Malenadu Mitra
ರಾಜ್ಯ ಶಿವಮೊಗ್ಗ

ಚಳವಳಿಯ ಕುಲುಮೆಯಲ್ಲಿ ಅರಳಿದ ಹೂವು ಕಾಗೋಡು, ಅಭಿನಂದನಾ ಸಮಾರಂಭದಲ್ಲಿ ಮುತ್ಸದ್ದಿ ರಾಜಕಾರಣಿಯನ್ನು ಕೊಂಡಾಡಿದ ಗಣ್ಯರು

ಶಿವಮೊಗ್ಗ: ಸೈದ್ಧಾಂತಿಕ ಸ್ಪಷ್ಟತೆ, ಪ್ರಾಮಾಣಿಕತೆ ಹಾಗೂ ಸ್ವಯಂ ನಿಯಂತ್ರಣ ಇವು ಹೋರಾಟಗಾರನಿಗಿರಬೇಕಾದ ಲಕ್ಷಣಗಳು. ಇಂತಹ ಗುಣಗಳಿಂದಲೇ ಕಾಗೋಡು ತಿಮ್ಮಪ್ಪ ಹೋರಾಟಗಾರನಾಗಿ ಬೆಳೆದರು. ರಾಜ್ಯ ರಾಜಕೀಯದಲ್ಲಿ ಮರೆಯಲಾರದ ರಾಜಕಾರಣಿಯಾದರು ಎಂದು ಮಾಜಿ ಸಭಾಪತಿ , ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಹೇಳಿದರು.
ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಿತಿ ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾಗೋಡು ತಿಮ್ಮಪ್ಪ ಅಭಿನಂದನಾ ಕಾರ್‍ಯಕ್ರಮದಲ್ಲಿ ಅಭಿಂದನಾ ಭಾಷಣ ಮಾಡಿದ ಅವರು, ಶಾಂತವೇರಿ ಗೋಪಾಲಗೌಡ ಕೇವಲ ೪೯ ವರ್ಷ ಬದುಕಿದ್ದರೂ ಇಂದಿಗೂ ಮರೆಯಲಾಗದ ರಾಜಕಾರಣಿಯಾಗಿದ್ದಾರೆ. ಹೋರಾಟದಿಂದ, ಕೆಲಸದಿಂದಲೇ ಅವರು ಬೆಳೆದು ನಿಂತಿದ್ದರು ಎಂದ ಅವರು, ಕಾಗೋಡು ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಸಾಧನೆಯನ್ನು ಮಾಡಿದವರು. ಲಕ್ಷಾಂತರ ಜನರಿಗೆ ಹಕ್ಕುಪತ್ರ ಕೊಡಿಸಿದರು. ರಾಜಕೀಯದಲ್ಲಿ ಅವರಿಗೆ ಎದುರಾಳಿಗಳಿದ್ದರೇ ವಿನಾ ಶತ್ರುಗಳಿಲ್ಲ. ಅವರು ಎಂದೂ ಬೀಗಿದವರಲ್ಲ, ಸದಾ ಬಾಗುವ ವ್ಯಕ್ತಿ ಎಂದು ಬಣ್ಣಿಸಿದರು. ಐತಿಹಾಸಿಕ ಕಾಗೋಡು ಚಳವಳಿಯ ಫಲವಾಗಿ ಭೂಸುಧಾರಣಾ ಕಾಯಿದೆ ಜಾರಿಗೆ ತರಲಾಯಿತು. ಈ ಕಾಯಿದೆ ಜಾರಿ ಹಿಂದೆ ಕಾಗೋಡು ತಿಮ್ಮಪ್ಪ ಅವರಿಗಿದ್ದ ಬಡಜನರ ಕಾಳಜಿ ಕೆಲಸ ಮಾಡಿತು ಎಂದು ಹೇಳಿದರು.

