ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪರ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಡಿಗ ಸಂಘದ ಪ್ರಮುಖರು ಭೇಟಿಯಾಗಿ ಚರ್ಚೆ ನಡೆಸಿದರು.
ಈಡಿಗ ಸಮಾಜದ ಎಲ್ಲ ಉಪಪಂಗಡಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಶೀಘ್ರವೇ ಸಮಾವೇಶ ನಡೆಸಲಿದ್ದು, ಈ ಸಮಾವೇಶಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಯಿತು.
ಈ ಸಂದರ್ಭ ಸಾರಗನ ಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತರಾದ ಯೋಗೇಂದ್ರ ಗುರೂಜಿ, ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಬಿಲ್ಲವರ ಸಂಘದ ಅಧ್ಯಕ್ಷ ವೇದಮೂರ್ತಿ, ಸಮಾಜದ ಪ್ರಮುಖರಾದ ಧರ್ಮರಾಜ್, ಮುಡುರಾಘವೇಂದ್ರ, ರಾಘವೇಂದ್ರ ನಾಯ್ಕ್ ಸೇರಿದಂತೆ ಹಲವು ಮುಖಂಡರಿದ್ದರು.
ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಈಡಿಗ ಮತ್ತು ಅತಿಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ ನಡೆದಿದ್ದು, ಅಂದಿನ ಸಭೆಯಲ್ಲಿ ಹಲವರು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.