Malenadu Mitra
ರಾಜ್ಯ ಶಿವಮೊಗ್ಗ

ಕೃಷಿ ವಿವಿಯ ವೈಜ್ಞಾನಿಕ ಜ್ಞಾನ ರೈತರಿಗೆ ತಲುಪಬೇಕು, ಕೃಷಿ ವಿವಿಯ ೧೧ನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಕಾಗೋಡು ತಿಮ್ಮಪ್ಪ ಕರೆ

ಶಿವಮೊಗ್ಗ ಸೆ.೨೧ : ರೈತರು ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ಆದರೆ ಯಾವ ಭೂಮಿಯಲ್ಲಿ ಎಂತಹ ಬೆಳೆಯನ್ನು ಬೆಳೆಯಬೇಕೆಂಬ ಪರಿಜ್ಞಾನ, ವೈಜ್ಞಾನಿಕ ಮಾಹಿತಿ ಎಲ್ಲರಿಗೂ ಇಲ್ಲ. ಪಂಚಾಯಿತಿ ವಾರು ಕನಿಷ್ಟ ೫೦ ಜನರಿಗೆ ಈ ಬಗ್ಗೆ ಕಾರ್ಯಾಗಾರಗಳನ್ನು ವಿಶ್ವವಿದ್ಯಾಲಯ ನಡೆಸಬೇಕು ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ ೧೧ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಇಳುವರಿ ಹೆಚ್ಚಿಸಬೇಕು. ಸಂಶೋಧನೆ, ಪ್ರಯೋಗಗಳನ್ನು ಕೈಗೊಂಡಲ್ಲಿ ರೈತರು ಸಹ ಕೈ ಜೋಡಿಸುತ್ತಾರೆ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು. ಅತ್ಯುತ್ತಮ ಕೃಷಿಯ ಪರಿಸರದಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪಿತವಾಗಿರುವುದರಿಂದ ಇಲ್ಲಿ ಕಲಿಯುವ ಮಕ್ಕಳಿಗೆ ಹೆಚ್ಚಿನ ಪ್ರಾಥಮಿಕ ಅರಿವು ಮೂಡಿಸಲು ಸಾಧ್ಯವಿದೆ. ಅವರನ್ನು ಹೊಲಗಳಿಗೆ ಕರೆದೊಯ್ದು ನೀರು, ಬೆಳೆ, ಬೀಜ, ಗೊಬ್ಬರ ಮೊದಲಾದ ಬಗ್ಗೆ ಮಾಹಿತಿ ಕೊಡಬೇಕೆಂದು ಸಲಹೆ ನೀಡಿದರು.ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳ ಶ್ರಮದಿಂದ ಇನ್ನೂ ಚೆನ್ನಾಗಿ ವಿವಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಬೋಧಕ ಬೋಧಕೇತರ ವರ್ಗದವರು ಇಲ್ಲಿಯೇ ವಾಸಿಸುವಂತಾದರೆ ವಿವಿ ಕುರಿತಾದ ಆಸಕ್ತಿ , ಒಲವು ಹೆಚ್ಚುತ್ತದೆ. ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು, ಕೃಷಿ ಸಚಿವರನ್ನು ಭೇಟಿಯಾಗಿ ವಸತಿ ಗೃಹಗಳನ್ನು ನೀಡಲು ಮನವಿ ಮಾಡುತ್ತೇನೆ ಎಂದರು.

