ಶಿವಮೊಗ್ಗ :ಈಡಿಗ ಸಮಾಜದ ವಿವಿಧ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಆರ್ಯ ಈಡಿಗ ಸಂಘದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಯ ಈಡಿಗರ ಸಂಘದ ಅಮೃತಮಹೋತ್ಸವ ಕಾರ್ಯಕ್ರಮ ಪಕ್ಷಾತೀತವಾದ ಕಾರ್ಯಕ್ರಮವಾಗಿದೆ. ಎಲ್ಲಾ ಪಕ್ಷದಲ್ಲಿರುವ ನಾಯಕರು ಭಾಗವಹಿಸಬೇಕು.ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗುತ್ತದೆ ಎಂದರು.
ಪ್ರಮುಖವಾಗಿ ಈಡಿಗ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸಿ ಅಭಿವೃದ್ದಿಗೆ ೫೦೦ ಕೋಟಿ ರೂ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡುವುದು ಹಾಗೂ ಸಮಾಜದ ಪ್ರಮುಖ ದೇವಾಲಯವಾದ ಸಿಗಂದೂರು ದೇವಾಲಯದ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪವನ್ನು ತಡೆಯುವಂತೆ ಚರ್ಚೆ ನಡೆಸಲಾಗುವುದು ಎಂದರು.
ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪ ಮಾತನಾಡಿ,ಇದು ಕಾಂಗ್ರೆಸ್ ಪಕ್ಷದ ಸಮಾವೇಶ ಎಂದು ವಿರೋಧ ಪಕ್ಷದಲ್ಲಿ ಗುರುತಿಸಿಕೊಂಡವರು ಅಪಪ್ರಚಾರ ನಡೆಸುತ್ತಿದ್ದಾರೆ.ಆದರೆ ಇದು ಪಕ್ಷಾತೀತವಾದ ಈಡಿಗ ಸಮಾಜದ ಸಮಾವೇಶ. ಸಮಾಜದ ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.
ರಾಜ್ಯದ ಪ್ರಭಾವಿ ಹಾಗೂ ಕೆಲ ಹಿಂದುಳಿದ ಸಮಾಜದವರಿಗೆ ನಿಗಮ ಮಂಡಳಿ ನೀಡಲಾಗಿದೆ.ಆದರೆ ಈಡಿಗ ಸಮಾಜವನ್ನು ಕಡೆಗಣಿಸಲಾಗಿದೆ.ಸಮಾಜ ಉಳಿಯಬೇಕಾದರೆ ಸಂಘಟನೆಯಾಗಬೇಕು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಬೇಕು.ಸಮಾಜಕ್ಕಾಗಿ ಪ್ರತಿಯೊಬ್ಬರು ತ್ಯಾಗ ಮಾಡಬೇಕು.ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮಾಡಿದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂತು.ಅದೇ ರೀತಿ ಈಡಿಗ ಸಮಾಜ ಒಗ್ಗಟ್ಟು ಪ್ರದರ್ಶಿಸಿದರೆ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಬೆಂಗಳೂರಿನ ಅರಮನೆಯಲ್ಲಿ ಅಮೃತ ಮಹೋತ್ಸವದ ಹೆಸರಿನಲ್ಲಿ ನಡೆಯುತ್ತಿರುವ ಜಾಗೃತಿ ಸಮಾವೇಶ ಸಮಾಜದ ಶಕ್ತಿ ಪ್ರದರ್ಶಿಸುವ ವೇದಿಕೆಯಾಬೇಕು ಎಂದರು. ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿರುವುದು ಸಂತೋಷ. ಜಾತಿಗಣತಿ ಜಾರಿಗೆ ಒಕ್ಕಲಿಗ ಸಮಾಜ ವಿರೋಧ ವ್ಯಕ್ತಪಡಿಸಿದೆ.ಈಡಿಗ ಸಮಾಜದ ಅಭಿವೃದ್ಧಿಗೆ ಬಂಗಾರಪ್ಪ ಅವರ ಕೊಡುಗೆ ಅನನ್ಯ.ಸಮಾಜದ ಏಳಿಗಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು.ಸಮಾಜಕ್ಕಾಗಿ ಸೇವೆ ಸಲ್ಲಿಸುವ ಮನೋಭಾವ ಇರಬೇಕು. ಸಮಾಜವನ್ನು ಸಂಘಟಿಸಬೇಕು ಎಂದರು.
