ಶಿವಮೊಗ್ಗ: ಸಹಕಾರಿ ಧುರೀಣ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ ಅವರು ಆರನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಮಂಜುನಾಥ್ ಗೌಡ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ನಿಯಮಾವಳಿಯಂತೆ ಚುನಾವಣಾಧಿಕಾರಿ ರುದ್ರಪ್ಪ ಅವರು ಅವಿರೋಧ ಆಯ್ಕೆಯ ಘೋಷಣೆ ಮಾಡಿದರು.
ಅವಿರೋಧ ಆಯ್ಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ ಗೌಡರು, ನಮ್ಮ ಮುಂದೆ ಸವಾಲುಗಳಿವೆ.. ೨೫ ವರ್ಷಗಳ ಅನುಭವವೂ ಇದೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಮತ್ತಷ್ಟು ಶಕ್ತಿ ತುಂಬ ಬೇಕಿದೆ. ಡಿಸಿಸಿ ಬ್ಯಾಂಕ್ ಅಡಿ ಯಲ್ಲಿ ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿವೆ. ಅವುಗಳಿಗೆ ಆರ್ಥಿಕ ನೆರವು ನೀಡಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲು ಸಹಕರಿಸಿದ ನಿರ್ದೇಶಕರು, ಸಿಎಂ,ಡಿಸಿಎಂ, ಸಹಕಾರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ ಸಲ್ಲಿಸುವೆ. ಶಿವಮೊಗ್ಗ ಜಿಲ್ಲೆಯ ಸಂಸದರು, ಎಲ್ಲಾ ಶಾಸಕರುಗಳ ಸಹಕಾರ ಅಗತ್ಯವಿದೆ. ಬ್ಯಾಂಕಿನ ಪ್ರಗತಿಗೆ ಎಲ್ಲರ ಬೆಂಬಲ ಪಡೆದು ಶ್ರಮಿಸುವೆ ಎಂದು ಮಂಜುನಾಥ್ ಗೌಡರು ಹೇಳಿದರು.
ಹಿಂದೆಂದೂ ಕಾಣದಂತಹ ಬರಗಾಲ ಬಂದಿದೆ. ರೈತರು ಧೃತಿಗೆಡುವ ಅಗತ್ಯವಿಲ್ಲ. ಹಲವು ಬರಗಾಲಗಳನ್ನು ನಾನು ಕಂಡಿದ್ದೇನೆ. ಡಿಸಿಸಿ ಬ್ಯಾಂಕ್ ರೈತರ ಹಿತ ಕಾಪಾಡಲು ಯಾವಾಗಲು ಬದ್ಧವಾಗಿದೆ. ಅವರ ನೆರವಿಗೆ ಖಂಡಿತಾ ಬರುತ್ತದೆ ಎಂದರು.
ನಿರ್ದೇಶಕರುಗಳಾದ ಜಗದೀಶ್, ಶ್ರೀಪಾದ ರಾವ್, ಎಸ್.ಪಿ.ದಿನೇಶ್, ಹೆಚ್.ಎಲ್. ಷಡಾಕ್ಷರಿ,ಯೋಗಿಶ್‌ಗೌಡ, ೧೪ ಜನ ನಿರ್ದೇಶಕರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಶಾಸಕ ಬೇಳೂರು ಗೋಪಾಲಕೃಷ್ಣ, ಬಿ.ಆರ್.ಜಯಂತ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವಿಜಯಕುಮಾರ್ (ಧನಿ) ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ಮಂಜುನಾಥ್‌ಗೌಡ ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಪ್ರತಿನಿಧಿಗಳು, ರಾಜಕೀಯ ನಾಯಕರು, ಮಂಜುನಾಥ್‌ಗೌಡ ಬೆಂಬಲಿಗರು ಭಾಗವಹಿಸಿದ್ದರು. ಗೌಡರಿಗೆ ಹಾರ, ಶಾಲು, ಹೂಗುಚ್ಚ ನೀಡಿ ಸನ್ಮಾನಿಸಿದರು. ಕೊನೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.