ಶಿವಮೊಗ್ಗ,ಅ.೧೯: ಸಮಾಜದಲ್ಲಿ ಶ್ರಮಿಕ ವರ್ಗದ ನೌಕರರನ್ನು ಗುರುತಿಸಿ ಸಹಾಯ ಮಾಡುವುದು ಮಾದರಿ ಕೆಲಸ ಎಂದು ಶಿವಮೊಗ್ಗ ವನ್ಯಜೀವಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್ ಹೇಳಿದರು. ಅವರು ಗುರುವಾರ ಸಕ್ರೆಬೈಲ್‌ನಲ್ಲಿ ನೇಚರ ಮಲೆನಾಡು ಮಳೆಕಾಡು ವನ್ಯಜೀವಿ ಅದ್ಯಯನ ಮತ್ತು ಸಂಶೋಧನಾ ಕೇಂದ್ರದ ಅಂಗ ಸಂಸ್ಥೆಯಾದ ವೈಲ್ಡ್ ಟಸ್ಕರ್ ಸಂಸ್ಥೆ ದಸರಾ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮಾವುತರು ಮತ್ತು ಕಾವಾಡಿಗರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರತಮದಲ್ಲಿ ಮಾತನಾಡಿದರು.
ಅರಣ್ಯ ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿ ತಮಗಿರುವ ಕನಿಷ್ಟ ಸೌಲಭ್ಯದಲ್ಲಿಯೂ ಉತ್ತಮ ಕೆಲಸ ಮಾಡುತ್ತಾರೆ. ಅವರ ಶ್ರಮದಿಂದ ಅರಣ್ಯ ಮತ್ತು ವನ್ಯ ಪ್ರಾಣಿಗಳ ರಕ್ಷಣೆಯಾಗುತ್ತಿದೆ. ಮಾವುತ ಕಾವಾಡಿಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಸಂಸ್ಥೆಯ ಉದ್ದೇಶವನ್ನು ಶ್ಲಾಘಿಸಿದರು. ಡಿ ದರ್ಜೆ ನೌಕರರ ಪರವಾಗಿ ಸಂಸ್ಥೆಯೊಂದು ಅವರ ಜೀವನ ಭದ್ರತೆಗಾಗಿ ಶ್ರಮ ವಹಿಸಿ ಕೆಲಸ ಮಾಡುತ್ತಿರುವುದು ಸಮಾಜದಲ್ಲಿ ಉತ್ತಮ ಕಾರ್ಯವೆಂದು ಹೇಳಿದರು.
ಸಂಸ್ಥೆ ಗೌರವ ಅಧ್ಯಕ್ಷರಾದ ಎಂ.ಶ್ರೀಕಾಂತ್ ಅವರು ಮಾತನಾಡಿ, ವೈಲ್ಡ್ ಟಸ್ಕರ್ ಸಂಸ್ಥೆ ಕೊರೊನಾ ಸಂದರ್ಭದಲ್ಲಿ ಜನ್ಮತಾಳಿದ್ದು, ಆ ಸಂದರ್ಭದಲ್ಲಿಯೇ ಮಾವುತ ಹಾಗು ಕಾವಾಡಿಗಳಿಗೆ ಉಚಿತ ಆಹಾರದ ಕಿಟ್‌ಗಳನ್ನ ವಿತರಣೆ ಮಾಡಲಾಗಿತ್ತು. ಅಲ್ಲದೆ ಆನೆಗಳಿಗೂ ಸಹ ಆಹಾರದ ಪೂರೈಕೆಯನ್ನು ಮಾಡಲಾಗಿತ್ತು ಸಕ್ರೇಬೈಲು ಮಾವುತ ಕಾವಾಡಿಗಳ ಸಂಕಷ್ಟಕ್ಕೆ ಸಂಸ್ಥೆ ಯಾವಗಲು ಮಿಡಿಯುತ್ತದೆ ಅಷ್ಟೆ ಅಲ್ಲದೆ ಮಾವುತ ಕಾವಾಡಿಗಳ ಬದುಕಿನ ಶೈಲಿ ಆನೆಗಳ ಜೀವನ ಶೈಲಿ ಇವುಗಳನ್ನು ಸಂಸ್ಥೆ ದಾಖಲಿಸುತ್ತಿದೆ. ಮಾವುತ ಕಾವಾಡಿಗಳ ಸಂಕಷ್ಟಕ್ಕೆ ಯಾವತ್ತು ಸಹ ಸಂಸ್ಥೆ ಸರ್ಕಾರದ ಗಮನ ಸೆಳೆಯುವಂತಹ ಕಾರ್ಯ ಮಾಡಲಿದೆ ಎಂದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಮಾವುತರು ಮತ್ತು ಕಾವಾಡಿಗಳು ಜೀವ ಒತ್ತೆ ಇಟ್ಟು ಕೆಲಸ ಮಾಡುತ್ತಾರೆ. ಅವರ ನೆರವಿಗೆ ವೈಲ್ಡ್ ಟಸ್ಕರ್ ಸಂಸ್ಥೆ ಮುಂದಾಗಿರುವುದು ಮಾದರಿಯಾಗಿದೆ. ಶ್ರೀಕಾಂತ್ ಮತ್ತು ಜೇಸುದಾಸ್ ಅವರ ಮಾನವೀಯ ಕಾರ್ಯ ಮೆಚ್ಚುವಂತಾಗಿದೆ. ಮಾವುತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕೆಂದು ಹೇಳಿದರು.
ಸಂಸ್ಥೆ ನಿರ್ದೇಶಕ ಪಿ.ಜೇಸುದಾಸ್ ಮಾತನಾಡಿ, ಸಂಸ್ಥೆ ವನ್ಯಜೀವಿ ಸಂಶೋಧನೆ, ಅರಣ್ಯ ಬೆಳವಣಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಇಲಾಖೆಯ ಕೆಳಹಂತದ ನೌಕರರ ಆರೋಗ್ಯ, ಮಕ್ಕಳ ಶಿಕ್ಷಣ ಇತ್ಯಾದಿ ಕೆಲಸ ಮಾಡಲಿದೆ ಎಂದು ಸಂಸ್ಥೆ ಉದ್ದೇಶಗಳನ್ನು ವಿವರಿಸಿದರು.
ಸಂಸ್ಥೆಯ ನಿರ್ದೇಶಕ ಜೇಸುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ನಾಗರಾಜ್ ನೇರಿಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯಲ್ಲಿ ವನ್ಯಜೀವಿ ವೈದ್ಯಾದಿಕಾರಿ ಡಾಕ್ಟರ್ ವಿನಯ್, ಡಿಆರ್ ಎಫ್ ಒ ಮಲ್ಲಿಕಾರ್ಜುನ್ ಸೇರಿದಂತೆ ಆನೆ ಬಿಡಾರದ ಸಿಬ್ಬಂದಿಗಳು , ಅರಣ್ಯ ಅಧಿಕಾರಿಗಳು, ಶಿವಮೊಗ್ಗದ ಪತ್ರಕರ್ತ ಮಿತ್ರರು ಉಪಸ್ಥಿತರಿದ್ದರು.