ಶಿವಮೊಗ್ಗ: ಜಾತಿ, ಮತ, ಭಾಷೆ, ಧರ್ಮಗಳನ್ನು ಮೀರಿದ ಎಲ್ಲಾ ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವವಾಗಿದೆ. ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು ಎಂದು ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವವನ್ನು ನಾಡಿನ ಎಲ್ಲರೂ ಅತ್ಯಂತ ಸಂಭ್ರಮ, ಸಂತೋಷದಿಂದ ಆಚರಿಸುತ್ತಿದ್ದೇವೆ. ಜಾತಿ, ಮತ, ಭಾಷೆ ಹಾಗೂ ಧರ್ಮಗಳನ್ನು ಮೀರಿದ ಎಲಾ ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವ ಎಂದರು.
ರಾಜ್ಯೋತ್ಸವ, ಭಾಷಾಭಿಮಾನ ನವೆಂಬರ್ ಮಾಹೆಗೆ ಸೀಮಿತವಾದರೆ ಸಾಲದು. ಪ್ರತಿನಿತ್ಯ ನಾವು ಕನ್ನಡಿಗರಾಗಿರಬೇಕು. ಕನ್ನಡ ನಮ್ಮ ಉಸಿರು, ಜೀವನಾಡಿಯಾಗಬೇಕು. ಆಂತರಿಕವಾಗಿ ಕನ್ನಡದ ಡಿಂಡಿಮ ಮೊಳಗಬೇಕು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ ೮ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವುದು ಸಂತೋಷದ ಸಂಗತಿಯಾಗಿರುತ್ತದೆ ಎಂದರು.
ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಮೇಯರ್ ಶಿವಕುಮಾರ್, ಜಿ.ಪಂ. ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಉಪವಿಭಾಗಾಧಿಕಾರಿ ಸತ್ಯನಾರಾಯಣ ಇನ್ನಿತರರಿದ್ದರು.