ತೀರ್ಥಹಳ್ಳಿ : ಕೇಂದ್ರ ಸರ್ಕಾರದ ಗತಿಶಕ್ತಿಯ ಅಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ೪ ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ಮೊಬೈಲ್ ಟವರ್ ಗಳನ್ನು ನಿರ್ಮಾಣ ಮಾಡುವ ಸರ್ವೆ ಕಾರ್ಯಕ್ಕೆ ಒಟ್ಟು ಮೂರು ರಾಜ್ಯಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ಕರ್ನಾಟಕವೂ ಸೇರಿದೆ. ರಾಜ್ಯದ ಮಲೆನಾಡು ಭಾಗದಲ್ಲಿ ಬಿ.ಎಸ್.ಎನ್.ಎಲ್.ನ್ನು ಹೆಚ್ಚಿನ ಅಭಿವೃದ್ಧಿಯತ್ತ ಸಾಗಲು ಚಿಂತನೆ ನಡೆದಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಗೋಪಾಲಗೌಡ ರಂಗಮಂದಿರದಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆ ಕುಂದು ಕೊರತೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ 264 ಹೊಸ ಟವರ್ ಗಳನ್ನು ನಿರ್ಮಾಣ ಮಾಡಲು ಸರ್ವೆ ಕಾರ್ಯಕ್ಕೆ ಮಂಜುರಾತಿ ಸಿಕ್ಕಿದೆ. ಈ ಟವರ್ ಗಳನ್ನು ನಿರ್ಮಾಣ ಮಾಡಲು 300 ಕೋಟಿ ಮಂಜೂರಾಗಿದೆ. 264 ಟವರ್ ಗಳನ್ನು ನಿರ್ಮಿಸಲು ಸರ್ವೆ ಕಾರ್ಯ ಮುಗಿದಿದ್ದು ಅದರಲ್ಲಿ 145 ಸ್ಥಳಗಳಲ್ಲಿ ಸೂಕ್ತ ಜಾಗಗಳನ್ನು ಗುರುತಿಸಲಾಗಿದೆ. ಉಳಿದ 119 ಸ್ಥಳಗಳಲ್ಲಿ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಖಾಸಗಿ ಕಂಪನಿಯ ಟವರ್‌ಗಳು ಇವೆ ಮತ್ತು ಕೆಲವು ಭಾಗದಲ್ಲಿ ಜಾಗದ ಸಮಸ್ಯೆ ಇದೆ ಇನ್ನು ಕೆಲವು ಪ್ರದೇಶಗಳು ಮುಳುಗಡೆ ಪ್ರದೇಶವಾಗಿದೆ. ಈ 199 ಪ್ರದೇಶಗಳನ್ನು ಮರು ಪರಿಶೀಲನೆ ಮಾಡಿ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾವುದೇ ರೀತಿಯ ಜನರೇಟರ್ ವ್ಯವಸ್ಥೆಯ ಅವಶ್ಯಕತೆ ಇಲ್ಲ. ಬದಲಾಗಿ ಸೋಲಾರ್ ಸಿಸ್ಟಮ್‌ನ ಬ್ಯಾಟರಿಯಿಂದ ನಿರ್ವಹಿಸಲಾಗುವುದು ಎಂದರು.
ಅಧ್ಯಕ್ಷತೆಯನ್ನು ಶಾಸಕ ಆರಗ ಜ್ಞಾನೇಂದ್ರ ವಹಿಸಿದ್ದರು. ಬಿಎಸ್‌ಎನ್‌ಎಲ್ ನ ಡಿಜಿಎಂ ವೆಂಕಟೇಶ್ , ತಾಲೂಕು ದಂಡಾಧಿಕಾರಿ ಲಿಂಗರಾಜು, ಪಪಂ ಅಧ್ಯಕ್ಷೆ ಗೀತಾ ರಮೇಶ್, ತಾಲೂಕು ಅಧಿಕಾರಿ ಶೈಲಾ, ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು, ಪಿಡಿಒ ಹಾಗೂ ಅಧ್ಯಕ್ಷರು, ಖಾಸಗಿ ಕಂಪನಿಯಾದ ಏರ್ಟೆಲ್ ಹಾಗೂ ಜಿಯೋ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಸಾಗರ ತಾಲೂಕಿಗೆ 107 ,ಹೊಸನಗರಕ್ಕೆ 45 ,ಶಿವಮೊಗ್ಗ ತಾಲೂಕಿಗೆ 21, ಶಿಕಾರಿಪುರಕ್ಕೆ 15 ,ಭದ್ರಾವತಿಗೆ 11 ,ಸೊರಬ 8, ಬೈಂದೂರಿಗೆ 23 ಕಡೆಗಳಲ್ಲಿ ಸರ್ವೆ ಕಾರ್ಯ ಮಾಡಲು ಮಂಜೂರಾತಿ ಸಿಕ್ಕಿದೆ. ಈಗ ಕಾರ್ಯನಿರ್ವಹಿಸುತ್ತಿರುವ ಹಳೆಯ ಟವರ್ ಗಳಿಗೆ ಬ್ಯಾಟರಿ ವ್ಯವಸ್ಥೆ ಮಾಡಲು ಸುಮಾರು ಐದರಿಂದ ಆರು ಲಕ್ಷದ ಬೆಲೆಬಾಳುವ 100 ಬ್ಯಾಟರಿ ಖರೀದಿಸಲು ಮಂಜುರಾತಿ ಸಿಕ್ಕಿದೆ.
ರಾಘವೇಂದ್ರ, ಸಂಸದ