ಬೆಂಗಳೂರು: ಈಡಿಗ ಬಿಲ್ಲವ ನಾಮಧಾರಿ ದೀವರು ಮತ್ತು ಇತರೆ ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಶನಿವಾರ ಬೆಳಗ್ಗೆ ೧೦ ಗಂಟೆಗೆ ಆರಂಭವಾಗುವ ಸಭೆಯನ್ನು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷರು ವಿಧಾನ ಪರಿಷತ್ ಮಾಜಿ ಸದಸ್ಯರಾದ ಹೆಚ್.ಆರ್.ಶ್ರೀನಾಥ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳದ ಅಧ್ಯಕ್ಷರಾದ ಪ್ರಣವಾನಂದ ಸ್ವಾಮೀಜಿ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ. ಮುಂಬರುವ ದಿನಗಳಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಅತೀ ಹಿಂದುಳಿದ ವರ್ಗಗಳ ಹಕ್ಕೊತ್ತಾಯ ಸಮಾವೇಶ ಮಾಡಲಿದ್ದು, ಅದರ ಅಂಗವಾಗಿ ರಾಜ್ಯದ ನಾನಾಕಡೆಯಿಂದ ಪಕ್ಷಾತೀತವಾಗಿ ಆಗಮಿಸುವ ಅತೀ ಹಿಂದುಳಿದ ವರ್ಗಗಳ ಸಮುದಾಯಗಳ ಪ್ರತಿನಿಧಿಗಳು ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಭೆಯಲ್ಲಿ ಈಡಿಗ,ಉಪ್ಪಾರ,ಬಂಜಾರ,ಛಲವಾದಿ, ಆದಿಜಾಂಬವ, ಮಾಚಿದೇವ,ಯಾದವ ಅಂಬಿಗ, ಸವಿತಾ ಸಮಾಜ, ವಿಶ್ವಕರ್ಮ, ಮೇದಾರ, ಬೋವಿ,ಅಲೆಮಾರಿ ಸಮುದಾಯ ಸೇರಿದಂತೆ ಹಲವು ಸಮುದಾಯದ ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಸಂಸದ ಹೆಚ್.ಜಿ.ಶ್ರೀರಾಮುಲು ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ಸಂಬಂಧ ವಿಧಾ ಪರಿಷತ್ ಸದಸ್ಯರು, ಮಾಜಿ ಮೇಲ್ಮನೆ ಪ್ರತಿಪಕ್ಷ ನಾಯಕರಾದ ಬಿ.ಕೆ.ಹರಿಪ್ರಸಾದ್ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಅತಿಹಿಂದುಳಿದವರಿಗೆ ಆಗುತ್ತಿರುವ ಅನ್ಯಾಯ ಮತ್ತು ಸಂಘಟಿತರಾಗು ಅಗತ್ಯತೆಯನ್ನು ಜನರಿಗೆ ತಿಳಿಸಿದ್ದಾರೆ. ಶತಮಾನಗಳಿಂದ ಅಧಿಕಾರದಿಂದ ವಂಚಿತವಾಗಿರುವ ಸಮುದಾಯಗಳು ತಮ್ಮ ಐಕ್ಯತೆಯನ್ನು ತೋರಿಸಲು ಇದೊಂದು ಅವಕಾಶ ಎಂದು ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ.
ಪೂರ್ವ ಭಾವಿ ಸಭೆಗೆ ಎಲ್ಲಾ ಪಕ್ಷಗಳಲ್ಲಿರುವ ಹಿಂದುಳಿದ ವರ್ಗಗಳ ನಾಯಕರು, ಶಾಸಕರುಗಳು, ಜನಪ್ರತಿನಿಧಿಗಳು, ರಾಜಕೀಯೇತರ ನಾಯಕರು, ಚಿಂತಕರು, ಕಲಾವಿದರು, ಸಾಹಿಗಳು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಹಿಂದುಳಿದ ವರ್ಗಗಳ ಸಮಾವೇಶ ಸಂಘಟಿಸುತ್ತಿರುವವರು ಶೋಷಿತ ಸಮುದಾಯಗಳ ಮಠಗಳನ್ನು ಪ್ರತಿನಿಧಿಸುವ ಸ್ವಾಮೀಜಿಗಳಾಗಿದ್ದಾರೆ. ಅತೀ ಹಿಂದುಳಿದ ವರ್ಗದ ಜನರಿಗೆ ಹಿಂದಿನಿಂದಲೂ ಅನ್ಯಾಯವಾಗಿದೆ. ಬಲಾಢ್ಯರೇ ಎಲ್ಲಾ ಕಾಲಕ್ಕೂ ಅಧಿಕಾರ ಪಡೆದರೆ, ಸಣ್ಣಪುಟ್ಟ ಜಾತಿಗಳಿಗೆ ಶಾಶ್ವತವಾಗಿ ಅಧಿಕಾರ ಸಿಗುವುದಿಲ್ಲ. ಈ ಕಾರಣದಿಂದ ಸಂಘಟನೆ ಮತ್ತು ಹೋರಾಟ ಅನಿವಾರ್ಯ.ಈ ಸಂಗತಿ ಈ ಶೋಷಿತ ಸಮುದಾಯದ ಸ್ವಾಮೀಜಿಗಳು, ಮುಖಂಡರಿಗೆ ಅರ್ಥವಾಗಿದೆ. ಮುಂದೆ ಇದೊಂದು ದೊಡ್ಡ ಆಂದೋಲನವಾಗಲಿದೆ.ನಾಡಿನಾದ್ಯಂತೆ ಹೆಚ್ಚಿನ ಜನರು ಈ ಸಮಾವೇಶದಲ್ಲಿ ಭಾಗಿಯಾಗಬೇಕಿದೆ.
ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಮಾಜಿ ಪ್ರತಿಪಕ್ಷನಾಯಕರು