ಶಿವಮೊಗ್ಗ: ಕಲಾತಂಡಗಳ ವೈಭವದ ನೃತ್ಯ, ಚಂಡೆಮೇಳ, ಡೊಳ್ಳು ಕುಣಿತ, ಕಹಳೆಗಳ ಮೇಳ, ಯುವಕ- ಯುವತಿಯರ ಕುಣಿತ, ಸಾಗರೋಪದಿಯಲ್ಲಿ ಭಕ್ತಸಾಗರ , ರಸ್ತೆಯ ಇಕ್ಕೆಲದಲ್ಲೂ ನಿಂತು ವೀಕ್ಷಿಸಿದ ನಗರವಾಸಿಗಳು, ವೃತ್ತಗಳಲ್ಲಿ ಮನಸೆಳೆಯುವ ಅಲಂಕಾರ, ವಾದ್ಯ, ಭಾವಪರವಶರಾಗಿ ನೃತ್ಯಗೈದ ಭಕ್ತರು, ರಾಜಕಾರಣಿಗಳ ಪಾಲ್ಗೊಳ್ಳುವಿಕೆ, ಹಲವು ಭಕ್ತರಿಂದ ಪಾನಕ, ಊಟದ ವ್ಯವಸ್ಥೆ…
ಇದು ಶಿವಮೊಗ್ಗ ನಗರದ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆಯ ದೃಶ್ಯ. ಕೇಸರಿಮಯವಾಗಿ ನಳನಳಿಸಿದ ಬೀದಿಗಳಲ್ಲಿ ಮೆರವಣಿಗೆ ನಿಧಾನವಾಗಿ ಸಾಗಿಬಂದಿತು. ಬೆಳಗ್ಗೆ ೧೦-೪೫ಕ್ಕೆ ಮಹಾ ಮಂಗಳಾರತಿ ಪೂಜೆ ನೆರವೇರಿಸುವುದರೊಂದಿಗೆ ಗಣಪತಿ ರಾಜಬೀದಿ ಉತ್ಸವ ಆರಂಭವಾಯಿತು. ಪೊಲೀಸರ ಬಿಗಿ ಬಂದೋ ಬಸ್ತ್, ಯುವಕರ ಸಂಭ್ರಮೋತ್ಸವ, ಕಲಾತಂಡಗಳ ಸಡಗರಗಳ ನಡುವೆ ಮೆರವಣಿಗೆ ತಡರಾತ್ರಿವರೆಗೂ ಮೆರವಣಿಗೆ ಸಾಗಿತು.
ಗಣಪತಿಯ ರಾಜಬೀದಿ ಉತ್ಸವ ಸಾಗುವ ಎಸ್.ಪಿಎಂ. ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಮನೆ ಮುಂದೆ ರಂಗೋಲಿ ಹಾಕಿ ಚಿತ್ತಾಕರ್ಷಕ ಬಣ್ಣ ಹಾಕಲಾಗಿತ್ತು. ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯ ಜನ ವೀಕ್ಷಿಸಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಮಹಾಸಭಾ ಸೇರಿದಂತೆ ಹಿಂದು ಪರ ಸಂಘಟನೆ ಗಳ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಭಗವಾಧ್ವಜ ಹಿಡಿದು ಯುವಕರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠ ಪಾರ್ಕ್ ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಹೆಚ್.ರಸ್ತೆ, ಅಶೋಕವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿವೆ.
ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ.
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳು ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ. ಸಾರ್ವಜನಿಕರು ಹಾದಿಯುದ್ದಕ್ಕೂ ನೀರು ಹಾಕಿ ಮನೆಮುಂದೆ ಸಾರಿಸಿ ರಂಗೋಲಿ ಹಾಕಿದ್ದರು.
ಗಾಂಧಿಬಜಾರ್‌ನ ಪ್ರವೇಶ ದ್ವಾರದಲ್ಲಿ ಉಗ್ರ ನರಸಿಂಹ, ಶಿವಪ್ಪನಾಯಕ ವೃತ್ತದಲ್ಲಿ ಶಿವಾಜಿ ಮಹಾರಾಜರ, ಅಮೀರ್ ಅಹ್ಮದ್ ವೃತ್ತದಲ್ಲಿ ಚಂದ್ರಯಾನ-೩ ರ ಪ್ರತಿಕೃತಿಯನ್ನು ಸ್ಥಾಪಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ. ಬುಧವಾರ ರಾತ್ರಿಯಿಂದಲೇ ಈ ದೃಶ್ಯವನ್ನು ಅಪಾರ ಸಂಖ್ಯೆ ಜನಸ್ತೋಮ ಸೇರಿ ಕಣ್ತುಂಬಿ ಕೊಳ್ಳುತ್ತಿದ್ದುದು ಕಂಡುಬಂತು. ಯುವಕ, ಯುವತಿಯರು ಫೋಟೋ, ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಾಜಬೀದಿಯುದ್ದಕ್ಕೂ ಯುವಕರ ದಂಡು ಬೈಕ್‌ಗಳಲ್ಲಿ ಜೈ ಶ್ರೀರಾಮ್ ಎಂದು ಕೂಗುತ್ತಾ ಸಾಗುತ್ತಿದ್ದರು. ಪ್ರಮುಖ ವೃತ್ತಗಳಲ್ಲಿ ವಿವಿಧ ಸಂಘಟನೆಗಳವರು ಗಣಪತಿಗೆ ಬೃಹತ್ ಹಾರಗಳನ್ನು ಹಾಕಿದರು. ಕುಡಿಯುವ ನೀರು, ಪಾನಕ ಹಾಗೂ ಲಘು ಉಪಾಹಾರಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖ ಉದ್ಯಮ ಮತ್ತು ಸಂಘಟನೆಗಳು ಸ್ವಂತ ಖರ್ಚಿನಲ್ಲಿ ವಾದ್ಯ ಮತ್ತು ಡಿಜೆ ವ್ಯವಸ್ಥೆ ಮಾಡಿಕೊಂಡು ಗಣಪತಿ ಉತ್ಸವವನ್ನು ಮನೆಯ ಹಬ್ಬದಂತೆ ಸಂಭ್ರಮಿಸಿದರು.
ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸಿಸಿ ಟಿವಿ, ದಿವ್ಯದೃಷ್ಟಿ ಕಣ್ಣಾವಲು ಹಾಗೂ ಡ್ರೋನ್ ಕ್ಯಾಮೆರಾಗಳಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿದೆ. ಎಎ ಸರ್ಕಲ್‌ನಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಆರ್‌ಎಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಈದ್‌ಮಿಲಾದ್ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಸಹ ಇದ್ದು, ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ರಜೆ ಇರುವುದರಿಂದ ಹೆಚ್ಚಿನ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಮಕ್ಕಳು, ಹೆಣ್ಣುಮಕ್ಕಳು ಯುವಕರು ಹೆಚ್ಚಾಗಿ ಭಾಗವಹಿಸಿದ್ದರು. ಪುಟ್ಟ ಮಕ್ಕಳು ತಮ್ಮ ಪೋಷಕರ ಹೆಗಲೇರಿ, ಕಟ್ಟಡಗಳ ಮೇಲೇರಿ ಮೆರವಣಿಗೆ ವೀಕ್ಷಿಸಿದರು.
* ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಆರ್‌ಎಸ್‌ಎಸ್ ಪ್ರಮುಖ್ ಪಟ್ಟಾಭಿರಾಮ್, ಹಿಂದೂ ಮಹಾಸಭಾ ಸಂಘಟನೆಯ ಪ್ರಮುಖ ಎಂ.ಕೆ. ಸುರೇಶ್‌ಕುಮಾರ್, ಸಮಿತಿ ಅಧ್ಯಕ್ಷ ದತ್ತಾತ್ರೇಯ ರಾವ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ , ಶಾಸಕ ಡಿ.ಎಸ್.ಅರುಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಎಂ.ಶ್ರೀಕಾಂತ್, ಎಸ್.ರವಿಕುಮಾರ್, ಎನ್.ರಮೇಶ್, ಎಸ್.ರವಿಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ್,ಪಾಲಿಕೆ ಸದಸ್ಯರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪೂರ್ವ ವಲಯ ಐಜಿ ತ್ಯಾಗರಾಜನ್ ನಗರದಲ್ಲಿಯೇ ಮೊಕ್ಕಾಂ ಹೂಡಿದ್ದು, ಪೊಲೀಸ್ ಬಂದೋಬಸ್ತ್ ನೇತೃತ್ವ ವಹಿಸಿದ್ದರು.
* ಮಾರಿಕಾಂಬಾ ದೇವಾಲಯದ ಬಳಿ ಹರಿಗೆಯ ಕೆ.ಕೆ.ಗೌಡ ಕುಟು೦ಬದವರಿಂದ ೧೫೦ ಕೆ.ಜಿ. ತೂಕದ ಸೇಬಿನ ಹಾರ ಅರ್ಪಿಸಲಾಯಿತು.
* ಗೋಪಿ ವೃತ್ತದಲ್ಲಿ ಡಿಜೆ ಅಳವಡಿಸಲಾಗಿದ್ದು, ಸಂಗೀತಕ್ಕೆ ತಕ್ಕಂತೆ ಯುವಕ ಯುವತಿಯರು ಹೆಜ್ಜೆ ಹಾಕಿ ನರ್ತಿಸಿದರು.
* ಗಣಪತಿಯ ರಾಜಬೀದಿ ಉತ್ಸವಕ್ಕೆ ಸ್ವಾಗತ ಕೋರುವ ಬ್ಯಾನರ್‌ಗಳಲ್ಲಿ ಮಾರ್ಗದುದ್ದಕ್ಕೂ ಪುನಿತ್‌ರಾಜ್‌ಕುಮಾರ್ ಭಾವಚಿತ್ರ ಹಾಕಲಾಗಿದೆ
* ಪೊಲೀಸರು ವಿವಿಧ ವೇಷಧಾರಿಗಳಾಗಿ, ಮಫ್ತಿಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.