ಗ

ಕಾಂಗ್ರೆಸ್ ಒಳಬೇಗುದಿ ಬಯಲು, ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಹೆಚ್.ಸಿ ಯೋಗೇಶ್ ಗೆ ನೋಟಿಸ್, ಆಯನೂರು ಮಂಜುನಾಥ್‌ಗೆ ಅವಮಾನ ಮಾಡಿದರೇ ಯುವನಾಯಕ ?

ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್‌ನಲ್ಲಿ ಚುನಾವಣೆ ಪೂರ್ವದಲ್ಲಿ ಇದ್ದ ಬೇಗುದಿ ಪಕ್ಷದ ಅಧಿಕಾರಕ್ಕೆ ಬಂದ ಮೇಲೆ ಮತ್ತಷ್ಟು ಹೆಚ್ಚಾಗಿದೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿಯೇ ಉಂಟಾಗಿದ್ದ ಒಳಜಗಳ ಈಗ ಮತ್ತಷ್ಟು ಹೆಚ್ಚಾಗಿದೆ. ಇದರ ಭಾಗವಾಗಿ ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಹಾನಗರಪಾಲಿಕೆ ಸದಸ್ಯ ಹೆಚ್. ಸಿ ಯೋಗೀಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶೋಕಾಸ್ ನೋಟೀಸ್ ನೀಡಿದ್ದಾರೆ.

ಹಿರಿಯ ನಾಯಕ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ರಾಜ್ಯ ನಾಯಕರು ಪಕ್ಷಕ್ಕೆ ಬರಮಾಡಿಕೊಂಡ ಬೆನ್ನಲ್ಲೇ ತಮ್ಮ ಅಸಮಾಧಾನ ಹೊರಹಾಕಿದ್ದ ಹೆಚ್.ಸಿ ಯೋಗೀಶ್, ತಾವಾಗಿಯೇ ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಕ್ಷ ಸೇರ್ಪಡೆಗೊಂಡ ನಂತರ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಆಯನೂರು ಮಂಜುನಾಥ್ ಅವರನ್ನು ಹೆಚ್ ಸಿ ಯೋಗೀಶ್ ದೈಹಿಕವಾಗಿ ತಳ್ಳಿದ್ದು ಎಲ್ಲರಿಗೂ ಬೇಸರ ತರಿಸಿತ್ತು. ಇದಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರ ಪತ್ರಿಕಾ ಗೋಷ್ಟಿ ಸಂದರ್ಭದಲ್ಲೂ ಹಿರಿಯ ನಾಯಕರಾದ ಆಯನೂರುಮಂಜುನಾಥ್ ಅವರಿಗೆ ಆಸನ ಸಿಗದಂತೆ ಮಾಡಿ ಅವಮಾನ ಮಾಡಿದ್ದರು. ಈ ಬೆಳವಣಿಗೆಯಿಂದ ಬೇಸತ್ತ ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್ ಕೆ ಮರಿಯಪ್ಪ ನೇತೃತ್ವದ ೨೦ಕ್ಕೂ ಹೆಚ್ಚು ಕಾಂಗ್ರೆಸ್ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ಮತ್ತು ಕೆಪಿಸಿಸಿಗೆ ಲಿಖಿತ ದೂರು ನೀಡಿದ್ದಾರೆ.

ಪಕ್ಷದಲ್ಲಿ ಹೆಚ್.ಸಿ ಯೋಗೇಶ್ ಸರ್ವಾಧಿಕಾರಿ ಧೋರಣೆ, ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಪಕ್ಷದ ವರಿಷ್ಟರ ತೀರ್ಮಾನಕ್ಕೆ ವಿರೋಧ ಹಾಗೂ ಆಯನೂರು ಮಂಜುನಾಥ್ ಸೇರ್ಪಡೆಗೆ ವಿರೋಧಿಸಿ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ಮತ್ತು ಪಕ್ಷದ ತೀರ್ಮಾನದ ವಿರುದ್ದ ಪಕ್ಷದ ಗಮನಕ್ಕೆ ತರದೆ ಪತ್ರಿಕಾಗೋಷ್ಟಿ ನಡೆಸುವುದು ಸೇರಿದಂತೆ ಹಲವು ಆರೋಪಗಳನ್ನು ಪಟ್ಟಿ ಮಾಡಿ ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ದೂರು ನೀಡಲಾಗಿತ್ತು.

