ಶಿವಮೊಗ್ಗ : :ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರ ಆರೋಪಕ್ಕೆ ನಮ್ಮ ಕೆಲಸಗಳ ಮೂಲಕವೇ ಉತ್ತರಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು
ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಯುವನಿಧಿ ಜಾರಿ ಕಾರ್ಯಕ್ರಮದ ಪರಿಶೀಲನೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಮೂಲಕ ಪ್ರತಿ ಗ್ರಾಮ ಪಂಚಾಯಿತಿಗೆ ಪ್ರತಿ ತಿಂಗಳು ಕನಿಷ್ಠ 75 ಲಕ್ಷ ತಲುಪುತ್ತಿದೆ. ಆದರೂ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಉತ್ತರಿಸಲು ಹೋಗುವುದಿಲ್ಲ. ನಮ್ಮ ಕಾರ್ಯಕ್ರಮದ ಮೂಲಕ ಉತ್ತರಿಸುತ್ತೇವೆ ಎಂದರು.
ನಮ್ಮ 4 ಗ್ಯಾರಂಟಿ ಯೋಜನೆಯ ಲಾಭ ಈಗಾಗಲೇ ಜನರಿಗೆ ತಲುಪಿದೆ. ಇದೀಗ 5 ನೇ ಗ್ಯಾರಂಟಿಯಾದ ಯುವ ನಿಧಿ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ ಎಂದ ಅವರು, ಜನವರಿ ೧೨ ರಂದು ಸರ್ಕಾರದ ೫ನೇ ಗ್ಯಾರಂಟಿಯಾದ ಯುವನಿಧಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಸಚಿವರುಗಳು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಸುಮಾರು 5 ಲಕ್ಷ ಜನರಿಗೆ ನೇರವಾಗಿ ಯುವನಿಧಿ ವರ್ಗಾವಣೆ ಆಗಲಿದೆ. ಹಾಗೆಯೇ ನೆರೆಯ ಜಿಲ್ಲೆಗಳಿಂದ ಫಲಾನುಭವಿಗಳು ಆಗಮಿಸಲಿದ್ದಾರೆ ಎಂದ ಅವರು, ಪಕ್ಷ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ-ಡಿಸಿಎಂ ಶಿವಕುಮಾರ್ ಅವರು ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಎಂದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರು ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಭಾವನಾತ್ಮಕ ವಿಚಾರಗಳಿಗೆ ಜನ ಮರಳಾಗಲ್ಲ. ಬಿಜೆಪಿಯವರ ಒಂದೇ ಒಂದು ಯೋಜನೆಯಿಂದ ಜನರಿಗೆ ಪ್ರಯೋಜನವಾಗಿಲ್ಲ.ಉಜ್ವಲಾ ಯೋಜನೆಯಡಿ ನೀಡಿದ್ದ ಗ್ಯಾಸ್ ಸೌಲಭ್ಯ ಸಿಗುತ್ತಿಲ್ಲ,ಆದರೆ ನಮ್ಮ ಗ್ಯಾರಂಟಿ ಯೋಜನೆಯ ಲಾಭ ಎಲ್ಲರಿಗೂ ಸಿಗುತ್ತಿದೆ ಎಂದರು.
