Malenadu Mitra
ರಾಜ್ಯ

ಬಿ.ವೈ ವಿಜಯೇಂದ್ರಗೆ ಅದ್ದೂರಿ ಸ್ವಾಗತ, ಈಶ್ವರಪ್ಪ-ಸಂಘದ ಪ್ರಮುಖರ ಮನೆಗೆ ಭೇಟಿ:ತೆರೆದ ವಾಹನದಲ್ಲಿ ಮೆರವಣಿಗೆ

ಶಿವಮೊಗ್ಗ:ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ಶಿವಮೊಗ್ಗಕ್ಕೆ ಆಗಮಿಸಿದ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷದ ನಾಯಕರು ಅದ್ದೂರಿ ಸ್ವಾಗತ ಕೋರಿದರು.
ಬಿ.ವೈ ವಿಜಯೇಂದ್ರ ಅವರು ಪಕ್ಷದ ಕಛೇರಿಗೆ ಭೇಟಿ ನೀಡುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಘೋಷಣೆ ಕೂಗಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ ಮೇಘರಾಜ್ ನೇತೃತ್ವದಲ್ಲಿ ವಾದ್ಯಮೇಳದೊಂದಿಗೆ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ  ಪೂರ್ಣ ಕುಂಭ ಸ್ವಾಗತ ನೀಡಲಾಯಿತು.ಬಿಜೆಪಿ ಕಛೇರಿಯನ್ನು ಚಪ್ಪರ,ತಳಿರು-ತೋರಣದಿಂದ ಆಲಂಕರಿಸಲಾಗಿತ್ತು.
ಬಿ.ವೈ ವಿಜಯೇಂದ್ರ ಪಕ್ಷದ ಕಛೇರಿಗೆ ಬಂದಾಗ ಕಾರ್ಯಕರ್ತರ ಹಷೋದ್ಘಾರ ಮುಗಿಲು ಮುಟ್ಟಿತ್ತು.ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಇರೋಣ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಶ್ರಮಿಸೋಣ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಗೆಲ್ಲಬೇಕು ಎಂದು ತಿಳಿಸಿದರು.

ಈಶ್ವರಪ್ಪ-ಸಂಘದ ಪ್ರಮುಖರ ಮನೆಗೆ ಭೇಟಿ:


ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ತವರು  ಶಿವಮೊಗ್ಗ ಜಿಲ್ಲೆಗೆ ಆಗಮಿಸುತ್ತಿದ್ದಂತೆ ಮತ್ತೂರು ಗ್ರಾಮಕ್ಕೆ ತೆರಳಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹಕರಾದ ಪಟ್ಟಾಭಿರಾಮ್ ಹಾಗೂ ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಂ.ಬಿ ಭಾನುಪ್ರಕಾಶ್ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದುಕೊಂಡರು.
ಬಳಿಕೆ ಶಿವಮೊಗ್ಗ ನಗರದ ಗುಂಡಪ್ಪ ಶೆಡ್‌ನಲ್ಲಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿದರು.
ಈ ವೇಳೆ ಈಶ್ವರಪ್ಪ ದಂಪತಿಯ ಆಶೀರ್ವಾದ ಪಡೆದುಕೊಂಡರು.ಮನೆಗೆ ಬಂದ ವಿಜಯೇಂದ್ರ ಅವರನ್ನು ಈಶ್ವರಪ್ಪ ಪುತ್ರ ಕೆ.ಈ ಕಾಂತೇಶ್ ಹೂಗುಚ್ಚ ನೀಡಿ ಸ್ವಾಗತಿಸಿದರು.ಈ ವೇಳೆ ಈಶ್ವರಪ್ಪ ಅವರಿಗೆ ಶಾಲು ಹಾಕಿ ಬಿ.ವೈ ವಿಜಯೇಂದ್ರ ಅವರು ಸನ್ಮಾನ ಮಾಡಿದರು.
ವಿಜಯೇಂದ್ರ ಅವರನ್ನು  ಅಭಿನಂದಿಸಿ ಈಶ್ವರಪ್ಪ ಸಿಹಿ ತಿನ್ನಿಸಿದರು.ಈಶ್ವರಪ್ಪ ಪತ್ನಿ ಜಯಲಕ್ಷ್ಮಮ್ಮ ಕೂಡ ದೇವರ ಕೋಣೆಗೆ ಕರೆದು  ಬಾಳೆಹಣ್ಣು ನೀಡಿದರು.ಈ ವೇಳೆ ಬಿಜೆಪಿ ಕಾರ್ಯಕರ್ತರು ಜಯಘೋಷ ಕೂಗಿದರು.
ಇಬ್ಬರು ನಾಯಕರು ಕೆಲಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಪ್ರಮುಖರಾದ ಗಿರೀಶ್ ಪಟೇಲ್ ಸೇರಿದಂತೆ ಹಲವರು ಇದ್ದರು.
ಬೈಕ್ ರ್‍ಯಾಲಿ:
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ನಗರದ ಬೆಕ್ಕಿನಕಲ್ಮಠದಿಂದ ಮೆರವಣಿಗೆ ನಡೆಸಲಾಯಿತು. ದೊಡ್ಡ ಸಂಖ್ಯೆಯ ಬೈಕ್‌ಗಳು ಜಾಥಾದಲ್ಲಿ ಭಾಗವಹಿಸಿದ್ದವು. ಆರಂಭದಲ್ಲಿ ವಿಜಯೇಂದ್ರಗೆ ಸೇಬು ಹಣ್ಣಿನ ಬೃಹತ್ ಹಾರ ಹಾಕಲಾಯಿತು. ನಗರದ ಪ್ರಮುಖ ರಸ್ತೆಗಳ ಮೂಲಕ ಪಿಇಎಸ್ ಕಾಲೇಜು ಸಭಾಂಗಣದವರೆಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಾಘವೇಂದ್ರ, ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಸೇರಿದಂತೆ ಹಲವರು ಜಾಥಾದಲ್ಲಿ ಭಾಗವಹಿಸಿದ್ದರು.