ಆದರ್ಶ ರಾಜಕಾರಣಿ ಕಾಗೋಡು ತಿಮ್ಮಪ್ಪ
ಮುಖ್ಯ ಭಾಷಣ ಮಾಡಿದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಇಂದಿನ ದಿನಗಳಲ್ಲಿ ರಾಜಕೀಯ ನಾಯಕನಾಗುವುದು ಬಹಳ ಸುಲಭ. ದೆಹಲಿ ಬೆಂಗಳೂರು ಸಂಪರ್ಕ ಇಟ್ಟುಕೊಂಡು ಹಣ ಇಟ್ಟುಕೊಂಡಿದ್ದರೆ ರಾಜಕೀಯ ನಾಯಕರಾಗಬಹುದು. ಆದರೆ ಕಾಗೋಡು ತಿಮ್ಮಪ್ಪ ನಡೆದು ಬಂದ ದಾರಿ ಸುಲಭವಾಗಿರಲಿಲ್ಲ. ಅವರು ಶಾರ್ಟ್ ಕಟ್ ನಾಯಕರಲ್ಲ ಇಂದಿನ ಯುವರಾಜಕಾರಣಿಗಳ ಸ್ಥಿತಿ ಪುಸ್ತಕ ಓದದೆ ಗೈಡ್ ಓದಿ ಪಾಸಾದ ವಿದ್ಯಾರ್ಥಿಗಳಂತಾಗಿದೆ ಎಂದರು.
೮೦ ರ ದಶಕ ಚಳುವಳಿ ದಿನಗಳು, ಇಂದು ದಿಕ್ಕಾಪಾಲಾಗಿವೆ. ಹಾಗಾಗಿ ಬಹುಶಃ ಕಾಗೋಡು ಈಗ ಖುಷಿಯಾಗಿ ಇರಲಿಕ್ಕಿಲ್ಲ. ಅವರಿಗೆ ಸಾಮಾಜಿಕ ನ್ಯಾಯದ ಅಸ್ತ್ರ್ರಗಳು ಭೂಸುಧಾರಣೆ ಮತ್ತು ಮೀಸಲಾತಿಗಳಾಗಿದ್ದವು. ಈ ಎರಡೂ ಅಸ್ತ್ರ್ರಗಳ ಇವತ್ತಿನ ಪರಿಸ್ಥಿತಿ ಏನಾಗಿದೆ. ದ.ಕ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿಯಲ್ಲಿ ಭೂಸುಧಾರಣೆ ಯಶಸ್ವಿಯಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಜಮೀನ್ದಾರರು ಇದ್ದಾರೆ. ಇಂದು ಯಾರು ಬೇಕಾದರೂ ಜಮೀನು ಖರೀದಿಸಬಹುದಾಗಿದೆ. ಇದು ಭೂಸುಧಾರಣೆಯ ಅವನತಿಯಾಗಿದೆ ಎಂದರು.
ಮೀಸಲಾತಿ ಇಂದು ಬೇಕಾಬಿಟ್ಟಿಯಾಗಿದೆ. ಹಾಗಾಗಿ ಕಾಗೋಡು ಕನಸಿನ ಸೌಧದ ಇಟ್ಟಿಗೆ ಬೀಳುತ್ತಿದೆ. ಸ್ವಾತಂತ್ರ್ಯ ಹೋರಾಟವೊಂದೇ ಅಲ್ಲ. ನಂತರದ ಮಂಡಲ್, ರಾಮಮಂದಿರ ಚಳುವಳಿಯಿಂದ ನಾಯಕರು ಹುಟ್ಟಿಕೊಂಡಿದ್ದಾರೆ. ಚುನಾವಣೆ ಸುಧಾರಣೆ ಆಗಬೇಕಿದೆ ಎಂದರು.
ಮಾಜಿ ಸಭಾಪತಿ ಡಿ.ಹೆಚ್ ಶಂಕರ ಮೂರ್ತಿ ಮಾತನಾಡಿ ಕಾಗೋಡು ತಿಮ್ಮಪ್ಪನವರು ಶತಮಾನೋತ್ಸವ ಆಚರಿಸಿಕೊಳ್ಳಲಿ, ಇಂದಿನ ಪೀಳಿಗೆ ತಾತ್ವಿಕ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಲಿ ಎಂದು ಆಶಿಸಿದರು.
