Malenadu Mitra
ರಾಜ್ಯ ಶಿವಮೊಗ್ಗ

ಒಂದು ವರ್ಷದಲ್ಲಿ 20 ಸಾವಿರ ಶಿಕ್ಷಕರ ನೇಮಕಸಿಗಂದೂರು ನವರಾತ್ರಿ ಉತ್ಸವದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿಕೆ

ಶಿವಮೊಗ್ಗ: ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ 20 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳುವ ಚಿಂತನೆಯಿದೆ. ಒಟ್ಟು 40ಸಾವಿರ ಶಿಕ್ಷಕರ ಹುದ್ದೆ ಖಾಲಿಯಿದ್ದು, ಮುಂದಿನ ವರ್ಷಗಳಲ್ಲಿ ಈ ಹುದ್ದೆ ಭರ್ತಿ ಮಾಡಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಮತ್ತ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಹೇಳಿದರು.
ಸಾಗರ ತಾಲೂಕು ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಪತ್ನಿ ಅನಿತಾ ಅವರೊಂದಿಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ಧಾರ್ಮಿಕ ಸಮಾರಂಭಲ್ಲಿ ಅವರು ಮಾತನಾಡಿದರು. ರಾಜ್ಯದ ಶಿಕ್ಷಕಕರಿಗೆ ಇನ್ಫೋಸಿಸ್, ವಿಪ್ರೊ ,ದೇಶಪಾಂಡೆ ಫೌಂಡೇಷನ್ ಸೇರಿದಂತೆ ಅನೇಕ ಖಾಸಗಿ ಸಂಸ್ಥೆಗಳ ನುರಿತ ತಜ್ಞರಿಂದ ಸರಕಾರಿ ಶಾಲೆ ಶಿಕ್ಷಕರಿಗೆ ತರಬೇತಿ ಕೊಡಿಸಲಾಗುತ್ತಿದೆ. ನಮ್ಮ ಸರಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸರಕಾರದ ಆದ್ಯತೆಯಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಇಲಾಖೆಯಲ್ಲಿ ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬರಗಾಲದ ಕಾರಣ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಈ ಕಾರಣದಿಂದ ರೈತರ ಹೊಲಗಳಿಗೆ ನಿರಂತರ ವಿದ್ಯುತ್ ಪೂರೈಕೆ ಕಷ್ಟವಾಗಿದೆ. ಇನ್ನುಮುಂದೆ ೫ ಗಂಟೆ ಕಾಲ ತಡೆರಹಿತ ವಿದ್ಯುತ್ ನೀಡಲಾಗುವುದು. ಶೀಘ್ರವೇ ಇಂಧನ ಸಚಿವ ಜಾರ್ಜ್ ಅವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಆ ಸಂದರ್ಭ ಜಿಲ್ಲೆಯ ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಅರಣ್ಯ ಸಮಸ್ಯೆಗೆ ಪರಿಹಾರ:
ಹಲವು ಜಲವಿದ್ಯುತ್ ಯೋಜನೆಗಳಿಂದ ಮಲೆನಾಡಿನಲ್ಲಿ ಭೂಮಿಯ ಸಮಸ್ಯೆ ಇದೆ. ಶರಾವತಿ ಸಂತ್ರಸ್ಥರ ಸಮಸ್ಯೆ ಇತ್ಯರ್ಥಕ್ಕೆ ಸರಕಾರ ಬದ್ಧವಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ.ಕೇಂದ್ರ ಸರಕಾರ ಹಾಗೂ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಈ ಜನರಿಗೆ ನ್ಯಾಯ ಒದಗಿಸುತ್ತೇವೆ. ಬಗರ್‌ಹುಕುಂ ಸಾಗುವಳಿದಾರರಿಗೆ ಕಾನೂನು ವ್ಯಾಪ್ತಿಯಲ್ಲಿ ಹಕ್ಕುಪತ್ರಕೊಡುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಹೇಳಿದರು.

