ಶಿವಮೊಗ್ಗ: ಆರ್ಯವೈಶ್ಯ ಮಹಿಳಾ ಮಹಾಸಭಾವು ಸಮಾಜ ಮುಖಿ ಕೆಲಸ ಮಾಡುತ್ತಾ ದೊಡ್ಡ ಮಹಿಳಾ ಶಕ್ತಿಯಾಗಿ ಬೆಳೆದಿದೆ ಎಂದು ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ, ವಾಸವಿ ಮಹಿಳಾ ಸಂಘ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಐದು ಜಿಲ್ಲೆಗಳ ಆರ್ಯವೈಶ್ಯ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವಾಸವಿ ಯುವಜನ ಸಮಾಜ, ವಾಸವಿ ಮಹಿಳಾ ಸಂಘ, ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಶಿವಮೊಗ್ಗದಲ್ಲಿ ಒಂದು ಶಕ್ತಿ ಕೇಂದ್ರವೇ ಆಗಿದೆ. ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ದೇಶಭಕ್ತಿಗೂ ಕಾರಣವಾಗಿದೆ. ಮಹಿಳಾ ಸಂಘದ ಸೇವಾ ಕೇಂದ್ರವೂ ಆಗಿದೆ. ಇದಕ್ಕೆ ಹಿರಿಯರ ಸಹಕಾರ ಕೂಡ ಇದೆ ಎಂದರು.
ಹೆಣ್ಣಿನ ಪರಿಶ್ರಮವೇ ದೇಶದ ಶಕ್ತಿಯಾಗಿದೆ. ಎಲ್ಲಿ ಹೆಣ್ಣಿಗೆ ಗೌರವ ಸಿಗುತ್ತದೋ ಅಲ್ಲಿ ನೆಮ್ಮದಿ ಇರುತ್ತದೆ. ಹೆಣ್ಣು ಕುಟುಂಬದ ಕಣ್ಣಾಗಿ ಕೆಲಸ ಮಾಡುತ್ತಾಳೆ. ಆರ್ಯವೈಶ್ಯ ಮಹಿಳಾ ಮಹಾಸಭಾವು ಹೆಣ್ಣಿಗೆ ಘನತೆ ತಂದು ಕೊಡುವ ಕೆಲಸ ಮಾಡಿದೆ. ಹೀಗೆಯೇ ಸಮಾಜಮುಖಿ ಕೆಲಸ ಮಾಡುತ್ತಾ ದೇಶಪ್ರೇಮವನ್ನು ಬೆಳೆಸಲಿ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಯೋಜನೆಗಳ ಕಿರುಪತ್ರ ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಬೇಕಾಗಿದೆ. ಕುಟುಂಬಗಳೇ ಶಿಥಿಲಗೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಕುಟುಂಬ ಗಟ್ಟಿ ಮಾಡುವ ಕರ್ತವ್ಯ ಕೂಡ ಹೆಣ್ಣಿಗಿದೆ. ಈ ನಿಟ್ಟಿನಲ್ಲಿ ವಾಸವಿ ಮಹಿಳಾ ಸಂಘ ಹಲವು ಕಾರ್ಯಕ್ರಮಗಳ ಮೂಲಕ ಜಗೃತಿ ಮೂಡಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷೆ ರಾಧಿಕಾ ಜಗದೀಶ್, ಆರ್ಯವೈಶ್ಯ ಮಹಾ ಸಭಾದ ರಾಜ್ಯಾಧ್ಯಕ್ಷೆ ಸುಧಾಮೂರ್ತಿ, ಪದಾಧಿಕಾರಿಗಳಾದ ಅರುಣ, ವಿದ್ಯಾ, ಶಕುಂತಲಾ, ರಂಜನಾ, ವಿಜಯಾ ದತ್ತಕುಮಾರ್, ಗೀತಾ, ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಎಸ್.ಕೆ. ಶೇಷಾಚಲ, ಪ್ರಮುಖರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ದತ್ತಕುಮಾರ್, ಅರವಿಂದ್ ಇದ್ದರು.
previous post