ಆರ್ಯ ಈಡಿಗ ಸಂಘದ ರಾಜ್ಯಾಧ್ಯಕ್ಷರಾದ ತಿಮ್ಮೇಗೌಡ ಮಾತನಾಡಿ,ಸಮಾಜಕ್ಕೆ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂಬುದನ್ನು ಯೋಚಿಸಬೇಕಾಗಿದೆ.ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಚಿಂತನೆ ನಡೆಸಬೇಕು. ಸಮಾಜ ಬೆಳೆದು ಬಂದ ಹಾದಿ ಗಮನಿಸಬೇಕು.ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ಸರ್ಕಾರದ ಮುಂದೆ ಸಮಾಜದ ಹಲವು ಬೇಡಿಕೆಗಳನ್ನು ಇಟ್ಟು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಜಿಲ್ಲೆಯಲ್ಲಿ ಸಂಘಟನೆ ಮತ್ತಷ್ಟು ಬಲಿಷ್ಟವಾಗಬೇಕಿದೆ.ಪ್ರತಿ ತಾಲೂಕಿನಿಂದ ಸಮಾಜದ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು.ಪ್ರತಿ ಹೋಬಳಿ ಮಟ್ಟದಲ್ಲಿ ಸಭೆ ಮಾಡಬೇಕು.ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.ಕಾಂತರಾಜ್ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಜಿ.ಡಿ ನಾರಾಯಣಪ್ಪ, ನಿಟ್ಟೂರಿನ ಶ್ರೀ ನಾರಾಯಣಗುರು ಮಹಾಂಸ್ಥಾನದ ರೇಣುಕಾನಂದ ಸ್ವಾಮೀಜಿ, ಸೊಲೂರು ಈಡಿಗ ಮಹಾ ಸಂಸ್ಥಾನದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಪ್ರಮುಖರಾದ ಬಂಡಿ ರಾಮಚಂದ್ರ, ಭೂಜಂಗಯ್ಯ, ವಾಸು,ಕಲ್ಲಪ್ಪ,ಗೀತಾಂಜಲಿ ದತ್ತಾತ್ರೇಯ, ಅಜ್ಜಪ್ಪ ಕಾಸರಗುಪ್ಪೆ, ಪ್ರವೀಣ್ ಹಿರೇಇಡಗೋಡು,ಪ್ರತಿಭಾ, ಎಸ್.ಸಿ.ರಾಮಚಂದ್ರಪ್ಪ ಸ್ವಾಗತಿಸಿದರು. ಜಿ.ಡಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ಸಮಾಜ ಸಂಘಟಿತವಾಗಬೇಕಿದೆ. ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ.ಡಿ.೧೦ರಂದು ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿದೆ.
ಮಧು ಬಂಗಾರಪ್ಪ, ಸಚಿವರು
ಹಿಂದಿನ ಸರ್ಕಾರ ಈಡಿಗ ಸಮಾಜಕ್ಕೆ ಮೂರು ನಾಮ ಹಾಕಿದೆ. ಸಿಗಂದೂರು ದೇವಸ್ಥಾನ ಸಮಾಜದ ದೇವಸ್ಥಾನ. ಮಧುಬಂಗಾರಪ್ಪ ನೇತೃತ್ವದಲ್ಲಿ ಹೋರಾಟ ನಡೆಸಿ ಈಡಿಗ ಅಭಿವೃದ್ಧಿ ನಿಗಮ ಪಡೆದುಕೊಂಡು ಅಭಿವೃದ್ಧಿ ಗೆ ಹಣ ಮೀಸಲಿಡುತ್ತೇವೆ.ನಮ್ಮ ಸಮಾಜಕ್ಕೆ ಸಂವಿಧಾನತ್ಮಾಕವಾಗಿ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಸರ್ಕಾರ ನೀಡಬೇಕು.ಸಮಾವೇಶದ ಮೂಲಕ ರಾಜ್ಯದ ಮುಖ್ಯಮಂತ್ರಿಯವರ ಕಣ್ಣು ತೆರೆಸುವ ಕೆಲಸ ಮಾಡೋಣ
ಬೇಳೂರು ಗೋಪಾಲಕೃಷ್ಣ ,ಶಾಸಕರು, ಸಾಗರ