ಅಭೂತಪೂರ್ವ ಸ್ವಾಗತ :ಬಿ.ಎಸ್.ಯಡಿಯೂರಪ್ಪ
ಬಿ.ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯದ ಉದ್ದಗಲಕ್ಕೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪ್ರೇರಣಾ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಬಗ್ಗೆ ಜನ ಬೇಸತ್ತಿದ್ದಾರೆ.ಸರಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಅಧಿಕಾರಕ್ಕೆ ಇರಲು ಹಕ್ಕಿಲ್ಲ ರಾಜೀನಾಮೆ ಕೊಟ್ಟು ಹೋಗಿ ಅಂತಿದ್ದಾರೆ ಎಂದ ಅವರು,ಇಂದೇ  ಚುನಾವಣೆ ನಡೆದರೂ ರಾಜ್ಯದಲ್ಲಿ ಬಿಜೆಪಿ ೧೩೫-೧೩೬ ಸೀಟು ಬರುತ್ತದೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಅಂತಹ ವಾತಾವರಣ ಸೃಷ್ಟಿಯಾಗಿದೆ.ಮಾಧ್ಯಮದಲ್ಲಿ ಬಂದ ವರದಿ ಆಧಾರದ ಮೇಲೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದರು.
ಈಗ ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಬರೋದು ನಿಶ್ಚಿತ. ಲೋಕಸಭೆಯಲ್ಲಿ ೨೮ ಕ್ಕೆ ೨೮ ಗೆಲ್ಲಬೇಕು.ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದರು.