ಗಣರಾಜ್ಯೋತ್ಸವದಲ್ಲಿ ಟ್ಯಾಬ್ಲೊಗೆ ಅಷ್ಟೇ ಅಲ್ಲ ಪ್ರತಿಯೊಂದು ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ತೆರಿಗೆ ಹಂಚಿಕೆಯಲ್ಲೂ ಅನ್ಯಾಯವಾಗುತ್ತಿದೆ. ರಾಜ್ಯದ 25 ಜನ ಬಿಜೆಪಿ ಸಂಸದರು ಮೌನವಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಹೀಗೆ ಮಾಡುತ್ತಿದೆ. ರಾಜ್ಯದ ಜನಕ್ಕೆ ಕೇಂದ್ರ ತಾರತಮ್ಯ ಅರ್ಥವಾಗಿದೆ. ಬಿಜೆಪಿಗೆ ನಮ್ಮ ಜನಪ್ರಿಯತೆ ಸಹಿಸಿಕೊಳ್ಳಲಾಗುತ್ತಿಲ್ಲ. ಬಡವರಿಗಾಗಿ ರೂಪಿಸಿದ ಕಾರ್ಯಕ್ರಮದಿಂದ ಅವರಿಗೆ ಭಯ ಕಾಡುತ್ತಿದೆ. ಏಕೆಂದರೆ ಅವರು ನೇರವಾಗಿ ಅಧಿಕಾರಕ್ಕೆ ಬರಲಿಲ್ಲ. ಮೋಸ ಮಾಡಿ ಅಧಿಕಾರಕ್ಕೆ ಬಂದರು ಹಾಗಾಗಿ ಅವರಿಗೆ ಜನ ಈ ಬಾರಿ ಅಧಿಕಾರದಿಂದ ದೂರವಿಟ್ಟಿದ್ದಾರೆ ಎಂದರು.
ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆ ಜಾರಿಯಾಗುತ್ತಿದೆ. ಈ ಯೋಜನೆಗೆ ವಾರ್ಷಿಕ ಸುಮಾರು ೨೫೦ ಕೋಟಿ ಅನುದಾನ ಅಗತ್ಯವಿದೆ.ಈ ಬಗ್ಗೆ ಸಿಎಂ ಬಳಿ ಅನುದಾನ ಕೋರಲಾಗಿದೆ ಎಂದರು.
ಕೇಂದ್ರ ಸರ್ಕಾರ ಯಾವುದೇ ಗ್ಯಾರಂಟಿ ಜಾರಿಗೊಳಿಸಿಲ್ಲ.ವಾರ್ಷಿಕ ೨ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಹುಸಿಯಾಗಿದೆ. ಅದಕ್ಕಾಗಿ ನಮ್ಮ ಪಕ್ಷ ಈ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ.ನಾವು ನುಡಿದಂತೆ ನಡೆದಿದ್ದೇವೆ.ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ನುಡಿದಂತೆ ನಡೆದಿದ್ದೇವೆ. ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಯನ್ನು ಈಡೇರಿಸಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಎನ್.ರಮೇಶ್,ಹೆಚ್,ಸಿ ಯೋಗೇಶ್,ಜಿ.ಡಿ ಮಂಜುನಾಥ್, ದೇವೇಂದ್ರಪ್ಪ ಸೇರಿದಂತೆ ಹಲವರಿದ್ದರು.
ಪ್ರಸ್ತುತ 61,700 ಪದವಿ/ಡಿಪ್ಲೊಮಾ ಹೊಂದಿದ ಅಭ್ಯರ್ಥಿಗಳು ಈ ಯೋಜನೆಯಡಿ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2022-23 ರಲ್ಲಿ ಒಟ್ಟು 5.29 ಲಕ್ಷ ವಿದ್ಯಾರ್ಥಿಗಳು ಪದವಿ/ಡಿಪ್ಲೊಮಾ ಮುಗಿಸಿದ್ದಾರೆ. ವಿದ್ಯಾಭ್ಯಾಸ ಮುಗಿದು ಆರು ತಿಂಗಳಾದರೂ ಉದ್ಯೋಗ ಸಿಗದವರು ಫಲಾನುಭವಿಗಳಾಗಲು ಅರ್ಹರಿದ್ದಾರೆ. ನೋಂದಣಿ ಪ್ರಕ್ರಿಯೆ ಆನ್‍ಲೈನ್‍ನಲ್ಲಿ ಉಚಿತ ಮತ್ತು ಸರಳವಾಗಿದೆ
–ಡಾ. ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