Malenadu Mitra
ರಾಜ್ಯ ಶಿವಮೊಗ್ಗ

ಪತ್ರಕರ್ತರು ಸಮಾಜಮುಖಿಯಾಗಿ ಚಿಂತಿಸಬೇಕು,ಕ್ರಾಂತಿದೀಪ ಮುದ್ರಣವಿಭಾಗ ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ,ನ.೩: ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಅನೌಪಚಾರಿಕವಾಗಿ ಹೇಳಲಾಗುತ್ತಿದೆ. ಆದರೆ ಇಂದು ಪತ್ರಿಕೋದ್ಯಮ ಸಮಾಜದ ಮೇಲೆ ಪ್ರಭಾವ ಬೀರುವ ಪ್ರಭಾವಿ ಮಾಧ್ಯಮವಾಗಿದೆ. ದೇಶದಲ್ಲಿನ ಹಲವು ಧಾರ್ಮಿಕ, ಸಾಮಾಜಿಕ ಕ್ರಾಂತಿಗಳಿಗೆ ಪತ್ರಿಕೋದ್ಯಮ ಕಾರಣವಾಗಿದೆ. ದಿಕ್ಕೆಟ್ಟ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕಾಯಕವನ್ನು ಪತ್ರಿಕೋದ್ಯಮ ಮಾಡಿಕೊಂಡು ಬಂದಿರುವುದನ್ನು ನಾವು ನೋಡಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಕ್ರಾಂತಿದೀಪ ಪ್ರಾದೇಶಿಕ ಪತ್ರಿಕೆಯ ಮುದ್ರಣಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುದ್ರಣಾಲಯವನ್ನು ನಡೆಸುತ್ತಿದ್ದ ನನಗೆ ಈ ಕ್ಷೇತ್ರದ ಸವಾಲುಗಳು ಗೊತ್ತಿವೆ. ಕ್ರಾಂತಿದೀಪ ಪತ್ರಿಕೆಯು ಸ್ವಂತ ಮುದ್ರಣ ಯಂತ್ರ ಪ್ರಾರಂಭಿಸಿರುವುದು ಸಂತೋಷವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಪೈಪೋಟಿಯಿದೆ. ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಒಂದು ಸೌಹಾರ್ದಯುತ ಸಂಬಂಧ ಅಗತ್ಯವಾಗಿದೆ. ಇಬ್ಬರಿಗೂ ಸಾಮಾಜಿಕ ಜವಾಬ್ದಾರಿಯಿದೆ. ಎಲ್ಲರೂ ಅವರವರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಪತ್ರಿಕೆಗಳು ಜ್ಞಾನಕೋಶಗಳಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪತ್ರಕರ್ತರು ಮತ್ತು ಸಾಹಿತಿಗಳಿಗೆ ಸಮಾಜದಲ್ಲಿ ಉತ್ತಮ ಗೌರವ ಇದೆ. ಆದರೆ ಈ ಕ್ಷೇತ್ರ ನೆಚ್ಚಿಕೊಂಡಿರುವ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುತ್ತಾರೆ. ಜಾಹೀರಾತು ಬಂದರೆ ಮಾತ್ರ ಪತ್ರಿಕೆಗಳು ಉಳಿಯುತ್ತವೆ. ಓದುಗರಿಗೆ ಆಸಕ್ತಿದಾಯಕ ಸುದ್ದಿ ನೀಡಿದರೆ ಮಾತ್ರ ಜನರ ನಡುವೆ ಪತ್ರಿಕೆಗಳು ಉಳಿಯುತ್ತವೆ. ಸೋಷಿಯಲ್ ಮೀಡಿಯಾದ ಅಬ್ಬರದ ನಡುವೆಯೂ ಪತ್ರಿಕೆಗಳು ಜೀವಂತಿಕೆಯಿಂದ ಉಳಿಯುವುದು ಅವುಗಳ ಗುಣಮಟ್ಟದ ಮೇಲೆ ಎಂದು ಸಚಿವ ಮಧುಬಂಗಾರಪ್ಪ ಅಭಿಪ್ರಾಯಪಟ್ಟರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ನಮ್ಮ ಮುಖ ಹೇಗಿದೆ ಎಂಬುದಕ್ಕೆ ಕನ್ನಡಿ ನೋಡುತ್ತೇವೆ. ಅದೇ ರೀತಿ ಸಮಾಜ ಹೇಗಿದೆ ಎಂಬುದಕ್ಕೆ ಪ್ರತಿದಿನ ಪತ್ರಿಕೆ ಓದುತ್ತೇವೆ. ಪ್ರಸ್ತುತ ದಿನಗಳಲ್ಲಿ ಕೆಲ ಪತ್ರಿಕೆಗಳು ತಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿವೆ. ಕ್ರಾಂತಿದೀಪ ಪತ್ರಿಕೆ ಸಂಪಾದಕರ ಕಷ್ಟದ ದಿನಗಳಲ್ಲಿ ನಾನು ಅವರ ಜೊತೆಗಿದ್ದೆ. ಮಂಜಣ್ಣನ್ನವರದ್ದು ಹೋರಾಟದ ಬದುಕು. ಅವರ ಪತ್ರಿಕೆ ಹಾಗು ಮುದ್ರಣಾಲಯವು ಚೆನ್ನಾಗಿ ನಡೆಯಲಿ ಎಂದು ಕಿಮ್ಮನೆ ರತ್ನಾಕರ್ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಕರಾವಳಿ ಮುಂಜಾವು ಪತ್ರಿಕೆ ಸಂಪಾದಕ ಗಂಗಾಧರ್ ಹಿರೇಗುತ್ತಿಯವರು ಮಾತನಾಡಿ, ಕ್ರಾಂತಿದೀಪ ಪತ್ರಿಕೆ ಮುದ್ರಾಣಾಲಯ ಆರಂಭಿಸಿರುವುದು ಓದುಗರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿದೆ. ಓದುಗರ ವಿಶ್ವಾಸ ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತದೆ. ಇಂದು ಸಾಮಾಜಿಕ ಜಾಲತಾಣಗಳಿದ್ರೂ, ಎಲೆಕ್ಟ್ರಾನಿಕ್ ಮಿಡಿಯಾಗಳಿದ್ದರೂ, ಜನರು ಅಂತಿಮವಾಗಿ ನಂಬುವುದು ಪತ್ರಿಕೆಯನ್ನು. ಈಗ ಪತ್ರಿಕೆಗಳು ನಿರಾಸೆಗೊಳ್ಳುವ ಸಂದರ್ಭಗಳಿಲ್ಲ. ಕೋವಿಡ್ ಸಂದರ್ಭದಲ್ಲಿ ಪತ್ರಿಕೆಗಳು ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೆ ಪತ್ರಿಕೋಧ್ಯಮ ಬಲಿಷ್ಠವಾಗಬೇಕಿದೆ. ನಮ್ಮ ಎಡಿಟರ್ಸ್ ಸಬ್ ಎಡಿಟರ್ಸ್ ರಿಪೋರ್ಟಸ್ ಒಂದು ರೀತಿಯಲ್ಲಿ ನಿಶ್ಕ್ರಿಯರಾಗಿದ್ದಾರೆ. ಎಲ್ಲಾ ಪತ್ರಿಕೆಗಳು ಬದುಕಬೇಕಾದ ಅಗತ್ಯತೆಯಿದೆ ಜನರ ವಿಶ್ವಾಸ ಉಳಿಸಿಕೊಳ್ಳುವ ತುರ್ತು ಕೂಡ ಇದೆ ಎಂದು ಹೇಳಿದರು.

