Malenadu Mitra
ರಾಜ್ಯ ಶಿವಮೊಗ್ಗ

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆ ಗೌಣ, ನನ್ನ ಮತ್ತು ಘುಪತಿ ಭಟ್‌ ನಡುವೆ ನೇರ ಹಣಾಹಣಿ : ಎಸ್‌.ಪಿ.ದಿನೇಶ್‌ ಹೇಳಿಕೆ

ಶಿವಮೊಗ್ಗ: ಸೋಲು ಗೆಲುವಿನ ಸೋಪಾನ ಎರಡು ಬಾರಿ ಸೋಲುಂಡ ನನಗೆ ಅದರ ಸಂಕಟ ಗೊತ್ತಿದೆ. ನನ್ನ ಪ್ರಾಮಾಣಿಕ ಸೇವೆಗೆ ಮನ್ನಣೆ ನೀಡುವ ಪದವೀಧರರು ಈ ಬಾರಿ ಗೆಲುವಿನ ಉಡುಗೊರೆ ಕೊಡಲಿದ್ದಾರೆ ಎಂಬ ಭರವಸೆ ಇದೆ. ಕಳೆದ ಮೂವತ್ತು ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ನಾನು ಮಾಡಿದ ಸೇವೆ ನಡೆದುಕೊಂಡು ರೀತಿ ಪದವೀಧರರಿಗೆ ಗೌರವ ತರುವಂತದಾಗಿದೆ ಎಂದು ನಾನಂದುಕೊಂಡಿದ್ದೇನೆ. ನೈರುತ್ಯ ಪದವೀಧರ ಕ್ಷೇತ್ರದ ಆರೂ ಜಿಲ್ಲೆಗಳಲ್ಲಿ ಮತದಾರರನ್ನು ಸಂಪರ್ಕಿಸಿದ್ದೇನೆ ಎಲ್ಲರ ಸ್ಪಂದನೆ ಸಕಾರಾತ್ಮಕವಾಗಿದೆ. ಅವಕಾಶವಾದಿಗಳಿಗಿಂತ ಕೆಲಸಗಾರನಿಗೆ ನಮ್ಮ ಬೆಂಬಲ ಎಂದು ಪದವೀಧರರು ಹೇಳುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್‌ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿರುವ ಮಾದರಿಗೆ ಬೇಸರ ಆಗಿದೆ. ಪೊಳ್ಳು ಭಾಷಣ ಮತ್ತು ಗುಂಡಿನ ಪಾರ್ಟಿ ನಡೆಸುವವರ ಬಗ್ಗೆ ಮತದಾರರು ಬೇಸರವಾಗಿದ್ದಾರೆ. ಮತಕ್ಕೆ ಹಣ ಹಂಚುವ ಮಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಹೋಗಿದ್ದಾರೆ. ಕಳೆದ ಅವಧಿಯಲ್ಲಿ ಅಧಿಕಾರ ಇದ್ದರೂ ಮತದಾರರನ್ನು ತಲುಪದವರು ಮತ್ತು ರಾಜಕೀಯವನ್ನು ಉದ್ಯಮ ಮಾಡುವ ಹಣವಂತರ ಆಟ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಈ ಬಾರಿ ಬಿಜೆಪಿಯ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ ಮತ್ತು ನನ್ನ ನಡುವೆ ನೇರ ಫೈಟ್‌ ಇದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪದವೀಧರರಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಮತದಾರರಿಗೆ ಆಮಿಷವೊಡ್ಡುವ ತಂತ್ರಗಾರಿಕೆ ಹೂಡಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಣ -ಸಹಕಾರಿ ಸೇವೆ
ವಿದ್ಯಾರ್ಥಿದೆಸೆಯಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕುವೆಂಪು ವಿಶ್ವವಿಶ್ವವಿದ್ಯಾಲಯದ ಸೆನೆಟ್‌ ಮತ್ತು ಸಿಂಡಿಕೇಟ್‌ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಕಳೆದ ಹಲವು ವರ್ಷಗಳಿಂದ ಪದವೀಧರರ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ್ದೇನೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕನಾಗಿ ರೈತರಿಗೆ ನ್ಯಾಯಕೊಡುವ ಕೆಲಸ ಮಾಡಿದ್ದೇನೆ. ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಡಿವಿಎಸ್‌ನಲ್ಲಿ ಕಳೆದ 11 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನನ್ನದೇ ಆದ ವಿಷನ್‌ಗಳನ್ನು ಹೊಂದಿದ್ದೇನೆ. ಕಳೆದ ಎರಡು ಅವಧಿಯಲ್ಲಿ ಪದವೀಧರ ಕ್ಷೇತ್ರದಲ್ಲಿ ಪರಾಜಿತಗೊಂಡರೂ ಈ ವರ್ಗದ ಮತದಾರರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇನೆ. ಅಸಂಘಟಿತ ನೌಕರ ವಲಯ, ಅತಿಥಿ ಉಪನ್ಯಾಸಕರು, ಸರಕಾರಿ ನೌಕರರ ಪಿಂಚಣಿ, ವಿಮೆ ಇತ್ಯಾದಿ ಸಮಸ್ಯೆಗಳ ಬಗ್ಗೆ ದ್ವನಿಯಾಗಿ ಕೆಲಸ ಮಾಡುತ್ತೇನೆ. ವಿಧಾನ ಪರಿಷತ್‌ನಲ್ಲಿ ಎಲ್ಲರ ಪರವಾಗಿ ಧ್ವನಿಯಾಗಿ ಕೆಲಸ ಮಾಡುತ್ತೇನೆ ದಯಮಾಡಿ ಸಹಕರಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್‌ಗೆ ಬಾಗಿಲು ತಟ್ಟಿದ್ದರು:
ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಬಯಸಿದ್ದರು. ಹೈಕಮಾಂಡ್‌ನಿಂದ ಟಿಕೆಟ್‌ ತರುವೆ ನಿಮ್ಮ ಬೆಂಬಲ ಬೇಕು ಎಂದು ಕೇಳಿದ್ದರು. ಈಗ ಹತ್ತು ವರ್ಷದಿಂದ ಆರ್.ಎಸ್.ಎಸ್‌ ಕಾರ್ಯಕರ್ತ ಎಂದು ಹೇಳುತ್ತಿದ್ದಾರೆ. ಆಯನೂರು ಮಂಜುನಾಥ್‌ ಅವರೂ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನಮಾಡಿ ನೀನೂ ಜತೆಗಿರಬೇಕೆಂದು ಹೇಳಿದ್ದರು. ಸಿಗದೇ ಇದ್ದರಿಂದ ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. ಯಡಿಯೂರಪ್ಪ ಅವರ ಗರಡಿಯಲ್ಲಿ ಬೆಳೆದು ಅವರ ವಿರುದ್ಧ ಆಯನೂರು ಮಂಜುನಾಥ ರಾಜಕೀಯ ಮಾಡುತ್ತಿದ್ದಾರೆ. ಡಾ.ಸರ್ಜಿ ಅವರೂ ಮುಂದೊಂದು ದಿನ ಯಡಿಯೂರಪ್ಪ ಕುಟುಂಬದ ವಿರುದ್ಧ ಸ್ಪರ್ಧೆ ಮಾಡಬಹುದು ಈ ಇಬ್ಬರ ಬಗ್ಗೆ ಯಡಿಯೂರಪ್ಪ ಅವರ ಅಭಿಮಾನಿಗಳು ಎಚ್ಚರದಿಂದ ಇರಬೇಕು ಎಂದು ದಿನೇಶ್‌ ಹೇಳಿದರು.
ಚುನಾವಣೆ ಸಂಸ್ಕೃತಿ ಹಾಳು:
ಬಿಜೆಪಿ ಅಭ್ಯರ್ಥಿ ಶಿವಮೊಗ್ಗ ಜಿಲ್ಲೆಯಲ್ಲಿ ಪದವೀಧರ ಮತ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದ್ದಾರೆ. ಹೊಟೆಲ್‌, ರೆಸಾರ್ಟ್‌ಗಳಲ್ಲಿ ಗುಂಡು ಪಾರ್ಟಿ ಮಾಡುತ್ತಿದ್ದಾರೆ. ಹಣ ಹೆಂಡವನ್ನು ಯಥೇಚ್ಛವಾಗಿ ಬಳಸುತ್ತಿದ್ದಾರೆ. ನಾನು ಹಣವಂತನಲ್ಲ, ಕೆಲಸಗಾರ  ನನ್ನ ಜೇಬು ಖಾಲಿ ಇದೆ. ಆದರೆ ಮತದಾರ ಮತ್ತು ಕ್ಷೇತ್ರದ ಘನತೆ ಎತ್ತಿ ಹಿಡಿಯುವೆ. ಆಮಿಷಗಳಿಗೆ ಬಲಿಯಾಗದೆ ಮೊದಲ ಪ್ರಾಶಸ್ತ್ಯದ ನೀಡಬೇಕು. ಕಾಂಗ್ರೆಸ್‌ ಅಭ್ಯರ್ಥಿಯೂ ಅವಕಾಶವಾದಿಯಾಗಿದ್ದಾರೆ. ನಿಜವಾದ ಕಾಂಗ್ರೆಸ್ಸಿಗ ನಾನು ಹಾಗಾಗಿ ಆರ್.ಎಸ್‌.ಎಸ್‌ ಮೂಲದ ಉಳಿದ ಅಭ್ಯರ್ಥಿಗಳನ್ನು ದೂರ ಇಟ್ಟು ಪದವೀಧರರು ನನ್ನನ್ನು ಬೆಂಬಲಿಸಬೇಕಾಗಿ ಮನವಿ ಮಾಡುತ್ತೇನೆ ಎಂದು ದಿನೇಶ್‌ ಹೇಳಿದರು.
ಬಂಗಾರಪ್ಪಾಜಿ-ರಾಹುಲ್‌ಜಿ ನಿಂದಕರು:
ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಅವರನ್ನು ಸೋಲಿಸಲೆಂದೇ ಕಾಂಗ್ರೆಸ್‌ ನಾಯಕರು ಜತೆಗಿಟ್ಟುಕೊಂಡಿದ್ದಾರೆ ಎಂಬ ಭಾವನೆ ನನಗಿದೆ. ಅವರು ಹಿಂದೆ ಗೌರವಾನ್ವಿತ ಬಂಗಾರಪ್ಪಾಜಿ ಮತ್ತವರ ಕುಟುಂಬದ ವಿರುದ್ಧ ಕೆಳಮಟ್ಟದ ಪದಗಳಲ್ಲಿ ನಿಂದನೆ ಮಾಡಿದ್ದರು. ನಮ್ಮ ನಾಯಕರಾದ ರಾಹುಲ್‌ ಗಾಂಧೀಜಿಯವರನ್ನು ಕೀಳಾಗಿ ಟೀಕಿಸಿದ್ದರು. ಈ ಕಾರಣದಿಂದ ಅವರನ್ನು ಜತೆಗಿಟ್ಟುಕೊಂಡೇ ಸೋಲಿಸುವ ತಂತ್ರಗಾರಿಕೆಯನ್ನು ಕಾಂಗ್ರೆಸ್‌ನ ನಾಯಕರು ಮಾಡಿರುವಂತಿದೆ ಎಂದು ದಿನೇಶ್‌ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಸುಧಾಕರರ್‌, ಡಾ.ವೆಂಕಟಾಚಲ,ಉಮೇಶ್‌ ಅಂಗಡಿ, ಸಚಿನ್ ಇದ್ದರು.

