ಬೆಂಗಳೂರಿನ ಅದಮ್ಯ ಚೇತನ ಫೌಂಡೇಷನ್ನಿನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯ
ಶಿವಮೊಗ್ಗ : ಪಾಕ ಶಾಲೆಯೇ ಪಾಠ ಶಾಲೆ ಆಗಬೇಕು, ಆಗ ಮಾತ್ರ ತ್ಯಾಜ್ಯ ಕಡಿಮೆಯಾಗುತ್ತದೆ, ಅಲ್ಲದೇ ಪರಿಸರ ಸ್ವಚ್ಛವಾಗಿರಲು ಸಾಧ್ಯ ಎಂದು ಬೆಂಗಳೂರಿನ ಅದಮ್ಯ ಚೇತನ ಫೌಂಡೇಷನ್ನಿನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಬೆಳಗ್ಗೆ ಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ನಡೆದ ಶ್ರಮದಿಂದ ಸಾರ್ಥಕತೆಯಡೆಗೆ ವಿಚಾರಗೋಷ್ಠಿಯಲ್ಲಿ ಪರಿಸರ ಪ್ರಜ್ಞೆಯೇ ಸಮಾಜ ಸೇವೆ ಕುರಿತು ಅವರು ಮಾತನಾಡಿದರು. ಪರಿಸರ ಪ್ರಜ್ಞೆ ಎಂಬುದು ಅಡುಗೆ ಮನೆಯಿಂದಲೇ ಆರಂಭವಾಗುವ ಜೊತೆಗೆ ಜಾಗೃತವಾಗಿದ್ದರೆ ಅದುವೇ ನಿಜವಾದ ಸಮಾಜ ಸೇವೆ ಎಂದರು.
ಎಲ್ಲ ಕಾರ್ಖಾನೆಗಳಲ್ಲೂ ಒಳ್ಳೆಯ ನೀರೇ ಹೆಚ್ಚು ಬಳಕೆಯಾಗುತ್ತಿದ್ದು, ಬಳ್ಳಾರಿಯಲ್ಲಿ ಮಾತ್ರ ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಬಳಕೆ ಮಾಡಲಾಗುತ್ತಿದೆ, ಮತ್ತೆ ಎಲ್ಲೂ ಇಂತ ವ್ಯವಸ್ಥೆ ಇಲ್ಲ. ಅಲ್ಲದೇ ಕೈಗಾರಿಕೆಗಳಿಂದ ಗಾಳಿ, ನೀರು ಕಲುಷಿತವಾಗುತ್ತಿದೆ, ನೀರು ವ್ಯಯವಾಗುತ್ತಿದೆ, ನೀರಿನ ಸದ್ಬಳಕೆ ಮಾಡುವಲ್ಲಿ ನಾವು ಮುಂದಗಬೇಕು ಎಂದರು.
ಪ್ಲಾಸ್ಟಿಕ್ ಬಳಸುವವರೆಗೂ ತ್ಯಾಜ್ಯ ನಿಲ್ಲದು, ಇಂತಹ ತಪ್ಪನ್ನು ಮಾಡಬಾರದು, ಎಲ್‌ಪಿಜಿ ಇಂಧನದ ಬಳಕೆ ಹೇಗೆ ಕಡಿಮೆ ಮಾಡಬೇಕು ಎಂಬ ಬಗ್ಗೆ ಯೋಚಿಸಬೇಕು, ಇಂಧನವೆಂದರೆ ಸಿಲಿಂಡರ್ ಮಾತ್ರ ಅಲ್ಲ, ಮರು ಉತ್ಪಾದನೆ ಇಂಧನಗಳ ಬಗ್ಗೆ, ಸೌರ ಶಕ್ತಿ ಬಳಕೆಯ ಬಗ್ಗೆ ಯುವ ಪೀಳಿಗೆಗೆ ಹೇಳುವ ಮೂಲಕ ಪರಿಸರ ಪ್ರಜ್ಞೆ ಮೂಡಿಸಬೇಕು. ಕಸದದಿಂದ ಇಂಧನ ತಯಾರಿಸುವ ಕುರಿತು ಹಾಗೂ ನೀರು, ಬಳಕೆ, ವಿದ್ಯುತ್ ಬಳಕೆ ಬಗ್ಗೆ, ಹಸಿರು ಹೊದಿಕೆ ಬೆಳೆಸುವುದು, ವಾಯು ಮಾಲಿನ್ಯದ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಬೇಕು ಎಂದರು.
ಶ್ರೀ ಬಸವ ನಾಮಾಂಕಿತದ ಪ್ಲೇಟ್ ಬ್ಯಾಂಕ್ ಲೋಕಾರ್ಪಣೆ
ಶಿವಮೊಗ್ಗ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಬೆಳಗ್ಗೆ ಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ರುದ್ರೇಗೌಡರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಬಸವ ನಾಮಾಂಕಿತದ ಪ್ಲೇಟ್ ಬ್ಯಾಂಕ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಎಸ್. ರುದ್ರೇಗೌಡ್ರು ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಡಿ.ಜಿ.ಬೆನಕಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು , ಓಪನ್ ಮೈಂಡ್‌ರಸ ವರ್ಲ್ದ್ ಸ್ಕೂಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಕಿರಣ್ ಕುಮಾರ್ ಕೆ. , ಬಸವೇಶ್ವರ ವೀರಶೈವ ಸಮಾಜದ ಪದಾಧಿಕಾರಿಗಳಾದ ಎನ್.ರಾಜಶೇಖರ್, ರುದ್ರೇಶ್, ಬಳ್ಳೆಕೆರೆ ಸಂತೋಷ್, ಮೋಹನ್ ಬಾಳೆಕಾಯಿ,ಅನಿತಾ ರವಿಶಂಕರ್, ರೇಣುಕಾರಾಧ್ಯರು ಹಾಜರಿದ್ದರು, ಈ ಸಂದರ್ಭ ಅಭಿನಂದನಾ ಸಮಿತಿ ವತಿಯಿಂದ ಶ್ರೀ ಬಸವೇಶ್ವರ ವೀರಶೈವ ಸಮಾಜದ ಹಸ್ತಾಂತರಿಸಲಾಯಿತು.