ಶಿವಮೊಗ್ಗ: ಶಾಂತಿನಗರದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ದುರ್ಘಟನೆ ಇನ್ನೂ ಮುಂದೆ ಸಂಭವಿಸದಂತೆ ಸ್ಥಳೀಯ ಮುಖಂಡರು ಮುತುವರ್ಜಿ ವಹಿಸಬೇಕು. ಯಾರೋ ಮಾಡುವ ತಪ್ಪಿಗೆ ಎಲ್ಲರೂ ಜವಾಬ್ದಾರರಾಗುತ್ತಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಹೇಳಿದ್ದಾರೆ.
ಶಾಂತಿನಗರದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಹಾದಿತಪ್ಪುವ ಮಕ್ಕಳಿಗೆ/ಯುವಕರಿಗೆ ಪೋಷಕರು ಬುದ್ದಿ ಹೇಳ ಬೇಕು, ಇಲ್ಲದೇ ಹೋದಲ್ಲಿ ಮುಂದೆ ಪೊಲೀಸರು ಬುದ್ದಿ ಹೇಳುವಂತಹ ಹಂತಕ್ಕೆ ತಲುಪಿದಲ್ಲಿ ಅದರಿಂದ ಕಠಿಣ ಪರಿಣಾಮಗಳನ್ನು ಎದುರಿಬೇಕಾಗುತ್ತದೆ ಎಂದರು.
ಶಾಂತಿನಗರದಲ್ಲಿ ಅನೇಕ ಮೂಲಭೂತ ಸೌಲಭ್ಯಗಳ ಕೊರತೆ ಇರುವುದು ನಮ್ಮ ಗಮನಕ್ಕೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಆದರೆ ಕ್ಲುಲಕ ಕಾರಣಕ್ಕಾಗಿ ಸಮುದಾಯ ಗಳ ನಡುವೆ ಘರ್ಷಣೆ ಉಂಟಾದರೆ ಪೊಲೀಸರು ತಮ್ಮದೇ ಆದ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಅನೇಕ ಬಡ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಸೆಕ್ಷನ್ ಹಾಕಿದಾಗ ಶಾಲಾ-ಕಾಲೇಜು ಮಕ್ಕಳಿಗೆ, ವೃದ್ಧರಿಗೆ, ರೋಗಿಗಳಿಗೆ ಎಲ್ಲರಿಗೂ ಕೂಡ ಸಮಸ್ಯೆಯಾಗುತ್ತದೆ. ಪೊಲೀಸರು ಕೂಡ ಮನುಷ್ಯರೇ ತಮ್ಮ ಮನೆ ಮಠ ಬಿಟ್ಟು ಶಾಂತಿ ಸ್ಥಾಪನೆಗಾಗಿ ವಾರಗಟ್ಟಲೆ ಇಲ್ಲೆ ಕಾಯಬೇಕಾಗುತ್ತದೆ. ಘರ್ಷಣೆಯ ಪರಿಣಾಮ ಎಲ್ಲರಿಗೂ ಅರಿವಾಗಿದೆ. ಅನೇಕ ಸ್ಥಳೀಯ ಹಿರಿಯ ನಿವಾಸಿಗಳು ಇನ್ನೂ ಮುಂದೆ ಈ ರೀತಿ ಹಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.
ದೇವಸ್ಥಾನ ಸಮಿತಿ, ಮಸೀದಿ ಸಮಿತಿಯ ಹಿರಿಯರು ಮತ್ತು ನಾಗರಿಕರು ಸೇರಿ ಶಾಂತಿ ಪಡೆಯನ್ನು ಕಟ್ಟಿದ್ದಾರೆ. ಇಡೀ ರಾಗಿಗುಡ್ಡ ಮತ್ತು ಶಾಂತಿನಗರದಲ್ಲಿ ನಾವೆಲ್ಲರೂ ಸೇರಿ ಸ್ವಚ್ಛತ ಅಭಿಯಾನ ಮಾಡೋಣ. ಪ್ರತಿ ತಿಂಗಳಿಗೊಮ್ಮೆ ಸಭೆ ಸೇರಿ ಜಾತಿ, ಮತ ಭೇದ ಮರೆತು ಒಂದಾಗಿ ಅವಲೋಕನ ಮಾಡೋಣ. ಯುವ ಶಕ್ತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡೋಣ ಎಂದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾತನಾಡಿ ಈ ಪ್ರದೇಶದಲ್ಲಿ ಅನೇಕ ದೂರುಗಳಿವೆ. ಒಳಚರಂಡಿ, ಕುಡಿಯುವ ನೀರು, ಹಕ್ಕುಪತ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಬಸ್, ಬೀದಿ ದೀಪ ವ್ಯವಸ್ಥೆ, ಬೇಕೆಂಬುವುದು ಅನೇಕ ವರ್ಷದ ಬೇಡಿಕೆ, ಎಲ್ಲವನ್ನೂ ಕೂಡ ಬಗೆಹರಿಸಲಾಗುವುದು. ಈಗಾಗಲೇ ಡಿ.ಎಚ್.ಓ. ಜೊತೆ ಮಾತನಾಡಿದ್ದೇನೆ. ನಮ್ಮ ಕ್ಲಿನಿಕ್‌ನ್ನು ತೆರೆಯಲಾಗುವುದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರು, ಒಳಚರಂಡಿ, ಬೀದಿ ದೀಪ, ಶಾಲೆ, ಬಸ್ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾ ಗುವುದು ಎಂದರು.
ಗಣಪತಿ ಹಬ್ಬಕ್ಕೂ ಮುನ್ನ ಮೂರು ತಿಂಗಳ ಹಿಂದಿನಿಂದಲೂ ಹಲವಾರು ಸಭೆಗಳನ್ನು ಮಾಡಿ, ನಾವು ಸಾರ್ವಜನಿಕರಿಗೆ ತಿಳಿ ಹೇಳಿದ್ದೇವು, ಕೆಲವರು ಪ್ರತಿಷ್ಠೆ ಗಾಗಿ ಅನಾವಶ್ಯಕವಾಗಿ, ಅಹಿತಕರ ವಾತವರಣ ಸೃಷ್ಟಿ ಮಾಡುತ್ತಾರೆ. ಎಲ್ಲವನ್ನು ಮರೆತು ಇನ್ನು ಮುಂದೆ ಈ ರೀತಿಯ ಆಗಾದಾಗೆ ಕ್ರಮ ವಹಿಸೋಣ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರು ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ಬೆಳಕು ಚೆಲ್ಲಿದರು. ವಕೀಲರಾದ ರಾಘವೇಂದ್ರ, ಮೇರಿ ಅಮ್ಮ, ಕುಮಾರ್, ಭಾಷಾ ಸಾಹೇಬ್, ಮಸೀದಿ ಕಮಿಟಿಯ ಮುನ್ನಾ ಸಾಹೇಬ್ ಮೊದಲಾದವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶಾಂತಿನಗರದ ಮಾಜಿ ಕಾರ್ಪರೇಟರ್ ಧೀರರಾಜ್ ಹೊನ್ನವಿಲೆ, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿ.ವೈ.ಎಸ್.ಪಿ. ಸುರೇಶ್, ಕಂದಾಯಾಧಿಕಾರಿ ನಾಗೇಂದ್ರ, ಪಿ.ಎಸ್.ಐ. ಸತ್ಯನಾರಾಯಣ್, ಸೈಮನ್ ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ನಾಗರೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.