ಹೊನ್ನಾಳಿ ಹಾಗೂ ಚನ್ನಗಿರಿ ಭಾಗದಲ್ಲಿ ಬಿಜೆಪಿಯ ಕೆಲ ನಾಯಕರು ದಿನೇಶ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ. ಇದು ಆ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ. ಬಿಜೆಪಿಯವರ ಈ ಕುತಂತ್ರಕ್ಕೆ ಪದವೀಧರ ಮತದಾರರು ಬಲಿಯಾಗುವುದಿಲ್ಲ

-ಎಸ್‌.ಪಿ.ದಿನೇಶ್‌

Ad Widget

Related posts

ಗುರಿಯಿದ್ದರೆ ಮಾತ್ರ ಯಶಸ್ಸು ಸಾಧ್ಯ :ಎಸ್.ಎನ್.ನಾಗರಾಜ್‌ , ಬಿ.ಆರ್‌.ಪಿ.ರಾಷ್ಟ್ರೀಯ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ

Malenadu Mirror Desk

ವಿಐಎಸ್‍ಎಲ್‍ನಲ್ಲಿ ವಾರದೊಳಗಾಗಿ ಆಕ್ಸಿಜನ್ ಉತ್ಪಾದನೆ ಆರಂಭಿಸಲು ಕ್ರಮ: ಸಚಿವ ಕೆ.ಎಸ್.ಈಶ್ವರಪ್ಪ

Malenadu Mirror Desk

ಕಚೇರಿ ಮುತ್ತಿಗೆ ಮುಂದಕ್ಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.