ವಿಧಾನಸಭೆ,ಲೋಕಸಭೆ,ರಾಜ್ಯ ಸಭೆ, ವಿಧಾನ ಪರಿಷತ್ ಸೇರಿದಂತೆ ನಾಲ್ಕೂ ಸದನಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಾಯಕರಾದ ಆಯನೂರು ಮಂಜುನಾಥ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಈ ಹಿನ್ನೆಲೆಯಲ್ಲಿ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಆಯನೂರು ಮಂಜುನಾಥ್ ಅವರನ್ನು ಪಕ್ಷಕ್ಕ ಬರಮಾಡಿಕೊಂಡಿದ್ದಾರೆ. ಆದರೆ ಆಯನೂರು ಅವರ ಸೇರ್ಪಡೆಯನ್ನು ವಿರೋಧಿಸುವ ಹೇಳಿಕೆಗಳನ್ನು ನೀಡಿರುವ ಯೋಗೀಶ್ ಪಕ್ಷದ ಕಚೇರಿಗೆ ಬಂದಾಗ ಆಯನೂರು ಮಂಜುನಾಥ್ ಅವರನ್ನು ಅವಮಾನಿಸಿದ್ದಾರೆ. ಇದು ಖಂಡನೀಯ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಕಾರಣದಿಂದ ಪಕ್ಷದ ಶಿಸ್ತು ಉಲ್ಲಂಘಿಸಿರುವ ಯೋಗೀಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಯೋಗೀಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎಸ್ ಸುಂದರೇಶ್ ಅವರು ಯಾಕೆ ಪಕ್ಷದಿಂದ ಉಚ್ಚಾಟಿಸಬಾರದು ಎಂದು ಷೋಕಾಸ್ ನೋಟೀಸ್ ಜಾರಿಗೊಳಿಸಿದ್ದು ಮೂರು ದಿನದೊಳಗೆ ಸೂಕ್ತ ವಿವರಣೆ ನೀಡುವಂತೆ ಕೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅತಿಯಾದ ಆತ್ಮವಿಶ್ವಾಸವೇ ಮುಳ್ಳು:


ಹೆಚ್.ಸಿ ಯೋಗೇಶ್ ಅವರು ರಾಜಕೀಯ ಕುಟುಂಬದಿಂದ ಬಂದವರು. ರಾಷ್ಟ್ರೀಯ ಯುವ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿಯೂ ಉತ್ತಮ ಸಂಪರ್ಕ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಗತ್ಯವಾಗಿ ಬೇಕಿರುವ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳೂ ಗೊತ್ತಿವೆ. ಆದರೆ ಅವರು ಚುನಾವಣೆಯಲ್ಲಿ ಟಿಕೆಟ್ ಘೋಷಣೆ ಯಾಗುತ್ತಿದ್ದಂತೆ ಸ್ಥಳೀಯ ಮುಖಂಡರ ವಿಶ್ವಾಸವನ್ನೇ ಪಡೆದುಕೊಳ್ಳದೆ ನೇರವಾಗಿ ಕಣಕ್ಕಿಳಿದಿದ್ದರು. ನೂರು ಮತ ತಂದುಕೊಡುವ ಸಾಮರ್ಥ್ಯ ಇಲ್ಲದ ಒಂದಿಬ್ಬರ ಸಲಹೆಯಂತೆ ಉಳಿದ ನಾಯಕರ ವಿರೋಧ ಕಟ್ಟಿಕೊಂಡಿದ್ದರು. ಕಾಲೆಳೆಯಲು ಪೈಪೋಟಿಯೇ ಇರುವ ಕಾಂಗ್ರೆಸ್‌ನಲ್ಲಿ ಯೋಗೇಶ್ ಅವರ ಅತಿವೇಗ ಅವರಿಗೆ ಮುಳ್ಳಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಮತಪ್ರಚಾರಕ್ಕೆ ಪ್ರಕಟಿಸಿದ್ದ ಕರಪತ್ರದಲ್ಲಿ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ , ಒಬಿಸಿ ಸೆಲ್‌ನ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಅವರ ಫೋಟೋ ಕೂಡಾ ಹಾಕಿರಲಿಲ್ಲ. ಈ ನಡುವೆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಪರಾಜಿತ ಅಭ್ಯರ್ಥಿಗಳಿಗೆ ಪಕ್ಷ ಕೊಟ್ಟ ಪ್ರಾತಿನಿಧ್ಯವನ್ನು ಬಳಸಿಕೊಂಡು ಮುನ್ನುಗ್ಗುತ್ತಿರುವ ಅವರನ್ನು ಕಟ್ಟಿ ಹಾಕಲು ನಡೆಯುತ್ತಿರುವ ಹುನ್ನಾರಗಳ ಒಂದು ಭಾಗ ಈ ದೂರು ಕೂಡಾ ಆಗಿದೆ ಎಂಬ ಚರ್ಚೆಗಳೂ ನಡೆಯುತ್ತಿವೆ.

