ಬೆಂಗಳೂರು: ಬಾಯಲ್ಲಿ ಅರಸು ಜಪ ಮಾಡಿ, ಇತರೆ ಹಿಂದುಳಿದವರು ಮತ್ತು ದಲಿತರನ್ನು ಅಧಿಕಾರದಿಂದ ದೂರ ಇಟ್ಟರೆ ಅರಸು ಆಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳದೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿ, ನನ್ನನ್ನು ಮಂತ್ರಿ ಮಾಡದಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ವ್ಯಂಗ್ಯವಾಗಿ ತಮ್ಮ ಅಸಮಾಧಾನ ಹೊರಹಾಕಿದರು.
ನಾನು ಮಂತ್ರಿ ಆಗಿದ್ದರೆ ಸಮುದಾಯದ ಜನರ ಜೊತೆಗೆ ಇರಲು ಸಾಧ್ಯವಾಗುತ್ತಿರಲ್ಲಿ. ನಾನು ಮುಖ್ಯಮಂತ್ರಿ ಅಥವಾ ಮಂತ್ರಿ ಆಗುತ್ತೇನೆ ಅಂತ ಸಮುದಾಯದ ಯಾರೂ ಭ್ರಮೆಯಲ್ಲಿ ಇರಬೇಡಿ. ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದವರು ಕೇವಲ ರಾಜ್ಯದಲ್ಲಿ ಮಾತ್ರ ಅಲ್ಲ, ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ದೇವರಾಜ ಅರಸು ಅವರ ಬಗ್ಗೆ ಭಾಷಣದಲ್ಲಿ ಪುಂಕಾನುಪುಂಕವಾಗಿ ಹಾಡಿ ಹೊಗಳುವ ನಾವು ಅವರ ಮೊಮ್ಮಗನಿಗೆ ಯಾವ ಅಧಿಕಾರವನ್ನೂ ಕೊಟ್ಟಿಲ್ಲ ಅಂತ ಅವಮಾನ ಆಗುತ್ತಿದೆ ಎಂದರು.
ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ಟ್ಯೂಬ್ಲಾಯ್ಡ್ ವಾಚ್ ಕಟ್ಟಿಕೊಂಡು ಖಾಕಿ ಚಡ್ಡಿ ಹಾಕೊಂಡು, ಸಮಾಜವಾದಿ ಅಂತಾ ಹೇಳಿದರೆ ಆಗುವುದಿಲ್ಲ. ನಾನು ಮೂರು ಬಾರಿ ಸೋತಿರಬಹುದು, ಆದರೆ ಇನ್ನೂ ಸತ್ತಿಲ್ಲ. ಸೈಟು ಕಳ್ಳತನ ಮಾಡಿ ಮಾರುವವನು ನನ್ನ ಬಗ್ಗೆ ಮಾತನಾಡುತ್ತಾನೆ. ಆದರೆ ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ ನಾನು. ದೇವರಾಜ ಅರಸು ಕಾರಿನಲ್ಲಿ ಕುಳಿತರೆ ದೇವರಾಜ ಅರಸು ಆಗಲ್ಲ. ದೇವರಾಜ ಅರಸು ಚಿಂತನೆ ಇರಬೇಕು ಎಂದು ಸಹ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಅರ್ಹತೆ ಇದ್ದರೂ ಪರಮೇಶ್ವರ್ ಸಿಎಂ ಮಾಡಲಿಲ್ಲ
ಡಾ ಜಿ ಪರಮೇಶ್ವರ್ ಅವರನ್ನು ಸಿಎಂ ಇರಲಿ ಡಿಸಿಎಂ ಸ್ಥಾನದಿಂದಲೂ ಡಿಪ್ರಮೋಟ್ ಮಾಡಲಾಯಿತು. ಅತಿ ಹೆಚ್ಚು ಅವಧಿಗೆ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರಿಗೆ ಸಿಎಂ ಆಗಲು ಎಲ್ಲಾ ಅರ್ಹತೆಗಳಿದ್ದವು. ಆದರೆ ಅವರನ್ನು ಮಾಡಲಿಲ್ಲ. ಈಗಲೂ ಸರ್ಕಾರದಲ್ಲಿ ದಲಿತರನ್ನು ಉಪಮುಖ್ಯಮಂತ್ರಿ ಮಾಡಬಹುದಿತ್ತು. ಸತೀಶ್ ಜಾರಕಿಹೊಳಿಯನ್ನು ಮಾಡಬಹುದಿತ್ತು ಆದರೆ ಮಾಡಿಲ್ಲ ಎಂದರು.
ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಆಂಧ್ರಪ್ರದೇಶದ ಸಚಿವ ಜೋಗಿ ರಮೇಶ್, ಎಎಪಿ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಮಾಜಿ ಸಚಿವ ಶ್ರೀನಿವಾಸ್ ಪೂಜಾರಿ,ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ, ವಿಖ್ಯಾತಾನಂದ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಹಾಜರಿದ್ದರು.
ಈಡಿಗ,ಬಿಲ್ಲವ ಸಮುದಾಯ ಅತಂತ್ರವಾಗಿದೆ. ಇದು ಅತಂತ್ರ ಸಮುದಾಯದ ವೇದಿಕೆ. ಚುನಾವಣೆ ಬರುವಾಗ ಘೋಷಣೆ ಮಾಡಿದ್ದೇ ಮಾಡಿದ್ದು. ಅಧಿಕಾರಕ್ಕೆ ಬರಲು ಏನೇನೋ ಭರವಸೆ ನೀಡಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅತೀ ಹಿಂದುಳಿದ ವರ್ಗಗಳು ನೆನಪೇ ಆಗಿಲ್ಲ. ಅಧಿಕಾರ ಸಿಕ್ಕ ತಕ್ಷಣವೇ ಸಮುದಾಯಕ್ಕೆ ಕೊಡಬೇಕಾಗಿರುವುದು ಇನ್ನೂ ಸಿಕ್ಕಿಲ್ಲ. ಸಮುದಾಯದ ಶಕ್ತಿ ಏನೂ ಎನ್ನುವುದನ್ನು ನಾವೇ ಇನ್ನೂ ತಿಳಿದುಕೊಂಡಿಲ್ಲ.
ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಮಾಜಿ ಪ್ರತಿಪಕ್ಷ ನಾಯಕ