ಯುವ ರಾಜಕಾರಣಿಗಳಿಗೆ ಬದ್ಧತೆ ಇರಬೇಕು
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಯುವರಾಜಕಾರಣಿಗಳಿಗೆ ಭೂಮಿ, ಹೋರಾಟ, ಕಾನೂನುಗಳ ಬಗ್ಗೆ ಅರಿವು ಮತ್ತು ಆಸಕ್ತಿ ಎರಡೂ ಇಲ್ಲ. ಅಧಿಕಾರ ಸಿಗುವುದು ಜನ ಸೇವೆಗೆ ಸಮಾಜವಾಗಿ ಚಿಂತನೆಯನ್ನು ಮೈಗೂಡಿಸಿಕೊಂಡವರಿಗೆ ಜನರ ಸಮಸ್ಯೆಗಳನ್ನು ಈಡೇರಿಸುವ ಇಚ್ಚಾಶಕ್ತಿ ಇರುತ್ತದೆ. ಜನ ಪ್ರೀತಿ ಮತ್ತು ಬದ್ಧತೆ ಇರದೇ ಇದ್ದರೆ ಸಾಮಾನ್ಯ ಜನರಿಗೆ ನ್ಯಾಯಕೊಡಿಸಲು ಆಗುವುದಿಲ್ಲ ಎಂದರು.
ಸಿಗಂದೂರು ಕ್ಷೇತ್ರವನ್ನು ಇಷ್ಟುದೊಡ್ಡದಾಗಿ ಬೆಳೆಸುವಲ್ಲಿ ರಾಮಪ್ಪ ಅವರು ತುಂಬಾ ಕಷ್ಟಪಟ್ಟಿದ್ದಾರೆ. ಈಗ ಹಲವು ಜನಪರ ಕೆಲಸ ಮಾಡುತ್ತಿದ್ದು, ಮಾದರಿ ಸೇವೆಗೆ ನಾವು ತಲೆ ಬಾಗುತ್ತೇವೆ ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ತಳಸಮುದಾಯದ ಆರಾಧಿಸುವ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಆರಾಧನಾ ಯೋಜನೆ ಜಾರಿಗೆ ತಂದರು. ಸಿಗಂದೂರು ಕ್ಷೇತ್ರದ ದೈವೀ ಶಕ್ತಿಯಿಂದ ಇಂದು ಭಕ್ತರ ಶ್ರದ್ಧಾಕೇಂದ್ರವಾಗಿದೆ. ನವರಾತ್ರಿಯಲ್ಲಿ ದುಷ್ಟ ಶಕ್ತಿಗಳ ನಿಗ್ರಹಿಸುವ ದುರ್ಗಾಮಾತೆಯನ್ನು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಶಿವಮೊಗ್ಗ ಮತ್ತು ಕಾರವಾರ ಜಿಲ್ಲೆಯಲ್ಲಿನ ಜನರು ಹಲವು ಯೋಜನೆಗಳಿಗಾಗಿ ತ್ಯಾಗ ಮಾಡಿದ್ದಾರೆ. ಸರಕಾರ ಈ ಜನರ ಬಗ್ಗೆ ವಿಶೇಷ ಕಾಳಜಿವಹಿಸಬೇಕು ಎಂದು ಹೇಳಿದರು.

ಧರ್ಮದರ್ಶಿ ಡಾ.ಎಸ್. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಪ್ರಮುಖರಾದ ಕಲಗೋಡು ರತ್ನಾಕರ್, ಮುಡುಬ ರಾಘವೇಂದ್ರ, ಮಸಗಾರ್ ರಾಜಪ್ಪ, ಆರ್.ಶ್ರೀಧರ್ ಹುಲ್ತಿಕೊಪ್ಪ, ಶಿಕಾರಿಪುರದ ನಾಗರಾಜ ಗೌಡ, ಎನ್.ಪಿ.ಧರ್ಮರಾಜ್, ತಬಲಿ ಬಂಗಾರಪ್ಪ, ಗಂಟೆ ಹರೀಶ್,ಜಾಕಿ ಗಣೇಶ್, ಪ್ರವೀಣ್ ಇಡಗೋಡು ಮತ್ತಿತರರಿದ್ದರು. ದೇವಾಲಯ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್ ಸ್ವಾಗತಿಸಿದರು. ದೇವರಾಜ್ ಕಪ್ಪದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನ್ವಿ ಜಿ ಭಟ್ ಪ್ರಾರ್ಥಿಸಿದರು. ಚಂದ್ರಪ್ಪ ಅಡೂರು ಕಾರ್ಯಕ್ರಮ ನಿರೂಪಿಸಿದರು.

ನಾಡಿನ ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಸಿಗಂದೂರು ಕ್ಷೇತ್ರದ ವಿಚಾರದಲ್ಲಿ ಭಕ್ತರ ಭಾವನೆಗೆ ವಿರುದ್ಧವಾದ ಯಾವುದೇ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳುವುದಿಲ. ಸಿಗಂದೂರು ಚೌಡಮ್ಮನ ಸನ್ನಿದಾನಕ್ಕೆ ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಅವರಿಗೆ ಪೂರಕ ವ್ಯವಸಸ್ಥೆಯನ್ನು ಕಲ್ಪಿಸಲು ಧರ್ಮದರ್ಶಿ ರಾಮಪ್ಪ ಅವರು ಮಾಡಿರುವ ಶ್ರಮ ಮತ್ತು ಧಾರ್ಮಿಕ ಸಂಸ್ಥೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ ಅವರ ಇಚ್ಚಾಶಕ್ತಿ ಅನನ್ಯವಾದುದು. ಈ ಕ್ಷೇತ್ರದ ವಿಚಾರದಲ್ಲಿ ಸರಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ

ಮಧುಬಂಗಾರಪ್ಪ, ಉಸ್ತುವಾರಿ ಸಚಿವ

Ad Widget

Related posts

ಬಡವರ ಬಂಧು ಬಂಗಾರಪ್ಪ ಸ್ಮರಣೆ ಜಿಲ್ಲೆಯಾದ್ಯಂತ ಮೇರುನಾಯಕನ ಜನ್ಮದಿನಾಚರಣೆ

Malenadu Mirror Desk

ಶಿವಮೊಗ್ಗದಲ್ಲಿ ಡ್ಯಾನ್ಸ್ ಮಾಸ್ಟರ್ ಕೊಲೆ

Malenadu Mirror Desk

ಅವಧಿ ಪೂರೈಸದ ಶಿವಮೊಗ್ಗ ಸಿಎಂ ಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.