ಶಿವಮೊಗ್ಗ: ಬಿಜೆಪಿಯ ಜಿಲ್ಲಾ ಸಮಿತಿಯನ್ನು ಪುನರ್ರಚನೆ ಮಾಡಿದ್ದು, ನೂತನ ಪಟ್ಟಿಯಲ್ಲಿ ಜಿಲ್ಲೆಯ ಪ್ರಬಲ ಸಮುದಾಯವಾದ ಈಡಿಗರಿಗೆ ಪ್ರಾತಿನಿಧ್ಯವನ್ನೇ ಕೊಡದಿರುವುದು ತೀವ್ರ ಚರ್ಚೆಗೊಳಗಾಗಿದೆ. ಭಾನುವಾರ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರು ನೂತನ ಪದಾಧಿಕಾರಿಗಳು ಹಾಗೂ ಮಂಡಲ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಪಕ್ಷ ಸಜ್ಜಾಗಿದ್ದು, ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಎಲ್ಲರಿಗೂ ಸೂಕ್ತ ಜವಾಬ್ದಾರಿ ನೀಡಲಾಗಿದೆ ಎಂದು ಅವರು ಪಟ್ಟಿ ಬಿಡುಗಡೆ ಸಂದರ್ಭ ಹೇಳಿಕೆ ನೀಡಿದ್ದಾರೆ.
ಅಧ್ಯಕ್ಷರು ಬಿಡುಗಡೆ ಮಾಡಿದ್ದ ಜಿಲ್ಲಾ ಸಮಿತಿಯ ಪಟ್ಟಿಯಲ್ಲಿ ಮುಸ್ಲಿಂ ಮತ್ತು ಈಡಿಗ ಸಮುದಾಯ ಹೊರತುಪಡಿಸಿ ಉಳಿದ ಬಹುತೇಕ ಪ್ರಮುಖ ಜಾತಿಗಳಿಗೆ ಆದ್ಯತೆ ನೀಡಲಾಗಿದೆ. ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿಯಲ್ಲಿರುವ ಈಡಿಗ ಸಮುದಾಯದ ಪ್ರಮುಖ ಮುಖಂಡರು ದೊಡ್ಡ ಸಮುದಾಯವನ್ನು ಪಕ್ಷದ ಮುಂಚೂಣಿ ಘಟಕದಿಂದ ದೂರ ಇಟ್ಟಿರುವುದರ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕೆಲವರು ಈ ಬಗ್ಗೆ ತಮ್ಮ ನಾಯಕರಿಗೆ ದೂರು ಕೂಡಾ ನೀಡಿದ್ದಾರೆನ್ನಲಾಗಿದೆ.
ಚುನಾವಣೆಯಲ್ಲಿ ಬೆಂಬಲ:
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕಾಲದಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದ್ದ ಈಡಿಗ ಸಮುದಾಯ, ಕಳೆದ ಎರಡು ದಶಕಗಳಿಂದ ಈಚೆಗೆ ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸೊರಬ.ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿರುವ ಈಡಿಗ ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತಾಬಂದಿದೆ. ಶಿಕಾರಿಪುರ ಕ್ಷೇತ್ರದ ಈಡಿಗರಲ್ಲಿ ಬಹುತೇಕರು ಬಿಜೆಪಿ ಬೆಂಬಲಿಗರಾಗಿದ್ದಾರೆ. ಹೀಗಿದ್ದೂ ಈ ಸಮುದಾಯದ ಒಬ್ಬರಿಗೂ ಜಿಲ್ಲಾ ಸಮಿತಿಯಲ್ಲಿ ಸ್ಥಾನ ಕಲ್ಪಿಸಿಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿಗೆ ಬಂಗಾರಪ್ಪ ಬಲ:
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಿಜೆಪಿ ಸೇರಿದ್ದ ಸಂದರ್ಭದಲ್ಲಿ ಅವರೊಂದಿಗೆ ಪಕ್ಷಕ್ಕೆ ಬಂದಿದ್ದ ಸಮುದಾಯದ ಒಂದು ಪಂಗಡ ಬಿಜೆಪಿಯಲ್ಲಿಯೇ ಉಳಿದಿತ್ತು. ತದನಂತರ ಸಾಗರದಲ್ಲಿ ಮೂರು ಬಾರಿ ಮತ್ತು ಸೊರಬದಲ್ಲಿ ಎರಡು ಬಾರಿ ಬಿಜೆಪಿಯಿಂದ ಈಡಿಗ ಸಮುದಾಯ ಪ್ರತಿನಿಧಿಸುವವರೇ ಶಾಸಕರಾಗಿದ್ದರು. ಕಳೆದ ಚುನಾವಣೆಯಲ್ಲಿ ಸಾಗರ ಮತ್ತು ಸೊರಬದಲ್ಲಿ ಈಡಿಗ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಗೆಲುವಿಗೆ ಈಡಿಗ ಸಮುದಾಯ ಪ್ರಮುಖ ಪಾತ್ರ ವಹಿಸಿತ್ತು.