ಸಂಸದ ರಾಘವೇಂದ್ರ ಮಾತನಾಡಿ, ಕಾಗೋಡು ಅವರದ್ದು ಸಾತ್ವಿಕ ಸಿಟ್ಟು. ರೈತರಿಗಾಗಿ, ಅರಣ್ಯ ಸಾಗುವಳಿದಾರರಿಗಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ. ಆದರೆ ಕಾನೂನು ತೊಡಕು ಎದುರಾಗುತ್ತಿದೆ. ಇದನ್ನು ಬಗೆಹರಿಸಿ ಸಾಗುವಳಿ ಪತ್ರ ಕೊಡಿಸುವ ಕೆಲಸದಲ್ಲಿ ಎಲ್ಲರ ಜೊತೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಕೆ ಎಸ್. ಈಶ್ವರಪ್ಪ ಮಾತನಾಡಿ, ನನ್ನ ರಾಜಕೀಯ ಹೋರಾಟಕ್ಕೆ ಮೊದಲು ಶುಭ ಹಾರೈಸಿದ್ದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ಜಿಲ್ಲೆಯಲ್ಲಿ ಯಡಿಯೂರಪ್ಪ ಕಾಗೋಡು ತಿಮ್ಮಪ್ಪ ಹಾಗೂ ಬಂಗಾರಪ್ಪ ಅವರನ್ನು ನೋಡಿ ಹೋರಾಟ ಕಲಿಯಬೇಕಿದೆ. ಕಾಗೋಡು ತಿಮ್ಮಪ್ಪ ಅವರ ಆಶಯದಂತೆ ಜಿಲ್ಲೆಯ ಜನ ಸಮಸ್ಯೆಗಳಿಗೆ ಎಲ್ಲರೂ ಕೂಡಿ ಶ್ರಮಿಸಬೇಕಿದೆ ಎಂದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಕಾಗೋಡು ತಿಮ್ಮಪ್ಪರಂತಹ ಹಿರಿಯ ಮುತ್ಸದ್ದಿಯ ಕನಸಿನಂತೆ ಜಿಲ್ಲೆಯ ಭೂರಹಿತರ ಸಮಸ್ಯೆ ಇತ್ಯರ್ಥ ಪಡಿಸುತ್ತೇವೆ. ಇದಕ್ಕೆ ವಿರೋಧ ಪಕ್ಷದವರ ಸಹಕಾರವನ್ನೂ ಪಡೆದು ಮುನ್ನಡೆಯುತ್ತೇವೆ. ಶಿವಮೊಗ್ಗದಲ್ಲಿ ಅರ್ಧಕ್ಕೆ ನಿಂತಿರುವ ದೇವರಾಜ್ ಅರಸ್ ಸಭಾಭವನ ಪೂರ್ಣಗೊಳಿಸುತ್ತೇನೆ. ಮುಂದಿನ ಒಂದು ವರ್ಷದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದ್ದೇನೆ. ಅದಕ್ಕೂ ಎಲ್ಲರೂ ಸಹಕರಿಸಬೇಕೆಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ, ಬಗರ್‌ಹುಕುಂ ಸಕ್ರಮ ಸಮಿತಿ ಸಭೆ ನಡೆಯದೆ ವರ್ಷಗಳೇ ಆಗಿವೆ. ಸವಾಲೆಂದು ಸ್ವೀಕರಿಸಿ ಬಗರ್‌ಹುಕುಂ ಸಮಿತಿಗಳನ್ನು ಕಾಲಮಿತಿಯಲ್ಲಿ ರಚಿಸಿ ಹಕ್ಕುಪತ್ರ ನೀಡುವ ಕೆಲಸವನ್ನು ಮೊದಲ ಮಾಡಬೇಕಿದೆ. ಬಗರ್‌ಹುಕುಂ ಅರ್ಜಿ ಕೊಡದಿದ್ಸರೆ ಅವರಿಗೆ ಅರ್ಜಿ ಕೊಡಲು ೬ ತಿಂಗಳು ಅವಕಾಶ ಕೊಡಿ. ಶಿವಮೊಗ್ಗದಲ್ಲಿ ಸಾವಿರಾರು ಅರ್ಜಿ ಬಾಕಿ ಉಳಿದಿದೆ. ಹೊಸ ಸಾಗುವಳಿದಾರರಿಗೆ ಬೇಡ, ತಲತಲಾಂತರದಿಂದ ಮಾಡಿದವರಿಗೆ ಸಾಗುವಳಿ ಚೀಟಿ ಕೊಡಿ ಎಂದರು.
