Malenadu Mitra
ರಾಜ್ಯ ಶಿವಮೊಗ್ಗ

ನಕ್ಸಲ್‌ ನಾಯಕ ಬಿ ಜಿ ಕೃಷ್ಣಮೂರ್ತಿ ನಾಳೆ ಶಿವಮೊಗ್ಗ ಕೋರ್ಟ್‌ಗೆ , ಬಿಗಿ ಭದ್ರತೆಯಲ್ಲಿ ಕೇರಳದಿಂದ ಕರೆತರುತ್ತಿರುವ ಪೊಲೀಸರು

ನಕ್ಸಲ್‌ ಸಂಘಟನೆಯ ಪ್ರಮುಖ ನಾಯಕ ಬಿ.ಜಿ.ಕೃಷ್ಣಮೂರ್ತಿಯನ್ನು ಸ್ಥಳೀಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಪ್ರಸ್ತುತ ಕೇರಳ ರಾಜ್ಯದ ತ್ರಿಶೂರ್‌ ಜಿಲ್ಲೆಯ ವಿಯೂರು ಜೈಲಿನಲ್ಲಿರುವ ಕೃಷ್ಣಮೂರ್ತಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕರೆತರಲಾಗುತ್ತಿದೆ.

ಬಾಡಿ ವಾರಂಟ್‌ ಮೇಲೆ ಅವರನ್ನು  ಕರೆತರುತ್ತಿರುವ ಪೊಲೀಸರು ಬುಧವಾರ ಬೆಳಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಬಿಗಿಪೊಲೀಸ್‌ ಬಂದೋಬಸ್ತ್‌ನಲ್ಲಿ ಕೇರಳದಿಂದ ಹೊರಟಿರುವ ತಂಡ, ರಾತ್ರಿ ಶಿವಮೊಗ್ಗ ತಲುಪುವ ಸಾಧ್ಯತೆಯಿದೆ. ಪ್ರಗತಿಪರರ ವಲಯದಲ್ಲಿ ಬಿಜಿಕೆ ಎಂದೇ ಗುರುತಿಸಿಕೊಂಡಿದ್ದ ಕೃಷ್ಣಮೂರ್ತಿ, ಒಳ್ಳೆಯ ಬರಹಗಾರ ಮತ್ತು ಕವಿ ಕೂಡಾ ಹೌದು. ಅವರ ಮೇಲೆ  ತೀರ್ಥಹಳ್ಳಿ ಪೊಲೀಸ್‌ ಠಾಣೆಯ 2 ಹಾಗೂ ಆಗುಂಬೆ ಠಾಣೆ ವ್ಯಾಪ್ತಿಯ ಮೂರು ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ನಕ್ಸಲ್‌ ಸಂಘಟನೆ ಸಕ್ರಿಯವಾಗಿದ್ದ ಅವಧಿಯಲ್ಲಿ ಸಾಕೇತ್‌ ರಾಜನ್‌ ಹತ್ಯೆಯ ಬಳಿಕ ನಾಯಕತ್ವ ವಹಿಸಿಕೊಂಡಿದ್ದ ಕೃಷ್ಣಮೂರ್ತಿ ಬಳಿಕ ತಮ್ಮ ಕಾರ್ಯಾಚರಣೆಯನ್ನು ಕೇರಳ ಮತ್ತು ಆಂಧ್ರಕ್ಕೆ ಸ್ಥಳಾಂತರಿಸಿದ್ದರು. 2021 ರಲ್ಲಿ ಕೇರಳ ಪೊಲೀಸರಿಂದ ಬಂಧಿತರಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ನೆಮ್ಮಾರಿನ ಬಿಜಿಕೆ:

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದ ಬುಕ್ಕಡಿಬೈಲ್‌ ನಿವಾಸಿಯಾಗಿರುವ ಬಿ.ಜಿ.ಕೃಷ್ಣಮೂರ್ತಿಗೆ ಆರು ಮಂದಿ ಸೋದರಿಯರಿದ್ದಾರೆ. ಶೃಂಗೇರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಶಿವಮೊಗ್ಗದ ನ್ಯಾಷನಲ್‌ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಎಲ್‌ ಎಲ್‌ ಬಿ ಮತ್ತು ಎಲ್‌ ಎಲ್‌ ಎಂ ಎರಡರಲ್ಲೂ ರ್ಯಾಂಕ್‌ಗಳಿಸಿದ್ದ ಅವರು,  ಕೆಲ ಸಮಯ ಪತ್ರಕರ್ತನಾಗಿ ಕೆಲಸ ನಿರ್ವಹಿಸಿದ್ದರು. ತುಂಗಾಮೂಲ ಉಳಿಸಿ ಸೇರಿದಂತೆ ಅನೇಕ ಪ್ರಗತಿಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಬಿಜಿಕೆ ಬಳಿಕ ಭೂಗತನಾಗಿ ಮಾವೋವಾದಿ ನಕ್ಸಲ್‌ ಸಂಘಟನೆ ಸೇರಿಕೊಂಡಿದ್ದರು.

ಮನವೊಲಿಕೆಯತ್ನ:

ಕಟ್ಟರ್‌ ಸಿದ್ಧಾಂತಿಯಾಗಿದ್ದ ಕೃಷ್ಣಮೂರ್ತಿ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಹಲವರು ಮಾಡಿದ್ದರು. ಅನಾರೋಗ್ಯದಿಂದ ಬಳಲುತಿದ್ದರೂ ಶರಣಾಗುವ ಮನಸ್ಸು ಮಾಡದ ಬಿಜಿಕೆ ಕೊನೆಗೆ ಕೇರಳದಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ್ದ. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರು ಬುಕ್ಕಡಿಬೈಲ್‌ಗೆ ತೆರಳಿ ಕುಟುಂಬಸ್ಥರೊಂದಿಗೆ ಮಾತುಕತೆ ಕೂಡಾ ಮಾಡಿದ್ದರು. ಆದರೆ ಆ ಪ್ರಯತ್ನ ಫಲಪ್ರದವಾಗಿರಲಿಲ್ಲ.

Ad Widget

Related posts

ವರುಣನ ಕೃಪೆಗಾಗಿ ಪರ್ಜನ್ಯ ಜಪ

Malenadu Mirror Desk

ನೈತಿಕ ಶಿಕ್ಷಣದಿಂದ ಅಪರಾಧ ಕಡಿಮೆ: ಐಪಿಎಸ್ ಅಧಿಕಾರಿ ಚಂದ್ರಶೇಖರ್, ಸಿಗಂದೂರಿಗೆ ಕಾರ್ತಿಕೇಯ ಕ್ಷೇತ್ರದ ಯೋಗೇಂದ್ರ ಶ್ರೀ ಭೇಟಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.