ಸಮುದಾದ ಮುಖಂಡರಿಗೆ ಅನ್ಯಾಯ:
ಪ್ರಸ್ತುತ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ರಾಜ್ಯ ಬಿಜೆಪಿಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಪಕ್ಷಕ್ಕಾಗಿ ದುಡಿಯುವ ಕೆಳಹಂತದ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಆ ಪಕ್ಷದ ಮುಖಂಡರು ಅಳಲು ತೋಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ಹಿರಿಯ ಮುಖಂಡ ಅಶೋಕ್ ಮೂರ್ತಿ, ಬೆಳ್ಳೂರು ತಿಮ್ಮಪ್ಪ, ಬೇಗುವಳ್ಳಿ ಸತೀಶ್, ನಿರಂಜನ್ ಕುಪ್ಪಗಡ್ಡೆ, ಸುರೇಶ್ ಸ್ವಾಮಿರಾವ್, ಡಾ.ಜ್ಞಾನೇಶ್ ಸೊರಬ, ಡಾ.ರಾಜನಂದಿನಿ ಕಾಗೋಡು, ರಾಜಶೇಖರ್ ಗಾಳಿಪುರ ಹುನಗೋಡು ರತ್ನಾಕರ್ ಅವರಂತಹ ಪ್ರಮುಖ ಮುಖಂಡರಿದ್ದಾರೆ. ಯುವಮುಖಂಡರಾದ ಪ್ರಶಾಂತ್ ಕೆ.ಎಸ್. ಕವಿರಾಜ್ ಬೇಗುವಳ್ಳಿ, ಬಂಡಿದಿನೇಶ್ ನಗರ ನಿತಿನ್ ಸೇರಿದಂತೆ ಹಲವು ಮುಖಂಡರು ಬಿಜೆಪಿಯ ಬೆನ್ನಿಗಿದ್ದು, ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕೆಲವರು ಸಂಘಪರಿವಾರದ ಹಿನ್ನೆಲೆಯನ್ನೂ ಹೊಂದಿದ್ದಾರೆ. ಆದರೆ ಪಕ್ಷದ ನಾಯಕರು ಜಿಲ್ಲೆಯಲ್ಲಿ ಅತಿದೊಡ್ಡ ಸಮುದಾಯವಾದ ಈಡಿಗರನ್ನು ಹೊರಗಿಟ್ಟು ಜಿಲ್ಲಾ ಸಮಿತಿಯನ್ನು ರಚನೆ ಮಾಡಿದ್ದಾರೆ. ಇದು ಪಕ್ಷಕ್ಕಾಗಿ ದುಡಿದ ಈಡಿಗ ಸಮುದಾಯದ ಮುಖಂಡಿಗೆ ಮಾಡಿದ ಅನ್ಯಾಯ ಎಂಬ ಚರ್ಚೆ ಆರಂಭವಾಗಿದೆ.