ಸಮಾರಂಭದಲ್ಲಿ ಕಾಗೋಡು ಅವರಿಗೆ ಅಭಿನಂದನಾ ಸಮಿತಿ ಶಾಲು, ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವಿಸಿತು. ಅನೇಕ ಸಂಘ-ಸಂಸ್ಥೆಯವರು, ಸಾರ್ವಜನಿಕರು, ರಾಜಕೀಯ ಮುಖಂಡರು, ಹೋರಾಟಗಾರರು, ಉದ್ಯಮಿಗಳು ಸಹ ತಿಮ್ಮಪ್ಪ ಅವರನ್ನು ಗೌರವಿಸಿದರು.
ಅಭಿನಂದನಾ ಸಮಿತಿ ಅಧ್ಯಕ್ಷ ಆರ್. ಕೆ. ಸಿದ್ದರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಡಾ.ಜಿ.ಡಿ.ನಾರಾಯಣಪ್ಪ, ಶಾಸಕ ಆರಗಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಎಂಎಲ್‌ಸಿ ಎಸ್. ರುದ್ರೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ್ ನಾಯ್ಕ್, ಮಾಜಿ ಎಂಎಲ್‌ಸಿ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ, ಪ್ರಮುಖರಾದ ಎಂ. ಶ್ರೀಕಾಂತ್, ಕಲಗೋಡು ರತ್ನಾಕರ್, ರಾಜಪ್ಪ ಮಾಸ್ತರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸರ್ವಪಕ್ಷ ಮುಖಂಡರ ಸಮ್ಮಿಲನ
ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಬಂದಿರುವ ಕಾರಣದಿಂದ ಏರ್ಪಡಿಸಿದ್ದ ಅಭಿನಂದನಾ ಸಭೆಗೆ ಅಪರೂಪಕ್ಕೆಂಬಂತೆ ಸರ್ವಪಕ್ಷಗಳ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿದ್ದರು. ಹಿರಿಯ ರಾಜಕೀಯ ನಾಯಕನಿಗೆ ಅಭಿನಂದಿಸಿದ ಎಲ್ಲರೂ ರಾಜಕೀಯ ರಹಿತವಾಗಿ ಒಂದಾಗಿದ್ದರು.ಮಾತ್ರವಲ್ಲದೆ, ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಭೂಮಿ ಸಮಸ್ಯೆ ಭಾರೀ ಕಗ್ಗಂಟಾಗಿದೆ. ಶರಾವತಿ ಸಂತ್ರಸ್ತರು ಮತ್ತು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿಯ ಜನಪ್ರತಿನಿಧಿಗಳು ಒಂದಾಗಿ ಈ ಸಮಸ್ಯೆ ಇತ್ಯರ್ಥ ಮಾಡಬೇಕು. ಹೀಗೆ ಮಾಡಿದಲ್ಲಿ ಕಾಗೋಡು ತಿಮ್ಮಪ್ಪ ಅವರ ಕನಸು ಸಾಕಾರಗೊಳಿಸಬೇಕಿದೆ.