ನಾನು ಯಾರಿಗೂ ಅವಮಾನ ಮಾಡಿಲ್ಲ. ಆದರೆ ನನ್ನ ವಿರುದ್ದ ಮಾಜಿ ಎಂಎಲ್‌ಸಿ ಆರ್.ಪ್ರಸನ್ನ ಕುಮಾರ್ ಹಾಗೂ ಮಾಜಿ ಮೇಯರ್ ಎಸ್.ಕೆ ಮರಿಯಪ್ಪ ಸುಳ್ಳು ದೂರು ನೀಡಿದ್ದಾರೆ. ನನಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಷೋಕಾಸ್ ನೋಟೀಸ್ ನೀಡಿದ್ದಾರೆ. ಈ ದೂರಿನ ಹಿಂದೆ ಕಾಣದ ಕೈಗಳ ಕೈವಾಡವಿದೆ. ಇವರುಗಳು ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಕೆಪಿಸಿಸಿಗೆ ನಾನು ದೂರು ನೀಡುತ್ತೇನೆ.

-ಹೆಚ್.ಸಿ ಯೋಗೇಶ್,ಮಹಾನಗರ ಪಾಲಿಕೆ ಸದಸ್ಯ

ಹೆಚ್.ಸಿ ಯೋಗೇಶ್ ವರ್ತನೆ ಹಾಗೂ ಪಕ್ಷದಲ್ಲಿ ಶಿಸ್ತು ಉಲ್ಲಂಘಿಸಿರುವ ಕುರಿತು ದೂರು ಬಂದಿದೆ. ಷೋಕಾಸ್ ನೋಟೀಸ್ ಜಾರಿಗೊಳಿಸಿದ್ದು ಸೂಕ್ತ ವಿವರಣೆ ನೀಡುವಂತೆ ಗಡುವು ನೀಡಿದ್ದೇವೆ.ಇದು ಪಕ್ಷದ ಆಂತರಿಕ ವಿಚಾರ. ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ.

ಹೆಚ್.ಎಸ್ ಸುಂದರೇಶ್,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು. ಶಿವಮೊಗ್ಗ

Ad Widget

Related posts

ಅಕೇಶಿಯಾ ಹೋರಾಟ ರೂಪುರೇಷೆ ಚರ್ಚೆ

Malenadu Mirror Desk

ಗಿರಿರಾಜ್ ನಾಪತ್ತೆ ಹುಟ್ಟು ಹಾಕಿದ ಹಲವು ಪ್ರಶ್ನೆಗಳಿಗೆ ಉತ್ತರಿಸುವರಾರು ?, ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಸಂದೇಶ ಹಾಕಿದ ಡಿಸಿ ಕಚೇರಿ ನೌಕರ

Malenadu Mirror Desk

ವಿವಾಹ ಪೂರ್ವ ಸಂಬಂಧ: ಶಿಶು,ಬಾಣಂತಿ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.