ಕಾಂಗ್ರೆಸ್ ಜನಪ್ರಿಯತೆ ಕಳೆದುಕೊಂಡಿದೆ: ಬಿ.ವೈ.ವಿಜಯೇಂದ್ರ

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು,ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರೇ ತಿಂಗಳಿಗೆ ಜನಪ್ರಿಯತೆ ಕಳೆದುಕೊಂಡಿದೆ ಎಂದು ಹೇಳಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನಿಂತು ಮಾತಾಡಲು ಕೇಂದ್ರದ ನಾಯಕರು ಅವಕಾಶ ನೀಡಿದ್ದಾರೆ. ಅದೇ ರೀತಿ ರಾಜ್ಯದ ನಾಯಕರು, ಕಾರ್ಯಕರ್ತರು ಸಹಕಾರ ನೀಡಿದ್ದಾರೆ. ಅದೇ ರೀತಿ ಶಿಕಾರಿಪುರ ಕ್ಷೇತ್ರದ ಜನರು ಅವಕಾಶ ನೀಡಿದ್ದಕ್ಕೆ ಇಲ್ಲಿ ಬಂದು ನಿಂತಿದ್ದೇನೆ. ನಾನು ಕೂಡ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಲೋಕಸಭೆ ಚುನಾವಣೆ ಗೆಲ್ಲುವವರೆಗೂ ನಾವೆಲ್ಲರೂ ಒಟ್ಟಾಗಿ ಸಾಗುತ್ತೇವೆ.ಎಲ್ಲಾ ಮುಖಂಡರು, ಕಾರ್ಯಕರ್ತರನ್ನು ಒಟ್ಟಾಗಿ ಕರೆದೊಯ್ಯುತ್ತೇನೆ. ೨೮ ಕ್ಕೆ ೨೮ ಕ್ಷೇತ್ರ ಗೆಲ್ಲುವ ಮೂಲಕ ಲೋಕಸಭೆಯಲ್ಲಿ ಮೋದಿಯವರ ಕೈ ಬಲ ಪಡಿಸುತ್ತೇವೆ ಎಂದರು.
ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜಿಲ್ಲೆ ಪ್ರವಾಸ ಮಾಡ್ತೇನೆ.ದಿನಕ್ಕೆ ಎರಡು ಜಿಲ್ಲೆಗೆ ಪ್ರವಾಸ ಮಾಡ್ತೇನೆ. ಹಳ್ಳಿ- ಹಳ್ಳಿಗೆ ಭೇಟಿ ಮಾಡಿ, ಅಲ್ಲಿನ ಸಮಸ್ಯೆಗಳನ್ನು ಅರಿಯುತ್ತೇನೆ. ರಾಜ್ಯದ ಯಾವುದೇ ಕಾರ್ಯಕರ್ತ ತಲೆತಗ್ಗಿಸದಂತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದರು.
ಕಾಂತರಾಜ್ ವರದಿ ಬಗ್ಗೆ ಸರ್ಕಾರದಲ್ಲಿ ಗೊಂದಲ ಇದೆ.ಸಿಎಂ ವರದಿ ಬೇಕು ಅಂದರೇ.. ಇನ್ನೋಂದು ಕಡೆ ಬೇಡ ಎಂದು ಸಹಿ ಸಂಗ್ರಹವಾಗುತ್ತಿದೆ.ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಲು ಬಯಸುತ್ತೇನೆ. ಈ ಹಿಂದೆಯೇ ಅಧಿಕಾರದಲ್ಲಿದ್ದಾಗ ಯಾಕೇ ನೀವು ವರದಿ ಸ್ವೀಕರಿಸಲಿಲ್ಲಾ.ಕಾಂತರಾಜ್ ವರದಿ ಅರೆಬರೆಯಾಗಿರುವ ವರದಿ.. ಎಸಿ ರೂಂ ಲಿ ಕುಳಿತು ಮಾಡಿದ್ದಾರೆ. ಮನೆಮನೆಗೆ ಹೋಗಿ, ವೈಜ್ಞಾನಿಕವಾಗಿ ವರದಿ ತಯಾರು ಮಾಡಬೇಕು. ಬಿಜೆಪಿ ಈ ವರದಿಯನ್ನು ವಿರೋಧ ಮಾಡಲ್ಲ.ಅದರೇ, ವರದಿ ವೈಜ್ಞಾನಿಕವಾಗಿ ಆಗಬೇಕು. ಆದರೇ, ಕಾಂಗ್ರೆಸ್ ಈ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ,ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಕ್ಕೆ ಕಾರ್ಯಕರ್ತರ ಸಂಭ್ರಮ ಹೆಚ್ಚಾಗಿದೆ.ಈ ಸಂಭ್ರಮ ಕಾಂಗ್ರೆಸ್ ನವರು ನೋಡಿದ್ರೇ ಅವರ ಎದೆ ಒಡೆದುಹೋಗುತ್ತೆ.ಇನ್ನೂ ಕಾರ್ಯಕ್ರಮ ಕೊಟ್ಟಿಲ್ಲ.ಕೇವಲ ಕಾಲಿಟ್ಟಿದ್ದಾರೆ ಅಷ್ಟೇ.ವಿಜಯೇಂದ್ರರ ಹಿಂದೆ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ ಎಂದರು.
ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ,ಶಾಸಕರಾದ ಆರಗ ಜ್ಞಾನೇಂದ್ರ,ಎಸ್.ಎನ್ ಚನ್ನಬಪಸ್ಪ,ಎಸ್.ರುದ್ರೇಗೌಡ,ಡಿ.ಎಎಸ್ ಅರುಣ್,ಭಾರತಿ ಶೆಟ್ಟಿ,ಮಾಜಿ ಸಚಿವ ಹರತಾಳು ಹಾಲಪ್ಪ,ಮಾಜಿ ಶಾಸಕರಾದ ಬಿ.ಸ್ವಾಮಿರಾವ್,ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್,ಪ್ರಮುಖರಾದ ಎಂ.ಬಿ ಭಾನುಪ್ರಕಾಶ್ ಸೇರಿದಂತೆ ಹಲವರಿದ್ದರು.

Ad Widget

Related posts

ಶಿವಮೊಗ್ಗ ಮಹಾನಗರ ಪಾಲಿಕೆಯಿಂದ 45 ದಿನಸಿ ಕಿಟ್‌

Malenadu Mirror Desk

ಈಡೂರು ಪರಶುರಾಮಪ್ಪನವರ ಜನ್ಮ ದಿನೋತ್ಸವ ಸ್ಮರಣೆ

Malenadu Mirror Desk

ಶಾಂತಿ, ಸೌಹಾರ್ದತೆ ಮೂಡಿಸುವಲ್ಲಿ ಧರ್‍ಮಪೀಠಗಳ ಜವಾಬ್ದಾರಿ ಹೆಚ್ಚು : ಶಾಂತಿಗಾಗಿ ನಾವು ಸಭೆಯಲ್ಲಿ ವಿವಿಧ ಮಠಾಧೀಶರ, ಮೌಲ್ವಿ, ಫಾದರ್ ಅಭಿಮತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.