ಈಶಾನ್ಯ ಟೈಮ್ಸ್ ಸಂಪಾದಕ ನಾಗರಾಜ್ ಮಾತನಾಡಿ, ಮುದ್ರಣ ಮಾದ್ಯಮವು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಬೇಕು. ಹೊಸದನ್ನು ಬಯಸುವ ಓದುಗರ ಆಶಯದಂತೆ ಪತ್ರಿಕೆ ಮಾಡಬೇಕಿದೆ. ಇಂದು ಜಾಹಿರಾತು ಕೊರತೆಯಿಂದ ಪತ್ರಿಕೆ ನಡೆಸುವುದೇ ದುಸ್ತರವಾಗಿದೆ. ಸವಾಲಿನ ಸಂದರ್ಭದಲ್ಲಿಯೂ ಮುದ್ರಣ ವಿಭಾಗ ಆರಂಭಿಸಿರುವ ಕ್ರಾಂತಿದೀಪ ಜನಮನ್ನಣೆಗಳಿಸಲಿ ಎಂದು ಹಾರೈಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಕ್ರಾಂತಿದೀಪ ಸಂಪಾದಕ ಮಂಜುನಾಥ್ ರವರದ್ದು ಹೋರಾಟದ ಬದುಕು. ಅವರು ಹೋರಾಟದಿಂದ ಪತ್ರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದವರು. ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ್, ಪತ್ರಿಕೆ ಬೆಳೆದು ಬಂದ ಹಾದಿ, ಕಷ್ಟದಲ್ಲಿ ಕೈಹಿಡಿದವರ ನೆನಪುಗಳನ್ನು ಮೆಲುಕು ಹಾಕಿದರು. ಎಸ್ ಬಂಗಾರಪ್ಪನವರು ಕ್ರಾಂತಿದೀಪಕ್ಕೆ ಮಾಡಿದ ಉಪಕಾರವನ್ನು ಸ್ಮರಿಸಿದರು. ಅವರ ಪುತ್ರ ಮಧುಬಂಗಾರಪ್ಪ ಮುದ್ರಣಾಲಯಕ್ಕೆ ಚಾಲನೆ ನೀಡಿರುವುದು ಅತೀವ ಸಂತೋಷ ತಂದಿದೆ ಎಂದು ಹೇಳಿದರು. ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಗೋಪಿನಾಥ್, ಎಸ್.ಪಿ.ದಿನೇಶ್, ಉದ್ಯಮಿ ಅಶ್ವತ್ಥನಾರಾಯಣ ಶೆಟ್ಟಿ, ವಕೀಲ ಕೆ.ಪಿ.ಶ್ರೀಪಾಲ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ನಾಗರಾಜ್ ನೇರಿಗೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಚಿತ್ರಾ ಪ್ರಾರ್ಥನೆ ಗೀತೆ ಹಾಡಿದರು.

ನೂತನ ಮುದ್ರಣಾಲಯಕ್ಕೆ ಭೇಟಿ ನೀಡಿದ್ದ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಶುಭ ಕೋರಿ ಉದ್ಯಮ ಯಶಸ್ವಿಯಾಗಲಿ ಎಂದು ಹಾರೈಸಿದರು.

Ad Widget

Related posts

ಯುವಕನ ಕೊಲೆ, ಕಾರಣ ನಿಗೂಢ!

Malenadu Mirror Desk

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

Malenadu Mirror Desk

ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಈ ಬಾರಿ ಯೋಗ ದಿನಾಚರಣೆ: ಡಾ.ಸೆಲ್ವಮಣಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.