ಪ್ರಗತಿಪರ ರೈತರಾದ ದೊಡ್ಡಗೌಡ ಸಿ ಪಾಟೀಲ್ ಮಾತನಾಡಿ, ೭ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ವಿಶ್ವವಿದ್ಯಾನಿಲಯ ವೈವಿಧ್ಯತೆ ಹೊಂದಿದೆ. ವಿವಿಗೆ ಮೊದಲ ಹಂತದಲ್ಲಿ ರೂ. ೧೫೦ ಮತ್ತು ನಂತರ ರೂ.೩೮ ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ. ವಿವಿ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ . ಇತ್ತೀಚೆಗೆ ೧೦೮ ಪ್ರೊಫೆಸರ್ ನೇಮಕ ಆಗಿದೆ. ಬರಗಾಲದಿಂದ ರೈತರು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ವಿವಿ ಮೇಲಿದೆ. ಬೆಳೆ,ರೋಗ ನಿವ೯ಹಣೆ ಕುರಿತು ತಿಳಿಸಬೇಕು.ರೈತರ ಜೀವನ ಹಸನು ಮಾಡಲು ಪ್ರಯತ್ನಿಸಬೇಕು. ವಿವಿ ಯಲ್ಲಿ ರೈತರ ಮಕ್ಕಳಿಗೆ ಶೇ.೫೦ ಮೀಸಲಾತಿ ಇದೆ. ಇಂಜಿನಿಯರಿಂಗ್ ಗಿಂತ ಕೃಷಿ ವಿಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಬೆಳೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅತ್ಯುತ್ತಮ ಶಿಕ್ಷಕರು, ವಿಜ್ಞಾನಿಗಳು, ಸಿಬ್ಬಂದಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತರಾದ ಅಧ್ಯಾಪಕ ಸಿಬ್ಬಂದಿ ವರ್ಗವನ್ನು ಗೌರವಿಸಲಾಯಿತು.
ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ್ ಸ್ವಾಗತಿಸಿದರು. ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಪ್ರಗತಿಪರ ರೈತರಾದ ವೀರಭದ್ರಪ್ಪ ಪೂಜಾರಿ, ಶಿಕ್ಷಣ ತಜ್ಞ ಪಿ ಕೆ.ಬಸವರಾಜ ಮಾತನಾಡಿದರು. ಪ್ರಗತಿಪರ ರೈತರಾದ ನಾಗರಾಜ್, ಕೃಷಿ ಉದ್ದಿಮೆದಾರ ಬಿ. ಕೆ. ಕುಮಾರಸ್ವಾಮಿ, ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

  ನಾನೂ ಕೃಷಿಕನಾಗಿದ್ದೆ. ನನಗೆ ಎಲ್ಲ ರೀತಿಯ ಕೃಷಿ ಚಟುವಟಿಕೆಗಳ ಜ್ಞಾನ ಇದೆ. ವಿವಿ ಆಯೋಜಿಸುವ ಕೃಷಿ ಮೇಳಗಳಲ್ಲಿ ರೈತರು ಪಾಲ್ಗೊಂಡು ವೈಜ್ಞಾನಿಕ ಕೃಷಿ ಪದ್ಧತಿ, ಹೊಸ ಸಂಶೋಧನೆಗಳ ಕುರಿತು ತಿಳಿದುಕೊಂಡು ಅಳವಡಿಸಿಕೊಳ್ಳಬೇಕು. ಕೃಷಿ ವಿವಿ ಬೆಳೆಯಬೇಕು ಇದರಿಂದ ರೈತರಿಗೆ ಅನುಕೂಲವಾಗುತ್ತದೆ.  ಭವಿಷ್ಯದಲ್ಲಿ ಮಾದರಿ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು. ಈ ನೆಲ, ಮಣ್ಣು ನೋಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಮೂಡಬೇಕು.
-ಕಾಗೋಡು ತಿಮ್ಮಪ್ಪ
Ad Widget

Related posts

ಲವ್..ದೋಖಾ.. ಔರ್.. ಮರ್ಡರ್

Malenadu Mirror Desk

ಜಾತಿ ವ್ಯವಸ್ಥೆಯಿಂದ ಹೊರ ಬರುವಂತೆ ಕನಕದಾಸರು ಸಾರಿದ್ದರು : ಕೆ.ಎಸ್ ಈಶ್ವರಪ್ಪ

Malenadu Mirror Desk

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.