ತೀ ನಾ ಶ್ರೀನಿವಾಸ್, ಸಾಮಾಜಿಕ ಹೋರಾಟಗಾರ

ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆಸಿದ್ದ ಸಾಮಾಜಿಕ ಆರ್ಥಿಕ ಸಮೀಕ್ಷೆಯ ಕಾಂತ್‌ರಾಜ್ ವರದಿಯನ್ನು ಜಾರಿಮಾಡಬೇಕಿದೆ. ವರದಿ ಜಾರಿಯಾದರೆ ಮುಂದುವರಿದ ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂಬುದು ಸುಳ್ಳು ವದಂತಿ. ಈ ವರದಿ ಜಾರಿಗೆ ನಡೆಸುವ ಹೋರಾಟಕ್ಕೆ ನಾನೂ ಸೇರಿಕೊಳ್ಳುತ್ತೇನೆ

ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ

ಭೂ ಸುಧಾರಣೆ ಕಾನೂನಿನ ನಂತರ ವಾಸಿಸುವವನೆ ಮನೆ ಒಡೆಯ ಕಾನೂನು ಜಾರಿ ಮಾಡುವ ಮೂಲಕ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆ ತಂದವರು ಕಾಗೋಡು ತಿಮ್ಮಪ್ಪನವರು.ಶಿವಮೊಗ್ಗದ ಮಣ್ಣಿನಲ್ಲಿ ವಿಶಿಷ್ಟ ಸತ್ವವಿದೆ. ಭೂಸುಧಾರಣೆ ಚಳುವಳಿಯ ಮೂಲಕ ರಾಜಕೀಯದ ಚಿತ್ರಣ ಬದಲಿಸಬಹುದು ಎಂಬುದಕ್ಕೆ ಶಿವಮೊಗ್ಗ ಸಾಕ್ಷಿಯಾಗಿದೆ. ಕಾಗೋಡು ಚಳವಳಿಯ ಪ್ರಭಾವಳಿಯಿಂದಾಗಿಯೇ ಈ ಜಿಲ್ಲೆಯಲ್ಲಿ ಹಲವು ಹೋರಾಟಗಳು ನಡೆದವು.
ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ, ಚಿಂತಕ

ಕಾಂಗ್ರೆಸ್ ಪಕ್ಷವೂ ಭೂಮಾಲೀಕರ ಪರವಾದ ನಿಲುವು ಹೊಂದಿತ್ತು. ಕಾಗೋಡು ಚಳವಳಿಯಲ್ಲಿ ಸಮಾಜವಾದಿಗಳ ಪ್ರವೇಶದಿಂದಾಗಿ ಆ ಹೋರಾಟಕ್ಕೆ ಮಹತ್ವ ಬಂದಿತು. ಕಾಂಗ್ರೆಸ್ ಪಕ್ಷಕ್ಕೆ ಸಮಾಜವಾದಿ ಚಿಂತನೆಯ ಹಲವು ನಾಯಕರುಗಳು ಸೇರಿದ್ದರಿಂದ ಆ ಪಕ್ಷ ಎಡಪಂಥೀಯ ಸಿದ್ಧಾಂತವನ್ನು ಸ್ವಲ್ಪಮಟ್ಟಿಗೆ ಮೈಗೂಡಿಸಿಕೊಂಡಿತು.

ಬಿ.ಎಲ್.ಶಂಕರ್, ಮಾಜಿ ಸಭಾಪತಿ

Ad Widget

Related posts

ಬಿಜೆಪಿ ನೂತನ ಪದಾಧಿಕಾರಿಗಳ ನೇಮಕ

Malenadu Mirror Desk

ಸಂಪದ್ಬರಿತ ರಾಜ್ಯಕ್ಕಾಗಿ ಜಲಧಾರೆ ಯಾತ್ರೆ, ಪಕ್ಷ ಅಧಿಕಾರಕ್ಕೆ ಬಂದರೆ ಸುಭಿಕ್ಷ ಆಡಳಿತ ನೀಡುವೆ ಎಂದ ಕುಮಾರಸ್ವಾಮಿ

Malenadu Mirror Desk

ಸಾಮಾನ್ಯ ಜನರ ಏಳಿಗೆಯೇ ನಿಜವಾದ ಅಭಿವೃದ್ಧಿ, ಪತ್ರಿಕಾ ಸಂವಾದದಲ್ಲಿ ಸಚಿವ ಮಧುಬಂಗಾರಪ್ಪ ಆಶಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.